ಕೆ.ವಿ. ಮಲ್ಲೇಶ್
ಮೈಸೂರು: ‘ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲಟ್ ಮತಪತ್ರ ಬಳಕೆಗೆ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರದ ನಡೆ ಶ್ಲಾಘನೀಯ’ ಎಂದು ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಹೇಳಿದ್ದಾರೆ.
‘ಇವಿಎಂ ಕಾರ್ಯ ದಕ್ಷತೆಯ ಮೇಲೆ ಸಾಕಷ್ಟು ಅನುಮಾನ ಮೂಡಿವೆ. ಹೀಗಾಗಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಸರ್ಕಾರ ಮತ್ತೆ ಬ್ಯಾಲಟ್ ಪೇಪರ್ ಬಳಸಲು ಮುಂದಾಗುತ್ತಿರುವುದರಿಂದ, ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಗೊಳ್ಳಲಿದೆ’ ಎಂದಿದ್ದಾರೆ.
‘ಮತಗಳವು, ವಾಮಮಾರ್ಗದ ಮೂಲಕ ಚುನಾವಣೆ ಗೆಲ್ಲುವುದು ಪ್ರಜಾಪ್ರಭುತ್ವಕ್ಕೆ ಕಳಂಕ. ತಂತ್ರಜ್ಞಾನದ ನಾಗಾಲೋಟದಲ್ಲಿ ಇವಿಎಂ ಯಂತ್ರ ಹ್ಯಾಕ್ ಮಾಡುವುದು ಅಸಾಧ್ಯ ಎಂದರೆ ನಂಬಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಇನ್ನಾದರೂ ಈ ಸೂಕ್ಷ್ಮ ವಿಚಾರವನ್ನು ಅರಿಯಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ನಿಶ್ಚಿತ’ ಎಂದು ಹೇಳಿದ್ದಾರೆ.
‘ಅಮೆರಿಕದಂತಹ ದೇಶವೇ ಇಂದಿಗೂ ಮತಪತ್ರ ಬಳಸುತ್ತಿದೆ. ಅದು ಪ್ರಜಾಪ್ರಭುತ್ವದ ಮೌಲ್ಯ ಉಳಿಸುವ ನಡೆ. ಆದರೆ, ಭಾರತದಲ್ಲಿ ಮಾತ್ರ ಮತ ಎಣಿಕೆಯ ನೆಪವೊಡ್ಡಿ ಇವಿಎಂ ಬಳಸುತ್ತಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಮಾದರಿಯಾಗಿ ಪರಿಗಣಿಸಬೇಕು. ಬ್ಯಾಲಟ್ ಪೇಪರ್ ಮೂಲಕ ಮತ ಹಾಕುವುದು ಹೆಚ್ಚು ಪಾರದರ್ಶಕ. ಜನರು ತಾವೇ ಮತ ಗುರುತು ಹಾಕುವುದರಿಂದ ಇಲ್ಲಿ ಯಾವುದೇ ಅನುಮಾನ, ಗೊಂದಲ ಇರುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಬ್ಯಾಲಟ್ ಪೇಪರ್‌ಗೆ ಒಲವು ತೋರಿರುವುದು ಸ್ವಾಗತಾರ್ಹ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.