ADVERTISEMENT

ದಸರಾ ಮಹೋತ್ಸವ: ಅರಮನೆಯಲ್ಲಿ ಸಿಂಹಾಸನ ಜೋಡಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:32 IST
Last Updated 17 ಸೆಪ್ಟೆಂಬರ್ 2025, 2:32 IST
ದಸರಾ ಪ್ರಯುಕ್ತ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದ್ದು, ಮಂಗಳವಾರ ಸಿಂಹಾಸನ ಜೋಡಣೆ ಮಾಡಲಾಯಿತು
ದಸರಾ ಪ್ರಯುಕ್ತ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದ್ದು, ಮಂಗಳವಾರ ಸಿಂಹಾಸನ ಜೋಡಣೆ ಮಾಡಲಾಯಿತು   

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ನವರಾತ್ರಿ ವೇಳೆ ನಡೆಯುವ ರಾಜವಂಶಸ್ಥರ ಖಾಸಗಿ ದರ್ಬಾರ್‌ಗೆ ಅಂಬಾವಿಲಾಸ ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯ ಮಂಗಳವಾರ ನಡೆಯಿತು. 

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ನೇತೃತ್ವದಲ್ಲಿ ಬೆಳಿಗ್ಗೆ 7.30ರಿಂದಲೇ ರತ್ನ ಖಚಿತ ಸಿಂಹಾಸನ ಜೋಡಣೆಯು ಆರಂಭವಾಯಿತು. ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಈ ಕಾರಣ ಸಂಜೆ 6ರವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ‌

ಅರಮನೆ ಪುರೋಹಿತರ ಸಮ್ಮುಖದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ಮಾಡಲಾಯಿತು. ಆ ಬಳಿಕ ಅರಮನೆಯ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನದ ಬಿಡಿಭಾಗಗಳನ್ನು ದರ್ಬಾರ್‌ ಹಾಲ್‌ಗೆ ತರಲಾಯಿತು. ಬೆಳಿಗ್ಗೆ 10.45ರಿಂದ 11.15ರ ಶುಭಮುಹೂರ್ತದಲ್ಲಿ ಸಿಂಹಾಸನದ 13 ಬಿಡಿಭಾಗಗಳನ್ನು ಜೋಡಿಸಲಾಯಿತು ಎಂದು ಅರಮನೆಯ ಮೂಲಗಳು ತಿಳಿಸಿವೆ.

ADVERTISEMENT

ಅರಮನೆಯಲ್ಲಿ ಶರನ್ನವರಾತ್ರಿಯು ಸೆ.22ರಿಂದ ಅ.2ರವರೆಗೆ ಪ್ರಮೋದಾ ದೇವಿ ಒಡೆಯರ್‌ ನೇತೃತ್ವದಲ್ಲಿ ನಡೆಯಲಿದ್ದು, ವಿವಿಧ ಪೂಜಾ ಕಾರ್ಯ ನೆರವೇರಲಿವೆ. ಸಿಂಹಾಸನ  ಜೋಡಣಾ ಕಾರ್ಯಕ್ಕೆ ಮಾಧ್ಯಮದವರೂ ಸೇರಿದಂತೆ ಎಲ್ಲರಿಗೂ ನಿರ್ಬಂಧ ವಿಧಿಸಲಾಗಿತ್ತು. 

ಯದುವೀರ್‌ 11ನೇ ದರ್ಬಾರ್‌:

ಸೆ.22ರ ಸೋಮವಾರ ಖಾಸಗಿ ದರ್ಬಾರ್‌ನ ಪೂಜಾ ಕಾರ್ಯಕ್ರಮಗಳು ಬೆಳಿಗ್ಗೆಯಿಂದಲೇ ನಡೆಯಲಿವೆ. ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಪ್ರವೇಶ ಇರುವುದಿಲ್ಲ. ಬೆಳಿಗ್ಗೆ 6ರ ನಂತರ ಸಿಂಹಾಸನಕ್ಕೆ ಸಿಂಹದ ಮೂರ್ತಿ ಜೋಡಿಸುವ ಕಾರ್ಯ ನಡೆಯಲಿದೆ. ಸವಾರ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸು ಬರಲಿವೆ. ಕಂಕಣ ಧಾರಣೆ, ಕಳಸ ಪೂಜೆ ಸೇರಿ ಧಾರ್ಮಿಕ ಆಚರಣೆ ಬಳಿಕ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ 11ನೇ ಬಾರಿ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಅ.1ರ ಆಯುಧಪೂಜೆಯಂದು ಸಂಪೂರ್ಣ ದಿನ ಪ್ರವೇಶ ಇರುವುದಿಲ್ಲ. ಅ.2ರಂದು ದಸರಾ ಪಾಸ್, ಟಿಕೆಟ್‌ ಪಡೆದವರಿಗೆ ಪ್ರವೇಶ ಇರಲಿದೆ. ಅ.31ರಂದು ಸಿಂಹಾಸನ ವಿಸರ್ಜನೆ ಪ್ರಯುಕ್ತ ಬೆಳಿಗ್ಗೆ 10ರಿಂದ 12ರವರೆಗೆ ಪ್ರವೇಶ ಇರುವುದಿಲ್ಲ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.