ADVERTISEMENT

ನೂರು ಕಿಲೊ ಮೀಟರ್‌ಗೊಂದು ವಿಮಾನ ನಿಲ್ದಾಣ: ಸಚಿವ ಮುರುಗೇಶ್ ನಿರಾಣಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 14:45 IST
Last Updated 17 ಮಾರ್ಚ್ 2023, 14:45 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಮೈಸೂರು: ‘ಪ್ರವಾಸೋದ್ಯಮ ಹಾಗೂ ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದಾಗಿ ರಾಜ್ಯದಲ್ಲಿ 100 ಕಿಲೋ ಮೀಟರ್‌ ವ್ಯಾಪ್ತಿಗೊಂದು ವಿಮಾನನಿಲ್ದಾಣ ನಿರ್ಮಿಸಲಾಗುವುದು’ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಹಾಸನ ಹಾಗೂ ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾರ್ಯ ಪ್ರಗತಿಯಲ್ಲಿದೆ. ದಾವಣಗೆರೆ, ಬಾದಾಮಿ, ಕೊಪ್ಪಳ, ರಾಯಚೂರು ಹಾಗೂ ಚಿಕ್ಕಮಗಳೂರಿನಲ್ಲೂ ಸ್ಥಾಪಿಸಲಾಗುವುದು’ ಎಂದರು.

‘ಕೇಂದ್ರದ ‘ಭಾರತ್ ಮಾಲಾ–2ನೇ ಯೋಜನೆ’ಯಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರ ಸಮಾವೇಶ ಯಶಸ್ವಿಯಾಗಿದ್ದು, ರಾಜ್ಯಕ್ಕೆ ₹ 9.89 ಲಕ್ಷ ಕೋಟಿ ಹೂಡಿಕೆಗೆ ಕಂಪನಿಗಳು ಮುಂದಾಗಿವೆ. ಈಗಾಗಲೇ ಒಡಂಬಡಿಕೆಯನ್ನೂ ಮಾಡಿಕೊಳ್ಳಲಾಗಿದೆ. ಇದೆಲ್ಲವೂ ಅನುಷ್ಠಾನಗೊಂಡರೆ 7 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಅಂತರರಾಷ್ಟ್ರೀಯ ಕಂಪನಿಗಳು ರಾಜ್ಯದ 2ನೇ ದರ್ಜೆ ನಗರಗಳಲ್ಲಿ ಹೆಚ್ಚು ಬಂಡವಾಳ ಹೂಡಲು ಮುಂದಾಗಿವೆ’ ಎಂದು ತಿಳಿಸಿದರು.

‘ಮೈಸೂರಿನಲ್ಲಿ ₹ 22,500 ಕೋಟಿ ಬಂಡವಾಳದಲ್ಲಿ ಸೆಮಿ–ಕಂಡಕ್ಟರ್ ಯೋಜನೆ ಆರಂಭಗೊಳ್ಳಲಿದೆ’ ಎಂದರು.

‘ಇತರ ರಾಜ್ಯಗಳಿಗಿಂತ ಕರ್ನಾಟಕಕ್ಕೆ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆದಾರರು ಬರುತ್ತಿದ್ದಾರೆ. ಆಯಾಯ ಜಿಲ್ಲೆಗಳಲ್ಲಿ ಸಿಗುವ ಕಚ್ಚಾ ಪದಾರ್ಥಗಳ ಅನುಗುಣವಾಗಿ ಅಲ್ಲಿ ಕಾರ್ಖಾನೆಗಳನ್ನು ತೆರೆಯಲಾಗುವುದು’ ಎಂದು ತಿಳಿಸಿದರು.

ಮನಸ್ತಾಪವಿಲ್ಲ: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹಾಗೂ ವಸತಿ ಸಚಿವ ವಿ.ಸೋಮಣ್ಣ ನಡುವೆ ಯಾವುದೇ ಮನಸ್ತಾಪವಿಲ್ಲ’ ಎಂದು ನಿರಾಣಿ ಹೇಳಿದರು.

‘ಸೋಮಣ್ಣ ಹಲವು ಬಾರಿ ದೆಹಲಿಗೆ ಹೋಗಿದ್ದಾರೆ. ನಾನೂ ಹೋಗುತ್ತೇನೆ, ಅದರಲ್ಲಿ ವಿಶೇಷವೇನಿದೆ? ಸಣ್ಣಪುಟ್ಟ ಸಮಸ್ಯೆ ಇದ್ದರೆ ನಮ್ಮ ನಾಯಕರು ನಿಮಿಷದಲ್ಲಿ ಬಗೆಹರಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.