ADVERTISEMENT

ಸಮಾಜದ ಕತ್ತಲೆ ನಿವಾರಣೆಗೆ ಸಾಹಿತ್ಯ ಬೆಳಕು: ಸಾಹಿತಿ ಸಿಪಿಕೆ ಅಭಿಮತ

ಸ್ವಾತಂತ್ರ್ಯ ಸಂಭ್ರಮ ಸಮಾರಂಭದಲ್ಲಿ ಸಾಹಿತಿ ಸಿಪಿಕೆ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 4:24 IST
Last Updated 24 ಸೆಪ್ಟೆಂಬರ್ 2024, 4:24 IST
ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಸಿ.ಪಿ.ಕೃಷ್ಣಕುಮಾರ್‌, ಟಿ.ಸತೀಶ್ ಜವರೇಗೌಡ, ಪ್ರೊ.ಕೆ.ಇ.ರಾಧಾಕೃಷ್ಣ ಅವರಿಗೆ ‘ಮಹಾತ್ಮಗಾಂಧಿ ಸದ್ಭಾವನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಡ್ಡೀಕೆರೆ ಗೋಪಾಲ್, ಗುಣವಂತ ಮಂಜು ಉಪಸ್ಥಿತರಿದ್ದರು
ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಸಿ.ಪಿ.ಕೃಷ್ಣಕುಮಾರ್‌, ಟಿ.ಸತೀಶ್ ಜವರೇಗೌಡ, ಪ್ರೊ.ಕೆ.ಇ.ರಾಧಾಕೃಷ್ಣ ಅವರಿಗೆ ‘ಮಹಾತ್ಮಗಾಂಧಿ ಸದ್ಭಾವನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಡ್ಡೀಕೆರೆ ಗೋಪಾಲ್, ಗುಣವಂತ ಮಂಜು ಉಪಸ್ಥಿತರಿದ್ದರು   

ಮೈಸೂರು: ‘ಸಮಾಜದ ಕತ್ತಲೆ ನಿವಾರಣೆಗೆ ಸಾಹಿತ್ಯ ಬೆಳಕಾಗಿದೆ’ ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಮತ್ತು ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ನಡೆದ ಸುಗಮ ಸಂಗೀತ, ಜಾನಪದ ಗೀತಗಾಯನ, ಭರತನಾಟ್ಯ ಪ್ರದರ್ಶನ ಮತ್ತು ‌ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ಸಮಕಾಲೀನ ಸಮಾಜಕ್ಕೆ ವಿವಿಧ ರೀತಿಯ ಕತ್ತಲೆ ಕವಿದಿದೆ. ಈ ಕತ್ತಲೆ ನಿರಸನಗೊಳಿಸುವ ಶಕ್ತಿಯಿರುವುದು ಸಾಹಿತ್ಯ ಮತ್ತು ಸಂಸ್ಕೃತಿಗೆ ಮಾತ್ರ. ಭಾರತೀಯ ಸಮಾಜದಲ್ಲಿ ಪ್ರಜಾಪ್ರಭುತ್ವದ ಮೂರು ಮಂತ್ರಗಳಾದ ಸ್ವಾತಂತ್ರ್ಯ, ಸಮಾನತೆ, ಸೋದರತೆ ಇನ್ನೂ ಬೇರೂರಿಲ್ಲ. ಈ ದಿಶೆಯಲ್ಲಿ ಮೊದಲು ಗಾಂಧೀಜಿಯ ಸರ್ವೋದಯದ ಸಾಕ್ಷತ್ಕಾರವಾಗಬೇಕು’ ಎಂದರು.

ADVERTISEMENT

ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮಾತನಾಡಿ, ‘ಭಾವೈಕ್ಯ ಬೆಸೆಯಬೇಕಾದ ಗಣೇಶೋತ್ಸವವು ಕೆಲವು ಕಿಡಿಗೇಡಿಗಳಿಂದ ಕೋಮು ಸಂಘರ್ಷಕ್ಕೆ ಮೂಲವಾಗುತ್ತಿರುವುದು ಆಘಾತಕಾರಿ ಬೆಳವಣಿಗೆ’ ಎಂದು ಹೇಳಿದರು.

ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಕೃಷ್ಣ ಮಾತನಾಡಿ, ‘ಕುವೆಂಪು ಆಶಯದಂತೆ ವಿಶ್ವಮಾನವರಾಗಬೇಕು. ಧರ್ಮ, ಜಾತಿ, ಪಂಥ ತೊಲಗಿಸಿ ಮನುಷ್ಯರನ್ನು ಪ್ರೀತಿಸುವ ವಾತಾವರಣ ನಿರ್ಮಿಸಬೇಕು. ಮುಂದಿನ ತಲೆಮಾರಿಗೂ ಪ್ರಕೃತಿ ಉಳಿಸಬೇಕು’ ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಡಾ.ಕೆ.ಬಿ.ರುದ್ರೇಶ್, ಡಾ.ಲೋಕೇಶ್, ಕವಿ ಗಣೇಶ್ ನಿಲುವಾಗಿಲು, ಎಸ್.ಪಿ.ಧರಣೇಶ್, ಸುಷ್ಮಾ ರಾಣಿ, ಕೆ.ಎಸ್.ಸತೀಶ್ ಕುಮಾರ್, ಆರ್.ವಸಂತ ಕುಮಾರ್, ಪಿ.ಚಿಕ್ಕಸಿದ್ದೇಗೌಡ ಅವರಿಗೆ ‘ಭಾರತ ಸೇವಾರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತೆ ಜಿ.ವೈ.ಪದ್ಮ ನಾಗರಾಜು, ಸಮಾಜ ಸೇವಕ ಗೋವಿಂದಹಳ್ಳಿ ಕೃಷ್ಣೇಗೌಡ, ನಾಟ್ಯ ಕಲಾವಿದರಾದ ನಿರೂಷಾ, ತನುಷಾ, ಪ್ರೊ.ಸಮತಾ ದೇಶಮಾನೆ, ಗುಣವಂತ ಮಂಜು, ವಿ.ಎಂ.ವರಲಕ್ಷ್ಮಿ ಇದ್ದರು.

ಶಾಂತಿ ಕದಡುವ ಪ್ರಯತ್ನ ನಿರಂತರ ಕಿಡಿಗೇಡಿಗಳಿಂದ ಕೋಮು ಸಂಘರ್ಷ ಕುವೆಂಪು ಆಶಯದಂತೆ ವಿಶ್ವಮಾನವರಾಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.