
ನಾಗರ ಹಾವು
ಮೈಸೂರು: ಜಿಲ್ಲೆಯಲ್ಲಿ ಹಾವು ಕಡಿತಕ್ಕೆ ಒಳಗಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಕಳೆದ ಮೂರು ವರ್ಷದಲ್ಲಿ 7 ಮಂದಿ ಜೀವ ಕಳೆದುಕೊಂಡಿದ್ದಾರೆ.
2023ರಿಂದ ಈವರೆಗೆ ಜಿಲ್ಲೆಯಲ್ಲಿ 1,735 ಹಾವು ಕಡಿತ ಪ್ರಕರಣಗಳು ವರದಿಯಾಗಿವೆ. ಬಹಳಷ್ಟು ಪ್ರಕರಣಗಳಲ್ಲಿ ಹಾವಿನ ಕಡಿತಕ್ಕೆ ಒಳಗಾದ ವ್ಯಕ್ತಿಯ ನಿರ್ಲಕ್ಷ್ಯ ಹಾಗೂ ನಾಟಿ ಔಷಧದ ಮೊರೆ ಹೋಗುವುದು ಮೊದಲಾದ ಕಾರಣಗಳಿಂದ ಸಾವು ಸಂಭವಿಸುತ್ತಿದೆ ಎನ್ನುತ್ತಾರೆ ವೈದ್ಯರು.
ಹಾವು ಕಚ್ಚಿದ ಮೊದಲ ಅರ್ಧ ಗಂಟೆಯ ಸಮಯ ‘ಗೋಲ್ಡನ್ ಅವರ್’ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿದರೆ ತಕ್ಷಣ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೆ. ಇದರಿಂದ ಹಾವು ಕಚ್ಚಿದ ವ್ಯಕ್ತಿಯ ಜೀವ ಉಳಿಸಬಹುದು. ಇಂತಹ ಜೀವ ಉಳಿಸಲು ಆಸ್ಪತ್ರೆಗಳಲ್ಲಿ ‘ಆಂಟಿವೆನಮ್ ಇಂಜೆಕ್ಷನ್’ ಶೇಖರಿಸಿಡಲಾಗುತ್ತದೆ.
ನ್ಯೂರೋಟಾಕ್ಸಿಕ್ ವೆನಮ್: ನಾಗರ ಹಾವು, ಕಟ್ಟು ಹಾವು, ಕೊಳಕುಮಂಡಲ ಮೊದಲಾದ ಜಾತಿಯ ಹಾವುಗಳ ವಿಷ ನೇರವಾಗಿ ಮಾನವನ ನರವ್ಯೂಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಣ್ಣು ಮಂಜಾಗುವುದು, ತಲೆ ಸುತ್ತು, ನಾಲಗೆ ತೊದಲುವುದು, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.
ಸೂಕ್ತ ಸಮಯದೊಳಗೆ ಚಿಕಿತ್ಸೆ ದೊರೆಯದೆ ಇದ್ದಲ್ಲಿ ಪಾರ್ಶ್ವವಾಯು ಸಂಭವಿಸಬಹುದು. ಇಲ್ಲವೇ, ಪ್ರಾಣ ಹೋಗಬಹುದು.
ಹೀಮೋಟಾಕ್ಸಿಕ್ ವೆನಮ್: ಕೇರೆ ಹಾವು, ಹಪ್ಪಟೆ ಹಾವು ಜಾತಿಗೆ ಸೇರಿದ ಮೊದಲಾದ ಹಾವುಗಳ ವಿಷದ ತೀವ್ರತೆ ಕಡಿಮೆ. ಕಚ್ಚಿದ ಜಾಗದಲ್ಲಿ ತೀವ್ರ ಉರಿ, ಊತ, ನೋವು ಹರಡುತ್ತದೆ. ಈ ಹಾವುಗಳ ವಿಷ ಮಾನವನ ರಕ್ತಪರಿಚಲನೆ ಹಾಗೂ ಹೃದಯದ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತದೆ. ಅದರಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಇದೆ.
‘ದೇಶದಲ್ಲಿ ಶೇ 60ಕ್ಕಿಂತ ಹೆಚ್ಚು ವಿಷರಹಿತ ಹಾವುಗಳು ಇವೆ. ಇವುಗಳ ವಿಷ ಕೇವಲ ಅವುಗಳ ಆಹಾರದ ಬೇಟೆಗೆ ಮಾತ್ರ ಸೀಮಿತವಾಗಿರುತ್ತದೆ. ಮನುಷ್ಯನ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ನಾಟಿ ವೈದ್ಯರ ಮೊರೆ ಹೋಗುತ್ತಾರೆ. ಆ ಸಮಯದಲ್ಲಿ ನಾಟಿ ವೈದ್ಯರಿಂದಲೇ ಹಾವಿನ ವಿಷ ಇಳಿದಿದೆ ಎಂದು ಭಾವಿಸುತ್ತಾರೆ. ಇದನ್ನೆ ಎಲ್ಲ ರೀತಿಯ ಹಾವುಗಳ ಕಡಿತಕ್ಕೆ ಅನ್ವಯ ಮಾಡಿಕೊಂಡು ವಿಷಪೂರಿತ ಹಾವು ಕಚ್ಚಿದ ಸಮಯದಲ್ಲಿಯೂ ನಾಟಿ ವೈದ್ಯರ ಮೊರೆ ಹೋಗುವುದರಿಂದ ಸಾವು ಸಂಭವ ಹೆಚ್ಚು’ ಎನ್ನುತ್ತಾರೆ ತಜ್ಞ ವೈದ್ಯರು.
ಮುಂಜಾಗ್ರತೆ ಅಗತ್ಯ: ಗ್ರಾಮೀಣ ಭಾಗದಲ್ಲಿ ರೈತರು ಹೊಲಗದ್ದೆಗಳಲ್ಲಿ ರಾತ್ರಿ ಸಮಯದಲ್ಲಿ ಕೆಲಸ ಮಾಡುವಾಗ ಗಮ್ ಬೂಟ್ಸ್ ಧರಿಸಬೇಕು. ಉದ್ದನೆಯ ಕೋಲು, ಟಾರ್ಚ್ ಜೊತೆಗೆ ತೆಗೆದುಕೊಂಡು ಹೋಗಬೇಕು. ಹಳ್ಳಿಗಳಲ್ಲಿ ಹೊರಗೆ ಹಾಕಿದ ಅಡುಗೆ ಮನೆ ಬೂದಿ, ಕೊಟ್ಟಿಗೆ, ಬಣವೆ, ಗಿಡಗಂಟಿಗಳ ನಡುವೆ ಕೈಹಾಕುವ ಮೊದಲು ಕೋಲಿನಿಂದ ಅಲುಗಾಡಿಸಿ ನಂತರ ಕೈ ಹಾಕಬೇಕು. ಇದರಿಂದ ಹಾವುಗಳಿದ್ದಲ್ಲಿ ತಕ್ಷಣ ಎಚ್ಚೆತ್ತುಕೊಳ್ಳಬಹುದು ಎನ್ನುವುದು ತಜ್ಞರ ಕಿವಿಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.