ADVERTISEMENT

ಮೈಸೂರು: ದಸರಾ ಆನೆಗಳ ತೂಕ ಪರೀಕ್ಷೆ, 4.77 ಟನ್‌ ತೂಗಿದ ಅಭಿಮನ್ಯು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 6:26 IST
Last Updated 11 ಆಗಸ್ಟ್ 2022, 6:26 IST
ಅಭಿಮನ್ಯು ಆನೆ
ಅಭಿಮನ್ಯು ಆನೆ   

ಮೈಸೂರು: ಅರಮನೆಯಲ್ಲಿ ಬಿಡಾರ ಹೂಡಿರುವ ಕ್ಯಾಪ್ಟನ್‌ ‘ಅಭಿಮನ್ಯು’ ನೇತೃತ್ವದ 9 ಆನೆಗಳ ತೂಕ ಪರೀಕ್ಷೆ ಪ್ರಕ್ರಿಯೆ ನಗರದ ಧನ್ವಂತರಿ ರಸ್ತೆಯಲ್ಲಿರುವ ‘ಎಲೆಕ್ಟ್ರಾನಿಕ್‌ ವೇಬ್ರಿಡ್ಜ್‌’ನಲ್ಲಿ ಗುರುವಾರ ನಡೆಯಿತು.

‘ಅಭಿಮನ್ಯು’ 4,770 ಕೆ.ಜಿ ಭಾರವಿದ್ದು, ದಸರಾ ಆನೆಗಳಲ್ಲೇ ನಾಲ್ಕನೇ ಹೆಚ್ಚು ತೂಕದ ಆನೆಯಾಗಿದೆ. ಕಳೆದ ವರ್ಷಕ್ಕಿಂತಲೂ 50 ಕೆ.ಜಿ ಭಾರ ಹೆಚ್ಚಿಸಿಕೊಂಡಿದ್ದಾನೆ.

ಅರ್ಜುನನೇ ಭಾರ: ಎಂಟು ಬಾರಿ ಅಂಬಾರಿ ಹೊತ್ತು 2020ರಿಂದ ಉಳಿದ ಆನೆಗಳಿಗೆ ದಸರಾ ಅನುಭವವನ್ನು ಧಾರೆ ಎರೆಯುತ್ತಿರುವ ತಂಡದ ಹಿರಿಯ ಸದಸ್ಯನಾದ 63 ವರ್ಷ ವಯಸ್ಸಿನ ‘ಅರ್ಜುನ’, ಬರೋಬ್ಬರಿ 5,725 ಕೆ.ಜಿ ತೂಗಿದನು. ನಂತರದ ಸ್ಥಾನದಲ್ಲಿ ಗೋಪಾಲಸ್ವಾಮಿ 5,240 ಕೆ.ಜಿ, ‘ಧನಂಜಯ’ 4,800 ಕೆ.ಜಿ ಭಾರವಿದ್ದರು.

ADVERTISEMENT

ಇದೇ ಮೊದಲ ಬಾರಿ ದಸರೆಯಲ್ಲಿ ಪಾಲ್ಗೊಂಡಿರುವ ‘ಮಹೇಂದ್ರ’ 4,260 ಕೆ.ಜಿ ಭಾರವಿದ್ದರೆ, 2017ರ ನಂತರ ದಸರೆಗೆ ಬಂದಿರುವ 22 ವರ್ಷದ ‘ಭೀಮ’ 3,950 ಕೆ.ಜಿ ತೂಗಿದನು. ಹೆಣ್ಣಾನೆಗಳಲ್ಲಿ ‘ಕಾವೇರಿ’ 3,110, ‘ಚೈತ್ರಾ’ 3,050 ಹಾಗೂ ಲಕ್ಷ್ಮಿ 2,920 ಕೆ.ಜಿ. ತೂಕವಿದ್ದರು.

ನಿಗಾ ಇಡಲು ತೂಕ: ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಆನೆಗಳ ಆರೋಗ್ಯದ ಮೇಲೆ ನಿಗಾ ಇಡಲು, ಅವುಗಳ ಆರೈಕೆಗೆ ಮಾನದಂಡ ತಿಳಿದುಕೊಳ್ಳಲು, ಸಮರ್ಪಕ ಆಹಾರ ಪೂರೈಕೆ ಮಾಡಲು ಪ್ರತಿ ಬಾರಿ ತೂಕ ಮಾಡುವುದು ವಾಡಿಕೆ. ಅದರಂತೆ ತೂಕ ಪರೀಕ್ಷೆ ಪ್ರಕ್ರಿಯೆ ನಡೆಯಿತು.

‘ಅರಮನೆ ಪ್ರವೇಶ ನಂತರ ಜಂಬೂಸವಾರಿ ತಾಲೀಮು ಆರಂಭಿಸುವ ಮುನ್ನ ಆನೆಗಳನ್ನು ತೂಕ ಮಾಡಲಾಗುತ್ತದೆ. ವಿಶೇಷ ಆಹಾರಗಳನ್ನು ನೀಡಿದ ನಂತರ ಆನೆಗಳ ತೂಕ ಹೆಚ್ಚಾಗುತ್ತದೆ. ದಪ್ಪ ಆಗಬೇಕೆಂದು ನಾವು ಆಹಾರ ನೀಡುತ್ತಿಲ್ಲ. ಆರೋಗ್ಯವಾಗಿರಬೇಕೆಂಬುದು ನಮ್ಮ ಉದ್ದೇಶ. ಅದಕ್ಕಾಗಿ ತೂಕ ‍‍ಪರೀಕ್ಷೆ ನಡೆಸಲಾಗಿದೆ’ ಎಂದು ಡಿಸಿಎಫ್‌ ಡಾ.ವಿ.ಕರಿಕಾಳನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.