ಮೈಸೂರು: ಕರ್ನಾಟಕ ರಾಜ್ಯ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ 16 ವರ್ಷಗಳ ನಂತರ ಸ್ವಂತ ಕಟ್ಟಡವನ್ನು ಹೊಂದುತ್ತಿದೆ.
ತಾಲ್ಲೂಕಿನ ನಾಡನಹಳ್ಳಿಯಲ್ಲಿ 5.5 ಎಕರೆ ನಿವೇಶನದಲ್ಲಿ ‘ಕುಟೀರ’ಗಳನ್ನು ನಿರ್ಮಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಿಂದ ಅಲ್ಲಿಯೇ ತರಗತಿಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸಂಗೀತ ಮತ್ತು ಪ್ರದರ್ಶಕ ಕಲೆಗಳ ಎ ಶಾಖೆಗಳಲ್ಲಿನ ಕಲಿಕೆಯ ಮುನ್ನಡೆ ಸಾಧಿಸುವುದು, ಸಂಶೋಧನೆ, ದಾಖಲೀಕರಣ, ಧ್ವನಿ ಮತ್ತು ದೃಶ್ಯ ರೆಕಾರ್ಡಿಂಗ್‌ಗಳ ಪ್ರಕಟಣೆ ಉದ್ದೇಶದಿಂದ 2008–09ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ವಿ.ವಿ ಸದ್ಯ ಲಕ್ಷ್ಮೀಪುರಂನ ಸರ್ಕಾರಿ ಶಾಲೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ನಾಡನಹಳ್ಳಿಯಲ್ಲಿ ಮುಡಾದಿಂದ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸಿಕ್ಕಿರುವ ನಿವೇಶನದಲ್ಲಿ ವಿಶ್ವವಿದ್ಯಾಲಯ ಮೈದಳೆದಿದೆ.
ಇಲ್ಲಿ ಗುರುಕುಲ ಪದ್ಧತಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಕುಟೀರಗಳನ್ನು ನಿರ್ಮಿಸಲಾಗಿದೆ.
ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲದಿಂದ ಖರ್ಚು ಭರಿಸುತ್ತಿದ್ದು, ಈವರೆಗೆ ₹4.80 ಕೋಟಿ ವ್ಯಯಿಸಿದೆ. ಪ್ರಾಯೋಗಿಕ ತರಗತಿಗಳಿಗೆ 8 ಕುಟೀರಗಳು, ಥಿಯರಿ ತರಗತಿಗಾಗಿ 4 ಕೊಠಡಿ, (ಸೆಮಿನಾರ್ ಹಾಲ್), ಶೌಚಾಲಯ ನಿರ್ಮಿಸಲಾಗಿದೆ.
ಈ ವಿಶ್ವವಿದ್ಯಾಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆಂದು ಹಲವು ಕಡೆಗಳಲ್ಲಿ ಜಾಗ ಗುರುತಿಸಲಾಗಿತ್ತು. ಆದರೆ, ನಾನಾ ಕಾರಣಗಳಿಂದ ಅವು ದಕ್ಕಿರಲಿಲ್ಲ ಈಗ, ನಾಡನಹಳ್ಳಿಯಲ್ಲಿ ಕ್ಯಾಂಪಸ್ ಸಿದ್ಧವಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ನಾಗೇಶ್ ಬೆಟ್ಟಕೋಟೆ, ‘2025–26ನೇ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳನ್ನು ನಾಡನಹಳ್ಳಿ ಕ್ಯಾಂಪಸ್‌ನಲ್ಲೇ ನಡೆಸಲಾಗುವುದು’ ಎಂದರು.
ಸದ್ಯ ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಕ್ಯಾಂಪಸ್ ಅಭಿವೃದ್ಧಿಯನ್ನೂ ಆಂತರಿಕ ಸಂಪನ್ಮೂಲದಿಂದ ಕೈಗೊಳ್ಳಲಾಗಿತ್ತು. ಹೊಸ ಕ್ಯಾಂಪಸ್‌ನಿಂದ ಸ್ವಂತ ನೆಲೆ ದೊರೆತಂತಾಗಿದೆಪ್ರೊ.ನಾಗೇಶ್ ವಿ.ಬೆಟ್ಟಕೋಟೆ ,ಕುಲಪತಿ ಸಂಗೀತ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.