ADVERTISEMENT

ಮೈಸೂರು ದಸರಾ: ತರಹೇವಾರಿ ಖಾದ್ಯಗಳ ರಸದೌತಣ

ದಸರಾ ಆಹಾರ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 13:00 IST
Last Updated 26 ಸೆಪ್ಟೆಂಬರ್ 2022, 13:00 IST
ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಸೋಮವಾರ ಆರಂಭವಾದ ಆಹಾರ ಮೇಳದ ಮಳಿಗೆಯಲ್ಲಿ ಬಂಬೂ ಬಿರಿಯಾನಿ ತಯಾರಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ವೀಕ್ಷಿಸಿದರು. ಎಲ್‌.ನಾಗೇಂದ್ರ, ಎಂ.ಕೃಷ್ಣಯ್ಯ ಇದ್ದರು
ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಸೋಮವಾರ ಆರಂಭವಾದ ಆಹಾರ ಮೇಳದ ಮಳಿಗೆಯಲ್ಲಿ ಬಂಬೂ ಬಿರಿಯಾನಿ ತಯಾರಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ವೀಕ್ಷಿಸಿದರು. ಎಲ್‌.ನಾಗೇಂದ್ರ, ಎಂ.ಕೃಷ್ಣಯ್ಯ ಇದ್ದರು   

ಮೈಸೂರು: ದಸರಾ ಮಹೋತ್ಸವದ ಆಹಾರ ಮೇಳ ಉಪ ಸಮಿತಿಯು ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಆಹಾರ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು.

ಈ ಮೈದಾನದಲ್ಲಿ 117 ಮಳಿಗೆಗಳಿದ್ದು, ಉದ್ಘಾಟನೆ ವೇಳೆಗೆ ಬಹಳಷ್ಟು ಮಳಿಗೆಗಳು ಆರಂಭವಾಗಿರಲಿಲ್ಲ. ಸಿದ್ಧತಾ ಕಾರ್ಯದಲ್ಲಿ ಮಳಿಗೆ ಮಾಲೀಕರು ತೊಡಗಿದ್ದರು. ಮೈದಾನದಲ್ಲಿ ಬೆಳಕಿನ ವ್ಯವಸ್ಥೆಗಾಗಿ ದೀಪಗಳನ್ನು ಅಳವಡಿಸುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದರು.

ಮೇಳದಲ್ಲಿ ಮಾಂಸಾಹಾರ, ಸಸ್ಯಾಹಾರ ಖಾದ್ಯಗಳು, ಐಸ್ ಕ್ರೀಂ, ಬಂಗಾರಪೇಟೆ ಪಾನೀಪುರಿ ಸೇರಿದಂತೆ ಚಾಟ್ಸ್‌, ಧಮ್‌ ಬಿರಿಯಾನಿ, ಚಿಕನ್‌, ಮಟನ್‌ ಬಿರಿಯಾನಿ, ಮೀನಿನ ಖಾದ್ಯಗಳು, ಮೇಲುಕೋಟೆ ಪುಳಿಯೋಗರೆ, ಉತ್ತರ ಕರ್ನಾಟಕದ ಬಜ್ಜಿ, ಚುರುಮುರಿ, ಗಿರ್ಮಿಟ್‌ ಸೇರಿದಂತೆ ವಿವಿಧ ಖಾದ್ಯಗಳು, ದಾವಣಗೆರೆ ಬೆಣ್ಣೆ ದೋಸೆ ಸೇರಿದಂತೆ ತರಹೇವಾರಿ ಖಾದ್ಯಗಳು ಆಹಾರ ಪ್ರಿಯರ ಜಿಹ್ವಾಚಾಪಲ್ಯವನ್ನು ತಣಿಸುತ್ತಿವೆ.

ADVERTISEMENT

ಆಹಾರ ಮೇಳದಲ್ಲಿ ಊಟ ಮಾಡಿದ ಸಚಿವರು, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಪ್ರಕೃತಿ ಆದಿವಾಸಿ ಫೌಂಡೇಶನ್‌ ಟ್ರಸ್ಟ್‌ ಸ್ಥಾಪಿಸಿರುವ ಬಂಬೂ ಬಿರಿಯಾನಿ ಮಳಿಗೆಯಲ್ಲಿ ಬಿರಿಯಾನಿ ತಯಾರಿಕೆಯನ್ನು ವೀಕ್ಷಿಸಿದರು. ಬಂಬೂ ಬಿರಿಯಾನಿ ತಯಾರಿಕೆ ಬಗ್ಗೆ ಟ್ರಸ್ಟ್‌ನ ಅಧ್ಯಕ್ಷ ಎಂ.ಕೃಷ್ಣಯ್ಯ ವಿವರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌.ಟಿ. ಸೋಮಶೇಖರ್‌, ‘ಆಹಾರ ಮೇಳದಲ್ಲಿ ಮಳಿಗೆ ಸ್ಥಾಪಿಸಲು ಹೆಚ್ಚಿನ ಬೇಡಿಕೆ ಬಂದಿದೆ. ಆದರೆ, ಸ್ಥಳಾವಕಾಶದ ಅಭಾವದಿಂದ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗಿಲ್ಲ’ ಎಂದರು.

ಯುವ ದಸರಾವನ್ನು ಸೆ.28ಕ್ಕೆ ಮುಂದೂಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನಟ ಸುದೀಪ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ಬಂತು. ಅಲ್ಲದೆ, ಅಪ್ಪು ನಮನ ಕಾರ್ಯಕ್ರಮಕ್ಕೆ ಡಾ.ರಾಜಕುಮಾರ್ ಕುಟುಂಬಸ್ಥರು 28ರಂದು ಆಗಮಿಸುವುದಾಗಿ ತಿಳಿಸಿದ್ದರಿಂದ ಮುಂದೂಡಲಾಯಿತು. ಇದರಲ್ಲಿ ಬೇರೆ ಉದ್ದೇಶ ಏನೂ ಇಲ್ಲ’ ಎಂದು ತಿಳಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಿದ್ದ ವೇದಿಕೆಯಲ್ಲಿ ಮೇಯರ್ ಹಾಗೂ ಸ್ಥಳೀಯ ಶಾಸಕರಿಗೆ ಅವಕಾಶ ನೀಡದಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಕಾರ್ಯಕ್ರಮದಲ್ಲಿ ಭಾಗವಹಿಸಲು ಮೇಯರ್ ಸೇರಿದಂತೆ ಒಟ್ಟು 43 ಜನಪ್ರತಿನಿಧಿಗಳ ಪಟ್ಟಿಯನ್ನು ಜಿಲ್ಲಾಡಳಿತವು ರಾಷ್ಟ್ರಪತಿ ಭವನಕ್ಕೆ ಕಳುಹಿಸಿತ್ತು. ಆದರೆ, ರಾಷ್ಟ್ರಪತಿಯವರಿಗೆ ಪ್ರತ್ಯೇಕ ಶಿಷ್ಟಾಚಾರ ಇರುವುದರಿಂದ ಎಲ್ಲರಿಗೂ ಅವಕಾಶ ಲಭ್ಯವಾಗಿಲ್ಲ’ ಎಂದು ಹೇಳಿದರು.

ಆಹಾರ ಮೇಳದ ಸಾಂಸ್ಕೃತಿಕ ವೇದಿಕೆಯಲ್ಲಿ ನೃತ್ಯ ಕಲಾವಿದ ಬದ್ರಿ ದಿವ್ಯಭೂಷಣ್ ಫ್ಯೂಷನ್ ನೃತ್ಯ ಪ್ರದರ್ಶಿಸಿದರು.

ಆರೋಗ್ಯ ಮೇಳ ಉಪ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಉಪಾಧ್ಯಕ್ಷರಾದ ಈರೇಗೌಡ, ಮೋಹನ್‌, ಭಾನುಪ್ರಕಾಶ್‌, ವಿಶೇಷಾಧಿಕಾರಿ ಜಿ.ಟಿ. ದಿನೇಶ್‌ ಕುಮಾರ್‌, ಕಾರ್ಯಾಧ್ಯಕ್ಷೆ ಕುಮುದಾ ಶರತ್‌, ಕಾರ್ಯದರ್ಶಿ ಸತೀಶ್‌ ಇದ್ದರು.

ಸಚಿವರ ವಿರುದ್ಧ ರೈತರ ಆಕ್ರೋಶ

ಆಹಾರ ಮೇಳವನ್ನು ಉದ್ಘಾಟಿಸಿ ನಿರ್ಗಮಿಸುತ್ತಿದ್ದ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ರೈತ ಸಂಘದ ಸದಸ್ಯರು ಮನವಿ ಸಲ್ಲಿಸಲು ಮುಂದಾದರು. ಇದಕ್ಕೆ ಅವಕಾಶ ಸಿಗದಿದ್ದರಿಂದ ಆಕ್ರೋಶಗೊಂಡ ರೈತರು ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ‘ಅವಿವೇಕಿ ಸಚಿವರಿಗೆ ಧಿಕ್ಕಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಡಕೊಳ ಕೈಗಾರಿಕಾ ಪ್ರದೇಶಕ್ಕಾಗಿ ಭೂಮಿ ನೀಡಿದ ರೈತರ ಮಕ್ಕಳಿಗೆ ಹಾಗೂ ಸ್ಥಳೀಯ ಯುವಕ, ಯುವತಿಯರಿಗೆ ಕಾಯಂ ಉದ್ಯೋಗ ನೀಡಿಲ್ಲ. ತುಂಡು ಭೂಮಿಯನ್ನೇ ನಂಬಿಕೊಂಡಿದ್ದ ರೈತರು ಈಗ ಅತಂತ್ರರಾಗಿದ್ದಾರೆ.‌ ರೈತರ ಸಂಕಷ್ಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಂದಿಸುತ್ತಿಲ್ಲ. ಸಚಿವರ ಭೇಟಿಗೆ ಪೊಲೀಸರು ಸಹ ಅವಕಾಶ ಕೊಡಲಿಲ್ಲ. ಕಡಕೊಳ ಕೈಗಾರಿಕಾ ಪ್ರದೇಶಕ್ಕೆ ಭೂಮಿ ನೀಡಿದ ರೈತರಿಗೆ ಕೊಟ್ಟ ಪರಿಹಾರದಲ್ಲೂ ಕಮಿಷನ್ ತೆಗೆದುಕೊಂಡಿದ್ದಾರೆ. ಪ್ರತಿ ₹1 ಲಕ್ಷಕ್ಕೆ ₹2 ಸಾವಿರದಂತೆ ಕಮಿಷನ್ ಪಡೆದಿದ್ದಾರೆ’ ಎಂದು ಆರೋಪಿಸಿದರು.

‘ಭೂಮಿ ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಕಾರ್ಖಾನೆ ಮುಂಭಾಗ ಸೆ.27ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.