ADVERTISEMENT

ವಾರಾಂತ್ಯದಲ್ಲಿ ಅರಮನೆ ನಗರಿಗೆ ಪ್ರವಾಸಿಗರ ಲಗ್ಗೆ:ದಸರೆಗೆ ಮುನ್ನವೇ ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 4:39 IST
Last Updated 21 ಸೆಪ್ಟೆಂಬರ್ 2025, 4:39 IST
ಜಯಚಾಮರಾಜೇಂದ್ರ ವೃತ್ತದಲ್ಲಿ ಶನಿವಾರ ಸಂಜೆ ಗಜಪಡೆ ತಾಲೀಮು ಕಾಣಲು ನೆರೆದ ಜನಸ್ತೋಮ– ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್‌
ಜಯಚಾಮರಾಜೇಂದ್ರ ವೃತ್ತದಲ್ಲಿ ಶನಿವಾರ ಸಂಜೆ ಗಜಪಡೆ ತಾಲೀಮು ಕಾಣಲು ನೆರೆದ ಜನಸ್ತೋಮ– ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್‌   

ಮೈಸೂರು: ದಸರಾ ಉದ್ಘಾಟನೆಗೂ ಮುನ್ನವೇ ಪ್ರವಾಸಿಗರು ಮೈಸೂರಿನತ್ತ ಲಗ್ಗೆ ಇಟ್ಟಿದ್ದು, ಇಡೀ ನಗರಿಗೆ ಹಬ್ಬದ ಕಳೆ ಬಂದಿದೆ.

ಕಳೆದ ಕೆಲವು ದಿನಗಳಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಸಾಂಸ್ಕೃತಿಕ ನಗರಿಗೆ ಬರತೊಡಗಿದ್ದಾರೆ. ಸದ್ಯ ಶಾಲೆಗಳಿಗೆ ದಸರಾ ರಜೆಯೂ ಘೋಷಣೆ ಆಗಿದ್ದು, ಜನರ ಸಂಖ್ಯೆ ಹೆಚ್ಚುತ್ತಲೇ ಇದೆ. ನಗರದ ಬೀದಿಗಳಲ್ಲಿ ನಿತ್ಯ ಬೆಳಿಗ್ಗೆ– ಸಂಜೆ ದಸರಾ ಗಜಪಡೆಯ ತಾಲೀಮು, ಕತ್ತಲಲ್ಲಿ ಅಲ್ಲಲ್ಲಿ ದೀಪಾಲಂಕಾರದ ಚಿತ್ತಾರ ಜನರನ್ನು ಸೆಳೆಯತೊಡಗಲಿದೆ. ಆನೆಗಳನ್ನು ಕಾಣಲು ಕೋಟೆ ಆಂಜನೇಯ ಸ್ವಾಮಿ ದೇಗುಲದ ಮುಂಭಾಗ ಸಾವಿರದ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದು, ಇವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಸವಾಲಾಗಿದೆ.

ಶನಿವಾರ ನಗರದ ಹಾರ್ಡಿಂಜ್ ವೃತ್ತ, ಕೆ.ಆರ್. ವೃತ್ತ, ಅರಮನೆ– ಮೃಗಾಲಯದ ಸುತ್ತಮುತ್ತ ಶನಿವಾರ ಸಂಜೆ ಅಲ್ಲಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಪರದಾಡಿದರು. ವಾಹನಗಳ ನಿಲುಗಡೆಗೆ ಜಾಗವೇ ಸಿಗದಂತಹ ಪರಿಸ್ಥಿತಿ ಇತ್ತು. ಆಗಾಗ್ಗೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿದಿದ್ದು, ಜನರ ಕಿರಿಕಿರಿ ಹೆಚ್ಚಿಸಿತು.

ADVERTISEMENT

ಸಂಚಾರ ನಿಯಂತ್ರಣದ ಸಲುವಾಗಿ ಪೊಲೀಸರು ನಗರದ ಕೆಲವು ಮಾರ್ಗಗಳಲ್ಲಿ ಈಗಾಗಲೇ ಏಕಮುಖ ಸಂಚಾರದ ಮೂಲಕ ವಾಹನಗಳ ಓಡಾಟ ನಿರ್ಬಂಧಿಸಿದ್ದಾರೆ. ಭಾನುವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಸೋಮವಾರ ದಸರೆ ಅಧಿಕೃತವಾಗಿ ಉದ್ಘಾಟನೆ ಆಗಲಿದ್ದು, ಮುಂದಿನ ಹನ್ನೊಂದು ದಿನಗಳ ಕಾಲ ದೊಡ್ಡ ಹಬ್ಬವೇ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.