ADVERTISEMENT

ಮೈಮುಲ್‌ ಚುನಾವಣೆ: ಎಚ್‌ಡಿಕೆ ಬಣಕ್ಕೆ ಹಿನ್ನಡೆ, ಜಿಟಿಡಿ ಬಣಕ್ಕೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 20:54 IST
Last Updated 16 ಮಾರ್ಚ್ 2021, 20:54 IST
ಜಿ.ಟಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ
ಜಿ.ಟಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ   

ಮೈಸೂರು: ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ (ಮೈಮುಲ್‌) ಚುನಾವಣೆಯಲ್ಲಿ, ಶಾಸಕ ಜಿ.ಟಿ.ದೇವೇಗೌಡ ಬಣ ಭರ್ಜರಿ ಜಯಭೇರಿ ಮೊಳಗಿಸಿದೆ.

ಮೈಮುಲ್‌ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ, 12 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಸಾ.ರಾ.ಮಹೇಶ್‌ ಬಣಕ್ಕೆ ಕೇವಲ ಮೂರು ಸ್ಥಾನ ಲಭಿಸಿದ್ದು, ಭಾರಿ ಮುಖಭಂಗ ಅನುಭವಿಸಿದೆ.

ಇದರೊಂದಿಗೆ ಜಿ.ಡಿ.ದೇವೇಗೌಡರ ಬಣ ಮತ್ತೆ ಐದು ವರ್ಷಗಳ ಅವಧಿಗೆ ಮೈಮುಲ್‌ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಚ್ಚಳವಾಗಿದೆ.

ADVERTISEMENT

ಸಹಕಾರ ಕ್ಷೇತ್ರದಲ್ಲಿ ಮೈಸೂರು ಜಿಲ್ಲೆಯಲ್ಲಿ ಜಿ.ಟಿ.ದೇವೇಗೌಡರು ಹೊಂದಿರುವ ಪ್ರಾಬಲ್ಯವನ್ನು ಅಂತ್ಯಗೊಳಿಸಲು, ಕುಮಾರಸ್ವಾಮಿ ಅವರೇ ತಾಲ್ಲೂಕು ಕೇಂದ್ರಗಳಿಗೆ ತೆರಳಿ ಪ್ರಚಾರದಲ್ಲಿ ತೊಡಗಿದ್ದರು.

ಆದರೆ, ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನ ಸ್ಥಳೀಯ ಮುಖಂಡರ ಜೊತೆ ಹೊಂದಾಣಿಕೆ ಮಾಡಿಕೊಂಡ ಜಿ.ಟಿ.ದೇವೇಗೌಡ ಹಾಗೂ ಅವರ ಪುತ್ರ, ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ ಜಿ.ಡಿ. ಹರೀಶ್‌ಗೌಡ ಪ್ರತಿದಾಳ ಉರುಳಿಸಿದರು.

ಸಹಕಾರ ಕ್ಷೇತ್ರದ ಈ ಚುನಾವಣೆಯು ಯಾವುದೇ ಪಕ್ಷದ ಚಿಹ್ನೆಯ ಮೇಲೆ ನಡೆಯುವುದಿಲ್ಲ. ಆದರೆ, ಪಿರಿಯಾಪಟ್ಟಣದಲ್ಲಿ ಜೆಡಿಎಸ್‌ ಶಾಸಕ ಕೆ.ಮಹದೇವ್‌, ಹುಣಸೂರಿನಲ್ಲಿ ಕಾಂಗ್ರೆಸ್‌ ಶಾಸಕ ಎಚ್‌.ಪಿ.ಮಂಜುನಾಥ್‌, ಎಚ್‌.ಡಿ.ಕೋಟೆಯಲ್ಲಿ ಕಾಂಗ್ರೆಸ್‌ ಶಾಸಕ ಅನಿಲ್‌ ಕುಮಾರ್‌ ಸಹಕಾರದೊಂದಿಗೆ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಸಿದ್ದರಾಮಯ್ಯ ಅವರ ಪರೋಕ್ಷ ಬೆಂಬಲವೂ ಇತ್ತು. ಜೊತೆಗೆ ಕೆ.ಆರ್‌.ನಗರದಲ್ಲಿ ಸಾ.ರಾ.ಮಹೇಶ್‌ ಬೆಂಬಲಿಗ ಎ.ಟಿ.ಸೋಮಶೇಖರ್‌ ಅವರನ್ನೇ ಸೆಳೆದು ಕಣಕ್ಕಿಳಿಸಿದ್ದರು.

ಆಘಾತ: ಹಿಂದಿನ ಅಧ್ಯಕ್ಷ ಸಿದ್ದೇಗೌಡ ಹಾಗೂ ಮಾಜಿ ಶಾಸಕಿ, ಬಿಜೆಪಿಯ ಸುನೀತಾ ವೀರಪ್ಪಗೌಡ ಸೋಲು ಕಂಡಿದ್ದು, ದೇವೇಗೌಡರ ಬಣಕ್ಕೆ ಉಂಟಾದ ಏಕೈಕ ಹಿನ್ನಡೆಯಾಗಿದೆ. ಶಾಸಕ ಕೆ.ಮಹದೇವ್‌ ಪುತ್ರ ಪಿ.ಎಂ.ಪ್ರಸನ್ನ ಗೆದ್ದಿದ್ದಾರೆ.

ಕುಮಾರಸ್ವಾಮಿ ಬಣದೊಂದಿಗೆ ಗುರುತಿಸಿಕೊಂಡಿದ್ದ, ಎಚ್‌.ಡಿ.ರೇವಣ್ಣ ಅವರ ಬಾವ ಎಸ್‌.ಕೆ.ಮಧುಚಂದ್ರ ಸೋಲು ಕಂಡಿದ್ದು, ಭಾವುಕರಾಗಿ ಮತ ಎಣಿಕೆ ಕೇಂದ್ರದಿಂದ ಹೊರನಡೆದರು.

ಜಿಟಿಡಿ ಬಣ–12; ಎಚ್‌ಡಿಕೆ ಬಣ–3 ಸ್ಥಾನಗಳಲ್ಲಿ ಗೆಲುವು

ಹಿಂದಿನ ಅಧ್ಯಕ್ಷ ಸಿದ್ದೇಗೌಡಗೆ ಸೋಲು

15 ಸ್ಥಾನಗಳಿಗೆ 29 ಮಂದಿ ಸ್ಪರ್ಧೆ

* ಕುಮಾರಸ್ವಾಮಿ ಮೈಸೂರಿಗೆ ಬಂದು ಪ್ರಚಾರ ನಡೆಸಿದ್ದು ಬೇಸರ ತಂದಿದೆ. ಅವರು ನನ್ನನ್ನು ಮುಗಿಸಲು ಪ್ರಯತ್ನಿಸಿದರೂ ನಾನು ಬೆಳೆಸಿದ ಹುಡುಗರನ್ನು ಮುಟ್ಟಲಾಗದು

- ಜಿ.ಟಿ.ದೇವೇಗೌಡ,‌ ಜೆಡಿಎಸ್‌ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.