ADVERTISEMENT

ಮೈಸೂರು ದಸರಾ: ಈ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 13:49 IST
Last Updated 12 ಸೆಪ್ಟೆಂಬರ್ 2020, 13:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮೈಸೂರು: ದಸರಾ ಮಹೋತ್ಸವದ ಉದ್ಘಾಟನೆ ಅ.17 ರಂದು ಬೆಳಿಗ್ಗೆ 7.45 ರಿಂದ 8.15ರೊಳಗಿನ ಶುಭಮುಹೂರ್ತದಲ್ಲಿ ಚಾಮುಂಡಿಬೆಟ್ಟದಲ್ಲಿ ನಡೆಯಲಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಉಪಸ್ಥಿತಿಯಲ್ಲಿ ಶನಿವಾರ ನಡೆದ ದಸರಾ ಸಮಿತಿ ಸಭೆಯ ಬಳಿಕ ಮಾತನಾಡಿ, ಉದ್ಘಾಟನೆ ಸಮಾರಂಭ ಮತ್ತು ಜಂಬೂ ಸವಾರಿ ವೇಳೆ ಅರಮನೆ ಆವರಣದಲ್ಲಿ ನಡೆಯಲಿರುವ ನಂದಿಧ್ವಜ ಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮತ್ತು ಕೆಲವೇ ಗಣ್ಯರಿಗೆ ಅವಕಾಶ ನೀಡಲಾಗುವುದು ಎಂದರು.

ಅ.2 ರಂದು ಗಜಪಡೆಗೆ ಸ್ವಾಗತ: ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯನ್ನು ಅ.2 ರಂದು ಮಧ್ಯಾಹ್ನ 12.18ಕ್ಕೆ ಅರಮನೆಗೆ ಸ್ವಾಗತಿಸಲಾಗುವುದು. ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಗಜಪಯಣ ಕಾರ್ಯಕ್ರಮ ಅದ್ದೂರಿಯಾಗಿ ಇರುವುದಿಲ್ಲ. ಜಿಲ್ಲಾಧಿಕಾರಿ ಒಳಗೊಂಡಂತೆ ಕೆಲವೇ ಅಧಿಕಾರಿಗಳು ಅಲ್ಲಿಗೆ ತೆರಳಿ ಆಹ್ವಾನ ನೀಡುವರು ಎಂದು ಮಾಹಿತಿ ನೀಡಿದರು.

ADVERTISEMENT

ಜಂಬೂ ಸವಾರಿ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿರಲಿದ್ದು, ಐದು ಆನೆಗಳು ಪಾಲ್ಗೊಳ್ಳಲಿವೆ. 60 ವರ್ಷ ತುಂಬಿರುವ ಅರ್ಜುನ ಆನೆ ಬದಲಿಗೆ ಈ ಬಾರಿ ಅಭಿಮನ್ಯು ಆನೆ ಅಂಬಾರಿ ಹೊರಲಿದೆ. ಅಭಿಮನ್ಯು ಜೊತೆಗೆ ವಿಕ್ರಮ, ಗೋಪಿ, ವಿಜಯಾ ಮತ್ತು ಕಾವೇರಿ ಆನೆಗಳು ಭಾಗಿಯಾಗಲಿವೆ‌ ಎಂದು ಹೇಳಿದರು.

ಕೋವಿಡ್ ಹಿನ್ನೆಲೆಯಲ್ಲಿ ದಸರಾ ಮಹೋತ್ಸವ ಸರಳ ಹಾಗೂ ಸಾಂಪ್ರದಾಯಿಕವಾಗಿ ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಈ ಬಾರಿ‌ ಕೊರೊನಾ ವಾರಿಯರ್‌ಗಳಿಂದ ದಸರಾ ಉದ್ಘಾಟನೆಯಾಗಲಿದೆ. ಐವರು ಕೊರೊನಾ ವಾರಿಯರ್‌ಗಳನ್ನು ಆಯ್ಕೆ ಮಾಡಲಾಗುವುದು. ಅವರ ಪೈಕಿ ಒಬ್ಬರು ದಸರಾ ಉದ್ಘಾಟನೆ ಮಾಡಲಿದ್ದು, ಉಳಿದವರಿಗೆ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ನವರಾತ್ರಿಯ ಎಲ್ಲಾ ದಿನ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ಕಾರ್ಯಕ್ರಮ ನೀಡಲು ಆಹ್ವಾನಿಸಲಾಗುವುದು. ಎಲ್ಲಾ ಕಾರ್ಯಕ್ರಮಗಳನ್ನು ಸಾಮಾಜಿಕ‌ ಜಾಲ ತಾಣದಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.