ಮೈಸೂರು: ನಾಡಹಬ್ಬ ದಸರಾದ ಮೊದಲ ದಿನವಾದ ಸೋಮವಾರ ದಸರಾ ಕ್ರೀಡಾಕೂಟ ಹಾಗೂ ಕುಸ್ತಿಗೂ ಸಂಭ್ರಮದ ಚಾಲನೆ ದೊರೆತಿದ್ದು, ಆವೆ ಮಣ್ಣಿನಲ್ಲಿ ಪೈಲ್ವಾನರ ಕಾದಾಟವು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತು.
ಇಲ್ಲಿನ ದೊಡ್ಡಕೆರೆ ಮೈದಾನದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಮಧ್ಯಾಹ್ನ ದಸರಾ ನಾಡಕುಸ್ತಿಯಲ್ಲಿ ಮಹದೇವಪುರದ ವಿಕಾಸ್ ಹಾಗೂ ದಾವಣಗೆರೆಯ ಕಿರಣ್ ನಡುವಿನ ಉದ್ಘಾಟನಾ ಪಂದ್ಯವೇ ರೋಚಕವಾಗಿತ್ತು.
ಆರಂಭದ ಹತ್ತು ನಿಮಿಷ ಸಮಬಲದ ಪ್ರದರ್ಶನ ನಡೆಯಿತು. ನಂತರದಲ್ಲಿ ವಿಕಾಸ್ ಎದುರಾಳಿಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾದರು. ಅಂತಿಮವಾಗಿ ಪಂದ್ಯದ 22ನೇ ನಿಮಿಷದಲ್ಲಿ ಕಿರಣ್ ಅವರನ್ನು ಚಿತ್ ಮಾಡಿ ವಿಜಯದ ನಗೆ ಬೀರಿದರು. ಕುಸ್ತಿ ಟೂರ್ನಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ಪಂದ್ಯವನ್ನು ವೀಕ್ಷಿಸಿ, ಕುಸ್ತಿಪಟುಗಳ ಬೆನ್ನು ತಟ್ಟಿದರು.
ಮಹಿಳೆಯರ ಕುಸ್ತಿ ಉದ್ಘಾಟನಾ ಪಂದ್ಯದಲ್ಲಿ ಗಾಣಿಗರ ಕೊಪ್ಪಲಿನ ನಂದಿನಿ ಮತ್ತು ಬೆಂಗಳೂರಿನ ಪುಷ್ಪಾ ಸ್ಪರ್ಧೆ ನಡೆಸಿದರು. ಕೇವಲ 1 ನಿಮಿಷ, 10 ಸೆಕೆಂಡಿನಲ್ಲೇ ನಂದಿನಿ ಎದುರಾಳಿಯನ್ನು ಮಣ್ಣು ಮುಕ್ಕಿಸಿದರು. ಮೊದಲ ದಿನ ಒಟ್ಟು 40 ಜೋಡಿಗಳು ಸೆಣೆಸಿದವು.
ಸೆ. 28ರವರೆಗೆ ಒಂದು ವಾರ ಕಾಲ ಕುಸ್ತಿ ಟೂರ್ನಿ ನಡೆಯಲಿದೆ. ನಾಡಕುಸ್ತಿಯಲ್ಲಿ ಒಟ್ಟು 250 ಜೋಡಿಗಳು ಸೆಣೆಸಲಿವೆ. ವಿಜೇತರು ಸಾಹುಕಾರ್ ಚೆನ್ನಯ್ಯ ಕಪ್, ಮೈಸೂರು ಮಹಾರಾಜ ಒಡೆಯರ್ ಕಪ್, ಮೈಸೂರು ಮೇಯರ್ ಕಪ್ ಮತ್ತು ಕಿತ್ತೂರು ರಾಣಿ ಚನ್ನಮ್ಮ ಕಪ್ ಎತ್ತಿ ಹಿಡಿಯಲಿದ್ದಾರೆ. 24 ರಿಂದ 28ರ ವರೆಗೆ ಕಿರಿಯರ ವಿಭಾಗದ ಕುಸ್ತಿಗಳು ನಡೆಯಲಿವೆ.
ಸೆ. 27ರಂದು 10ನೇ ರಾಜ್ಯಮಟ್ಟದ ಹಾಗೂ 7ನೇ ಅಂಗವಿಕಲರ ಪಂಜಕುಸ್ತಿ ಟೂರ್ನಿ ನಡೆಯಲಿದೆ. ಪುರುಷರಲ್ಲಿ ಒಟ್ಟು 11 ವಿಭಾಗ ಹಾಗೂ ಮಹಿಳೆಯರಿಗೆ 7 ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ಮೈಸೂರು ದಸರಾ ಮಹೋತ್ಸವ ಅಂಗವಾಗಿ ದಸರಾ ಕ್ರೀಡಾಕೂಟ - ಸಿ.ಎಂ. ಕಪ್ - 2025 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿನೇಶ್ ಪೊಗಟ್ ಅವರನ್ನು ಸನ್ಮಾನಿಸಿದರು. ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ ರಾಜ್ ಸಿಂಗ್, ಸಂಸದ ಸುನೀಲ್ ಬೋಸ್, ಕ್ರೀಡಾ ಇಲಾಖೆಯ ಆಯುಕ್ತ ಆರ್ . ಚೇತನ್, ಶಾಸಕರಾದ ಗೋವಿಂದರಾಜು, ತನ್ವೀರ್ ಸೇಠ್,ಹಾಗೂ ಇತರರು ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.