
ಮೈಸೂರು: ಇಲ್ಲಿನ ‘ಮೈಮುಲ್’ (ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ) ನೂತನ ಅಧ್ಯಕ್ಷರಾಗಿ ಕೆ.ಈರೇಗೌಡ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಇದರೊಂದಿಗೆ, ಈ ಸ್ಥಾನ ಎಚ್.ಡಿ. ಕೋಟೆ ತಾಲ್ಲೂಕಿಗೆ ಇದೇ ಮೊದಲ ಬಾರಿಗೆ ದೊರೆತಂತಾಗಿದೆ.
ಬನ್ನೂರು ರಸ್ತೆಯಲ್ಲಿರುವ ಮೆಗಾ ಡೈರಿ ಆಡಳಿತ ಮಂಡಳಿ ಸಭಾಂಗಣದಲ್ಲಿ ಪ್ರಕ್ರಿಯೆ ನಡೆಯಿತು. ಒಂದೇ ನಾಮಪತ್ರ ಸಲ್ಲಿಕೆ ಯಾಗಿದ್ದರಿಂದ, ಚುನಾವಣಾಧಿಕಾರಿಯಾಗಿದ್ದ ಲೆಕ್ಕಪರಿಶೀಧನಾ ಜಂಟಿ ನಿರ್ದೇಶಕ ಶ್ರೀಧರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ತಿ.ನರಸೀಪುರದ ಆರ್. ಚೆಲುವರಾಜು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ನಡುವೆ ಆಗಿತ್ತು ಎನ್ನಲಾದ ‘ಅಧಿಕಾರ ಹಂಚಿಕೆ ಸೂತ್ರ’ದ ಪ್ರಕಾರ ಅವಿರೋಧ ಆಯ್ಕೆ ಸುಗಮವಾಗಿ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ನಿರ್ದೇಶಕರ ಸಭೆ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಈರೇಗೌಡ ಅವರನ್ನು ಬೆಂಬಲಿಸಬೇಕು ಎಂದು ಸೂಚಿಸಿದ್ದರು. ತಮ್ಮ ತಾಲ್ಲೂಕಿನ ನಿರ್ದೇಶಕರಿಗೆ ಸ್ಥಾನ ದೊರಕಿಸಿಕೊಡಲು ಶಾಸಕ ಅನಿಲ್ ಚಿಕ್ಕಮಾದು ಸಾಕಷ್ಟು ಶ್ರಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲ ನಿರ್ದೇಶಕರೂ ಹಾಜರಿದ್ದುದು ಗಮನಸೆಳೆಯಿತು. ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಆರ್.ಚೆಲುವರಾಜು, ಎ.ಟಿ.ಸೋಮಶೇಖರ್, ಕೆ.ಜಿ.ಮಹೇಶ್, ಪಿ.ಎಂ.ಪ್ರಸನ್ನ, ಸಿ.ಓಂಪ್ರಕಾಶ್, ಕೆ.ಉಮಾಶಂಕರ್, ನಿರ್ದೇಶಕರಾದ ಕೆ.ಈರೇಗೌಡ, ಕೆ.ಎಸ್.ಕುಮಾರ್, ದ್ರಾಕ್ಷಾಯಿಣಿ, ಬಿ.ಕೆ.ಲೀಲಾ, ನೀಲಾಂಬಿಕೆ ಮಹೇಶ್ ಕುರುಹಟ್ಟಿ, ಎ.ಶಿವಗಾಮಿ, ಬಿ.ಎನ್.ಸದಾನಂದ, ನಾಮನಿರ್ದೇಶನ ಸದಸ್ಯರಾದ ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ, ಸರ್ಕಾರದ ಪ್ರತಿನಿಧಿಗಳಾಗಿರುವ ಸಹಕಾರ ಸಂಘಗಳ ಜಂಟಿ ನಿಬಂಧಕ ಸಿ.ಪ್ರಸಾದ್ ರೆಡ್ಡಿ, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ನಾಗರಾಜು, ಕೆಎಂಎಫ್ ಪ್ರತಿನಿಧಿ ಎಂ.ಕೃಷ್ಣಪ್ಪ, ಎನ್‌ಡಿಎಬಿ ಪ್ರತಿನಿಧಿಯಾದ ನಿಧಿ ನೇಗಿ ಪಾಲ್ಗೊಂಡಿದ್ದರು.
ನೂತನ ಅಧ್ಯಕ್ಷರನ್ನು ಚುನಾವಣಾಧಿಕಾರಿ ಶ್ರೀಧರ್ ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್‌ನಾಯಕ್ ಹೂಗುಚ್ಛ ನೀಡಿ ಅಭಿನಂದಿಸಿದರು.
ಆಯ್ಕೆಯಾದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುತ್ತಿದ್ದಂತೆಯೇ, ಹೊರಗೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಎಚ್.ಡಿ.ಕೋಟೆ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಬಂದಿದ್ದ ಮುಖಂಡರು, ಕಾರ್ಯಕರ್ತರು ಈರೇಗೌಡ ಅವರನ್ನು ಅಭಿನಂದಿಸಿದರು.
ನೂತನ ಅಧ್ಯಕ್ಷರ ಅಧಿಕಾರದ ಅವಧಿ ಮುಂದಿನ ವರ್ಷ ಮಾರ್ಚ್ ಅಂತ್ಯದವರೆಗೆ ಇದೆ.
4ನೇ ಬಾರಿಗೆ ನಿರ್ದೇಶಕ ಆಗಿದ್ದೇನೆ. ಈ ಹಿಂದೆ ಅಧ್ಯಕ್ಷ ಸ್ಥಾನ ಕೊನೆಯ ಕ್ಷಣದಲ್ಲಿ ಕೈತಪ್ಪಿತ್ತು.– ಕೆ.ಈರೇಗೌಡ, ಅಧ್ಯಕ್ಷ ಮೈಮುಲ್
‘ಹೈನುಗಾರರ ಅನುಕೂಲಕ್ಕೆ ಕ್ರಮ’
ಮೈಸೂರು: ‘ಒಕ್ಕೂಟವನ್ನು ರಾಜ್ಯದಲ್ಲೇ ಮಾದರಿಯನ್ನಾಗಿ ಮುಂಚೂಣಿಗೆ ತರಲು ಹೊಸ ಯೋಜನೆಗಳನ್ನು ರೂಪಿಸಲಾಗುವುದು. ಮತ್ತಷ್ಟು ಅಭಿವೃದ್ಧಿಪಡಿಸಲು ಶ್ರಮಿಸಲಾಗುವುದು’ ಎಂದು ಅಧ್ಯಕ್ಷ ಕೆ.ಈರೇಗೌಡ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ‘ನಾನು ಆಯ್ಕೆಯಾಗಲು ಕಾರಣವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕ ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಆಭಾರಿಯಾಗಿದ್ದೇನೆ. ಅವರ ಸಲಹೆಯಂತೆ ನಿರ್ದೇಶಕರು ಅವಿರೋಧ ಆಯ್ಕಗೆ ಸಹಕರಿಸಿದರು. ಇದರಿಂದ ಸಂತೋಷವಾಗಿದೆ’ ಎಂದು ಹೇಳಿದರು.
‘ಹೈನುಗಾರರು ಹಾಗೂ ರೈತರ ಹಿತ ಕಾಪಾಡಲು ಮೊದಲ ಆದ್ಯತೆ ನೀಡಲಾಗುವುದು. ಉತ್ಪಾದಕರಿಗೆ ಯಾವ ರೀತಿಯಲ್ಲಿ ನೆರವಾಗಬಹುದು ಎಂಬ ಬಗ್ಗೆ ಯೋಚಿಸಿ ಅನುಷ್ಠಾನಕ್ಕೆ ತರಲಾಗುವುದು’ ಎಂದು ತಿಳಿಸಿದರು.
‘ಇದೇ ಮೊದಲ ಬಾರಿಗೆ ಎಚ್.ಡಿ. ಕೋಟೆ ತಾಲ್ಲೂಕಿಗೆ ಅವಕಾಶ ಸಿಕ್ಕಿದೆ. ಆತ್ಯಂತ ಹಿಂದುಳಿದ ಕಾರಣದಿಂದ ತಾಲ್ಲೂಕಿನಲ್ಲಿ ಹೈನುಗಾರಿಕೆ ಬೆಳೆದಿರಲಿಲ್ಲ. 19 ಸಂಘಗಳಿದ್ದ ಸಂಘಗಳ ಸಂಖ್ಯೆ ಈಗ 186ಕ್ಕೆ ಏರಿದೆ’ ಎಂದರು.
‘ಒಕ್ಕೂಟದಲ್ಲಿ ಪನ್ನೀರ್ ತಯಾರಿಕೆ ಹಾಗೂ ಹಾಲು ಶೇಖರಣಾ ಘಟಕ ಸ್ಥಾಪನೆ ಪ್ರಕ್ರಿಯೆಯಲ್ಲಿದೆ. ಇದನ್ನು ಉದ್ಘಾಟಿಸುವವರೆಗೂ ನನಗೆ ಅವಕಾಶ ಕೊಡುವಂತೆ ಮುಖ್ಯಮಂತ್ರಿ ಅವರಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.