
ಮೈಸೂರು: ‘ಸಂಗೀತ ಮನಸ್ಸಿಗೆ ನೆಮ್ಮದಿ ನೀಡುವ ಮಹಾ ಕಲೆ. ಸಮಾಜದಲ್ಲಿ ಶಾಂತಿ ಪಸರಿಸಿ ಸೌಹಾರ್ದ ಮೂಡಿಸುವ ಸಾಧನ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಇಲ್ಲಿನ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಜೆಎಸ್ಎಸ್ ಸಂಗೀತ ಸಭಾ ಟ್ರಸ್ಟ್‌ನಿಂದ ಮಂಗಳವಾರ ನಡೆದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣೆಯ 30ನೇ ಸಂಗೀತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ಹಿಂಸೆ, ಅಶಾಂತಿ ವಾತಾವರಣ ಇಂದು ಎಲ್ಲೆಡೆ ಕಂಡುಬರುತ್ತಿದೆ. ಮನುಕುಲವನ್ನು ಒಗ್ಗೂಡಿಸುವ ಸಂಗೀತವು ವೈವಿಧ್ಯ ಭಾರತ, ಬಹುತ್ವ ಭಾರತವನ್ನು ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವೆಲ್ಲ ಮನುಷ್ಯರು ಎಂಬ ಭಾವನೆ ಜಾಗೃತಗೊಳಿಸುತ್ತದೆ. ಆರೋಗ್ಯ ಸುಧಾರಣೆಯಲ್ಲೂ ಸಂಗೀತ ಸಹಕಾರಿ’ ಎಂದರು.
‘ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದಲ್ಲೂ ಸಂಗೀತ ಹಾಸುಹೊಕ್ಕಾಗಿತ್ತು. ಗಾಂಧೀಜಿ ಪ್ರಾರ್ಥನೆ ಮೂಲಕ, ಅಂಬೇಡ್ಕರ್ ಪಿಟೀಲು ವಾದನ ಮೂಲಕ ಸಂವಾದ ನಡೆಸಿದ ಉದಾಹರಣೆಯಿದೆ. ಮೈಸೂರು ಅರಸರೂ ಸಂಗೀತ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಿದ್ದರು. ದೂರದೃಷ್ಟಿಯಿದ್ದ ಸುತ್ತೂರಿನ ರಾಜೇಂದ್ರ ಶ್ರೀಗಳೂ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿರುವುದು ಸ್ಮರಣೀಯ’ ಎಂದು ಹೇಳಿದರು.
‘ನಾದನಮನ’ ಸಂಚಿಕೆ ಬಿಡುಗಡೆ ಮಾಡಿದ ಶಾಸಕ ಟಿ.ಎಸ್.ಶ್ರೀವತ್ಸ, ‘ಸಂಗೀತ ಕ್ಷೇತ್ರದಲ್ಲಿ ಮೈಸೂರು ಬಹುದೊಡ್ಡ ಹೆಸರು. ಇಲ್ಲಿನ ಅರಮನೆ ಮುಂಭಾಗ ನಡೆಯುವ ದಸರಾ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹುತೇಕ ಕಲಾವಿದರ ಕನಸು. ದೇಶದ ಪ್ರಮುಖ ಕಲಾವಿದರು ನಗರದ ವಿವಿಧೆಡೆ ಕಾರ್ಯಕ್ರಮ ನೀಡಿದ್ದಾರೆ. ಜೆಎಸ್ಎಸ್ ಸಮ್ಮೇಳನವೂ ಇದಕ್ಕೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ’ ಎಂದರು.
ಲೇಖಕ ಎಸ್.ರಾಮಪ್ರಸಾದ್ ಅವರಿಗೆ ಸಂಗೀತ ಸೇವಾನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ ಉಪಸ್ಥಿತರಿದ್ದರು.
‘ಪ್ರಯೋಗಶೀಲರಾಗಿ ಕಲೆ ಬೆಳೆಸಿ’
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಲೇಖಕಿ ಟಿ.ಎಸ್.ಸತ್ಯವತಿ ‘ಯಾವುದೇ ಕಲಾ ಪ್ರಕಾರವನ್ನು ಆಳವಾಗಿ ಅಧ್ಯಯನ ಮಾಡಬೇಕು. ಇತರ ಕಲೆಗಳ ಬಗ್ಗೆಯೂ ಮಾಹಿತಿ ಪಡೆದು ತಾವು ಕಲಿತ ಕ್ಷೇತ್ರದಲ್ಲಿ ಪ್ರಯೋಗ ಮಾಡಬೇಕು. ಕಲೆಗೆ ಧಕ್ಕೆಯಾಗದಂತೆ ಬೆಳೆಸಬೇಕು’ ಎಂದು ಹೇಳಿದರು.
‘ಸಾಹಿತ್ಯದಲ್ಲೂ ಹಳೆ ಬೇರು ಹೊಸ ಚಿಗುರಿನ ಸಮ್ಮಿಲನ ಅಗತ್ಯ. ಆಧ್ಯಾತ್ಮಿಕ ಉನ್ನತಿಗೆ ಸಹಕರಿಸುವ ಸಾಹಿತ್ಯವನ್ನು ಅದರ ಎಲ್ಲಾ ಆಯಾಮದ ಅರ್ಥವ್ಯಾಪ್ತಿಯನ್ನು ವಿಮರ್ಶಿಸುತ್ತಲೇ ಅಭಿವೃದ್ಧಿ ಕಾಣಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.