
ಮೈಸೂರು: ‘ಹೋಟೆಲ್ ಮಾಲೀಕರು ನಂದಿನಿ ಉತ್ಪನ್ನಗಳನ್ನು ಹೆಚ್ಚು ಬಳಸುವ ಮೂಲಕ ರೈತರ ಹೈನೋದ್ಯಮವನ್ನು ಪ್ರೋತ್ಸಾಹಿಸಿ’ ಎಂದು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಈರೇಗೌಡ ಕೋರಿದರು.
ಒಕ್ಕೂಟದ ಡಾ. ವರ್ಗೀಸ್ ಕುರಿಯನ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು ಹೋಟೆಲ್ ಮಾಲೀಕರ ಜೊತೆಗಿನ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಇಂದು ಮಾರುಕಟ್ಟೆಯಲ್ಲಿ ನಕಲಿ ಹಾಲು, ತುಪ್ಪ ಹಾಗೂ ಪನ್ನೀರಿನ ಮಾರಾಟ ನಡೆದಿದೆ. ಆದರೆ ನಂದಿನಿ ಉತ್ಪನ್ನ ಪರಿಶುದ್ಧತೆಗೆ ಹೆಸರಾಗಿದೆ. ರೈತರಿಂದ ಹಾಲನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ಪಡೆದು ನೇರವಾಗಿ ಮಾರಾಟ ಮಾಡಲಾಗುತ್ತಿದೆ’ ಎಂದು ವಿವರಿಸಿದರು.
‘ನಂದಿನಿ ಉತ್ಪನ್ನಗಳ ದರ ಕೊಂಚ ಹೆಚ್ಚಿದ್ದರೂ ಗುಣಮಟ್ಟದಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ನಂದಿನಿ ಬಳಸಿ’ ಎಂದರು.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ‘ನಂದಿನಿ ಉತ್ಪನ್ನಗಳು ಶ್ರೇಷ್ಠವಾಗಿದ್ದು, ಮೈಸೂರಿನ ಒಕ್ಕೂಟದಿಂದ ಪರಿಶುದ್ಧವಾದ ಉತ್ಪನ್ನ ಸಿಗಲಿದೆ. ನಾವು ನಂದಿನಿ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸುತ್ತಿದ್ದೇವೆ. ಈಗ ಹೋಟೆಲ್ ಮಾಲೀಕರು ಏಜೆನ್ಸಿ ಸಹ ಪಡೆದು ನೇರವಾಗಿ ಕೊಳ್ಳಬಹುದಾಗಿದೆ’ ಎಂದರು.
ಮೈಮುಲ್ ನಿರ್ದೇಶಕ ಓಂಪ್ರಕಾಶ್ ‘ಸಹಕಾರ ತತ್ವದಡಿಯಲ್ಲಿ ನಂದಿನಿ ನಡೆಯುತ್ತಿದ್ದು, 500ಎಂಎಲ್ ನಿಂದ 500 ಲೀಟರ್‌ವರೆಗೂ ಹಾಲು ನೀಡುವವರು ನಮ್ಮ ಸೊಸೈಟಿಯಲ್ಲಿದ್ದಾರೆ. ಈಚಿನ ದಿನಗಳಲ್ಲಿ ಎಚ್ಎಫ್ ಹಸುಗಳ ವ್ಯಾಮೋಹದಿಂದ ಹೈನೋದ್ಯಮ ಹೇರಳವಾಗಿ ಬೆಳೆಯುತ್ತಿದೆ. ಪ್ರತಿಯೊಬ್ಬರೂ ರೈತ ಸಂಸ್ಥೆಗಳನ್ನು ಬೆಳೆಸಲು ಪ್ರೋತ್ಸಾಹಿಸಿ’ ಎಂದು ಕೋರಿದರು.
ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್‌ನಾಯ್ಕ್ ‘ಪನ್ನೀರು, ಬೆಣ್ಣೆ, ಹಾಲು, ತುಪ್ಪ ಮೊದಲಾದ ಉತ್ಪನ್ನಗಳನ್ನು ನಿಮಗೆ ಬೇಡಿಕೆ ಅನುಗುಣವಾಗಿ ಸರಬರಾಜು ಮಾಡಲು ಸಿದ್ಧರಿದ್ದೇವೆ. ಮೈಮುಲ್ ಸದಾ ಹೋಟೆಲ್ ಉದ್ಯಮಿಗಳ ಸಲಹೆ, ಸಹಕಾರಕ್ಕೆ ಬದ್ಧರಾಗಿ ಕೆಲಸ ನಿರ್ವಹಿಸುತ್ತೇವೆ’ ಎಂದು ಆಶ್ವಾಸನೆ ನೀಡಿದರು.
ಹೋಟೆಲ್ ಮಾಲೀಕರ ಸಂಘದ ಸತೀಶ್, ರವಿಶಾಸ್ತ್ರಿ, ಗೋವಿಂದೇಗೌಡ, ಮೈಮುಲ್ ನಿರ್ದೇಶಕ ಸದಾನಂದ ಮಾತನಾಡಿದರು. ನಿರ್ದೇಶಕರಾದ ಎ.ಟಿ. ಸೋಮಶೇಖರ, ಕೆ.ಜಿ. ಮಹೇಶ್, ಕೆ.ಉಮಾಶಂಕರ್, ಸಿ.ಓಂ. ಪ್ರಕಾಶ್, ಪಿ.ಎಂ. ಪ್ರಸನ್ನ, ಆರ್.ಚೆಲುವರಾಜು, ಕೆ.ಎಸ್. ಕುಮಾರ್, ದಾಕ್ಷಾಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ.ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್.ಸದಾನಂದ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್ ಉಪಸ್ಥಿತರಿದ್ದರು.
ಡೇರಿ ವೀಕ್ಷಣೆ: 200ಕ್ಕೂ ಹೆಚ್ಚು ಹೋಟೆಲ್ ಉದ್ಯಮಿಗಳು ಮೈಮುಲ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದರು. ಈ ವೇಳೆ ಹಾಲಿನ ಕೋಲ್ಡ್ ಸ್ಟೋರೆಜ್ ಬರ್ಫಿ ಪನ್ನೀರ್ ಹಾಲು ಮೈಸೂರು ಪಾಕ್ ತಯಾರಿಕೆ ಪ್ಯಾಕಿಂಗ್ ಮೊದಲಾದವುಗಳನ್ನು ಕೂತೂಹಲದಿಂದ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ನಂದಿನಿ ಉತ್ಪನ್ನಗಳ ಉತ್ಪಾದನೆ ಹಾಗೂ ಪ್ಯಾಕಿಂಗ್‌ನ ಪ್ರತಿ ಹಂತದಲ್ಲಿಯೂ ಕೈಗೊಳ್ಳುವ ಸ್ವಚ್ಛತೆ ವೈಜ್ಞಾನಿಕ ತಾಂತ್ರಿಕ ಖಾತರಿಯನ್ನು ಮನಗಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.