ADVERTISEMENT

ಮೈಸೂರು: ಪ್ರಾಚೀನ ಕಲಾಕೃತಿಯ ಕಳವು ಆರೋಪ; ಮರಳು ಶಿಲ್ಪ ಕಲಾವಿದೆ ಗೌರಿ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 8:26 IST
Last Updated 2 ಜುಲೈ 2020, 8:26 IST
ಕಳುವಾಗಿದ್ದ ಪ್ರಾಚೀನ ಶಿಲ್ಪ ಕಲಾಕೃತಿ
ಕಳುವಾಗಿದ್ದ ಪ್ರಾಚೀನ ಶಿಲ್ಪ ಕಲಾಕೃತಿ   

ಮೈಸೂರು: ಇಲ್ಲಿನ ಮರಳು ಶಿಲ್ಪ ಕಲಾವಿದೆ ಎಂ.ಎನ್‌. ಗೌರಿ ಅವರನ್ನು ‍ಪ್ರಾಚೀನ ಶಿಲ್ಪಕಲಾಕೃತಿಯನ್ನು ಕಳವು ಮಾಡಿರುವ ಆರೋಪದ ಮೇರೆಗೆ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಜೂನ್ 30ರಂದು ಇವರು ಬಿಳಿಗೆರೆ ಸಮೀಪದ ಹರಿಹರಪುರ ಗ್ರಾಮದ ಸೋಮೇಶ್ವರ ದೇವಸ್ಥಾನದ ಮುಂದಿನ ಜಮೀನಿನಲ್ಲಿದ್ದ 3 ಅಡಿ ಉದ್ದ ಹಾಗೂ 2 ಅಡಿ ಅಗಲದ ವೀರಭದ್ರೇಶ್ವರ ಮೂರ್ತಿಯನ್ನು ತೆಗೆದುಕೊಂಡು ಹೋಗಿದ್ದರು. ಈ ವಿಷಯವನ್ನು ಗ್ರಾಮಸ್ಥರು ತಹಶೀಲ್ದಾರ್ ಗಮನಕ್ಕೆ ತಂದಿದ್ದರು. ತಹಶೀಲ್ದಾರ್ ಈ ಕುರಿತು ದೂರು ನೀಡಿದ್ದು ಕಳವು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಗರದಲ್ಲಿ ಶೋಧ ಕಾರ್ಯ ನಡೆಸಿದಾಗ ಗೌರಿ ಅವರ ಬಳಿ ವೀರಭದ್ರ ಮೂರ್ತಿ ಪತ್ತೆಯಾಗಿದೆ. ವಿಗ್ರಹ ವಶಕ್ಕೆ ಪಡೆದು ಗೌರಿ ವಿರುದ್ಧ ಐಪಿಸಿ ಸೆಕ್ಷನ್ 379 ಅನ್ವಯ ಕಳವು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ವಿಚಾರಣೆ ವೇಳೆ ಅವರು ವಿಗ್ರಹವನ್ನು ಪುರಾತತ್ವ ಮತ್ತು ಪ್ರಾಚ್ಯ ವಸ್ತು ಇಲಾಖೆಯ ವಶಕ್ಕೆ ನೀಡಲು ತಂದಿದ್ದೆ ಎಂದು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸಬ್‌ಇನ್‌ಸ್ಪೆಕ್ಟರ್ ಆಕಾಶ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯಿಸಿದ ಕಲಾವಿದೆ ಗೌರಿ, ‘ಇದು ಅತ್ಯಂತ ಅಪರೂಪದ 4ನೇ ಶತಮಾನಕ್ಕೆ ಸೇರಿದ ಗ್ರಾನೈಟ್‌ ಕಲ್ಲಿನ ವಾಮನ ಮೂರ್ತಿ. ಸಮೀಪದಲ್ಲೇ ಜೆಸಿಬಿ ಯಂತ್ರದಿಂದ ಕೆಲಸ ನಡೆಯುತ್ತಿತ್ತು. ಈ ಮೂರ್ತಿ ಹಾಳಾಗುತ್ತದೆ ಎಂದು ಭಾವಿಸಿ ಇದನ್ನು ಪುರಾತತ್ವ ಇಲಾಖೆಯ ಸುಪರ್ದಿಗೆ ಕೊಡೋಣ ಎಂದು ತಂದೆ. ಆದರೆ, ದಾರಿಮಧ್ಯೆದಲ್ಲಿ ಕೆಲವರು ತಡೆದು ₹ 10 ಸಾವಿರ ಕೊಡಿ ಎಂದು ಹೆದರಿಸಿದರು. ನಾವು ಹಣ ನೀಡದೇ ಸರ್ಕಾರಕ್ಕೆ ಒಪ್ಪಿಸೋಣ ಎಂದು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದು ಅವರಿಗೆ ಹಸ್ತಾಂತರಿಸುವಷ್ಟರಲ್ಲಿ ಸುಳ್ಳು ದೂರು ನೀಡಿ ಬಂಧಿಸಲಾಗಿದೆ. ಆದರೆ, ಅದೊಂದು ಐತಿಹಾಸಿಕ ಸ್ಥಳವಾಗಿದೆ. ಹರಿಹರಪುರದಲ್ಲಿ ಸೋಮೇಶ್ವರ ದೇವಸ್ಥಾನ ಇದೆ. ಸಮೀಪದಲ್ಲೇ ವಾಮನಮೂರ್ತಿಯೂ ಸಿಕ್ಕಿದೆ. ಇನ್ನಾದರೂ ಪುರಾತತ್ವ ಇಲಾಖೆ ಅಲ್ಲಿ ಸಂಶೋಧನೆ ಕೈಗೊಳ್ಳಬೇಕು’ ಎಂದು ಹೇಳಿದರು.

ಹರಿಹರಪುರ ಮತ್ತು ಇಗ್ಗಲಿ ಗ್ರಾಮಗಳ ನಡುವೆ ಇರುವ ಗುಡ್ಡದ ಬಳಿ ಪುರಾತನ ಕಾಲದ ಸೋಮೇಶ್ವರ ದೇವಸ್ಥಾನ ಇದೆ. ಚೋಳರ ಕಾಲದಲ್ಲಿ ಇಲ್ಲಿ ಗಾಣಿಗರು ವಾಸಿಸುತ್ತಿದ್ದು, ಅವರಿಗೆ ಸೇರಿದವು ಎನ್ನಲಾದ ಪ್ರಾಚೀನ ಶಿಲ್ಪಕಲಾಕೃತಿಗಳು ಹಾಗೂ ಕಲ್ಲುಗಳು ಇಲ್ಲಿ ಹೇರಳ ಸಂಖ್ಯೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.