
ಮೈಸೂರಿನಲ್ಲಿ ಗುರುವಾರ ನಡೆದ ಅರಿಸಿನ ಬೆಳೆಗಾರರು, ಮಾರಾಟಗಾರರ ಸಮಾವೇಶದಲ್ಲಿ ರಾಷ್ಟ್ರೀಯ ಅರಿಸಿನ ಮಂಡಳಿ ಅಧ್ಯಕ್ಷ ಪಲ್ಲೆ ಗಂಗಾರೆಡ್ಡಿ ಮಾತನಾಡಿದರು
ಪ್ರಜಾವಾಣಿ ಚಿತ್ರ
ಮೈಸೂರು: ‘ರಾಜ್ಯದಲ್ಲಿ ಅತಿ ಹೆಚ್ಚು ಅರಿಸಿನ ಬೆಳೆಯುವ ಜಿಲ್ಲೆಯಾದ ಚಾಮರಾಜನಗರದಲ್ಲಿ ರಾಷ್ಟ್ರೀಯ ಅರಿಸಿನ ಮಂಡಳಿಯು ಪ್ರಾದೇಶಿಕ ಕೇಂದ್ರ ಹಾಗೂ ಸಂಸ್ಕರಣಾ ಘಟಕವನ್ನು ತೆರೆಯಬೇಕು’ ಎಂದು ವಿಧಾನಪರಿಷತ್ ಸದಸ್ಯ ಕೆ. ಶಿವಕುಮಾರ್ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ರಾಷ್ಟೀಯ ಅರಿಸಿನ ಮಂಡಳಿ ಹಾಗೂ ಭಾರತೀಯ ಸಾಂಬಾರು ಮಂಡಳಿ ಸಹಯೋಗದಲ್ಲಿ ಅರಿಸಿನ ಪದಾರ್ಥಗಳ ಬೆಳೆಗಾರರು, ಖರೀದಿದಾರರು ಮತ್ತು ಮಾರಾಟಗಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಚಾಮರಾಜಗರ ಜಿಲ್ಲೆ ಒಂದರಲ್ಲಿಯೇ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗುಣಮಟ್ಟದ ಅರಿಸಿನ ಬೆಳೆಯಲಾಗುತ್ತಿದೆ. ಜೊತೆಗೆ ಮೈಸೂರು, ಕೊಡಗು ಜಿಲ್ಲೆಗಳಲ್ಲಿಯೂ ಗಣನೀಯ ಪ್ರಮಾಣದಲ್ಲಿ ಉತ್ಪಾದನೆ ನಡೆದಿದೆ. ಆದಾಗ್ಯೂ ಬೆಳೆಗಾರರು ಸಾಕಷ್ಟು ಸವಾಲು ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಅರಿಸಿನ ಮಂಡಳಿ ಸ್ಥಾಪಿಸಿರುವುದು ಸ್ವಾಗತಾರ್ಹ. ಬೆಳೆಗಾರರು ಹಾಗೂ ಮಾರುಕಟ್ಟೆಯು ಈರೋಡ್ ಮೇಲಿನ ಅವಲಂಬನೆ ತಪ್ಪಬೇಕು. ಮಾರುಕಟ್ಟೆಯಲ್ಲಿನ ಅವ್ಯವಸ್ಥೆಗೆ ಲಗಾಮು ಹಾಕಬೇಕು’ ಎಂದು ಆಗ್ರಹಿಸಿದರು.
‘ಉತ್ಪಾದನೆಗೆ ಪೂರಕವಾಗಿ ರೈತರಿಗೆ ಬಾಯ್ಲರ್, ಪಾಲಿಶಿಂಗ್ ಯಂತ್ರ, ಟಾರ್ಪಲ್ ಸಹಿತ ವಿವಿಧ ಸೌಲಭ್ಯ ಒದಗಿಸಬೇಕು. ಪಾರದರ್ಶಕ ಹಾಗೂ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಶೀತಲೀಕರಣ ಘಟಕ ಸೌಲಭ್ಯ ಒದಗಿಸಬೇಕು’ ಎಂದು ಕೋರಿದರು.
ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ‘ವಾಣಿಜ್ಯ ಬೆಳೆ ಬೆಳೆಯಲು ಈಚಿನ ದಿನಗಳಲ್ಲಿ ಪೈಪೋಟಿ ಹೆಚ್ಚಾಗಿದೆ. ರೈತರು ಲಭ್ಯವಿರುವ ತಂತ್ರಜ್ಞಾನ ಹಾಗೂ ಸರ್ಕಾರದ ಆರ್ಥಿಕ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಅರಿಸಿನ ಮಂಡಳಿ ಅಧ್ಯಕ್ಷ ಪಲ್ಲೆ ಗಂಗಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮಂಡಳಿಯ ಸದಸ್ಯರಾದ ಚೇತನ್ ಕುಮಾರ್ ಯಡವಣ್ಣವರ್, ಡಿ. ವಿಷ್ಣುವರ್ಧನ್, ಹುಡಿಗಾಲ ಎಫ್‌ಒಪಿ ಪ್ರಧಾನ ವ್ಯವಸ್ಥಾಪಕ ರವಿಶಂಕರ್, ಗುರುಪ್ರಸಾದ್, ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಪ್ರಧಾನ ವ್ಯವಸ್ಥಾಪಕರಾದ ರಾಮಚಂದ್ರ ಮಡಿವಾಳ, ಲಕ್ಷ್ಮಿಕಾಂತ ಬೊಮ್ಮಣ್ಣವರ, ಕೇಂದ್ರ ಸಾಂಬಾರು ಮಂಡಳಿ ಉಪನಿರ್ದೇಶಕ ಎಂ.ವೈ. ಹೊನ್ನೂರ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ನಾಗರಾಜು, ಉಪನಿರ್ದೇಶಕ ಶಿವಪ್ರಸಾದ್, ಸಹಾಯಕ ನಿರ್ದೇಶಕರಾದ ಚೇತನ್, ಭಾರತಿ ಇದ್ದರು.
ವಿವಿಧ ಜಿಲ್ಲೆಗಳ ಅರಿಸಿನ ಬೆಳೆಗಾರರು, ಖರೀದಿದಾರರು ಹಾಗೂ ಮಾರಾಟಗಾರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಚಾಮರಾಜನಗರದಲ್ಲಿ ಅರಿಸಿನ ಮಂಡಳಿ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಅಗತ್ಯವಾದ ಜಾಗ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಇಲ್ಲಿ ಕೇಂದ್ರದ ಜೊತೆಗೆ ₹50 ಕೋಟಿ ಪ್ಯಾಕೇಜ್ ಘೋಷಿಸಬೇಕುಕೆ. ಶಿವಕುಮಾರ್ ವಿಧಾನಪರಿಷತ್ ಸದಸ್ಯ
ಉತ್ಪಾದನೆ ಬಳಕೆಯಲ್ಲೂ ಭಾರತ ನಂ 1
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ್ ‘ಭಾರತವು ಸಾಂಬಾರು ಬೆಳೆಗಳ ವಿಸ್ತೀರ್ಣ ಉತ್ಪಾದನೆ ರಫ್ತು ಹಾಗೂ ಬಳಕೆಯಲ್ಲೂ ಅಗ್ರಸ್ಥಾನದಲ್ಲಿದೆ. ಜಾಗತಿಕವಾಗಿ ಒಟ್ಟು ಉತ್ಪಾದನೆಯ ಶೇ 75-80 ಸಾಂಬಾರು ಪದಾರ್ಥ ಇಲ್ಲಿಂದಲೇ ತಯಾರಾಗುತ್ತದೆ. ಇಲ್ಲಿನ 47 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ವಿವಿಧ ಬೆಳೆ ಬೆಳೆಯುತ್ತಿದ್ದು 1.7 ಕೋಟಿ ಟನ್ ಉತ್ಪಾದನೆ ಇದೆ. ವಾರ್ಷಿಕ ₹40 ಸಾವಿರ ಕೋಟಿಯಷ್ಟು ಮೌಲ್ಯದ ಉತ್ಪನ್ನ ರಫ್ತಾಗುತ್ತಿದೆ’ ಎಂದು ವಿವರ ನೀಡಿದರು. ‘ಕರ್ನಾಟಕದಲ್ಲಿ 3.96 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 8.63 ಲಕ್ಷ ಟನ್‌ನಷ್ಟು ಉತ್ಪಾದನೆ ಆಗುತ್ತಿದೆ. ಇದರಲ್ಲಿ ಸುಮಾರು 1.3 ಲಕ್ಷ ಟನ್‌ನಷ್ಟು ರಫ್ತಾಗುತ್ತಿದೆ. ನಮ್ಮಲ್ಲಿ ರೋಗಬಾಧೆ ಜೊತೆಗೆ ಉತ್ಪಾದಕತೆಯ ಪ್ರಮಾಣ ಕಡಿಮೆ ಇದ್ದು ಸುಧಾರಣ ಕ್ರಮಗಳ ಅಗತ್ಯವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.