ಮೈಸೂರು: ‘ಮುಡಾ ಆವರಣ ಸೇರಿದಂತೆ ಪ್ರಾಧಿಕಾರದ ವಿವಿಧ ಶಾಖೆಗಳಲ್ಲಿ ಜನರು ಕಚೇರಿ ಕೆಲಸಕ್ಕಾಗಿ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಆಡಳಿತದಲ್ಲಿ ಸುಧಾರಣೆ ತರುವೆ’ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಮಂಗಳವಾರ ಇಲ್ಲಿ ತಿಳಿಸಿದರು.
‘ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಶುಲ್ಕ–ತೆರಿಗೆ ಪಾವತಿಸುವ ವ್ಯವಸ್ಥೆ ಜಾರಿಗೊಳಿಸುವ ಜೊತೆಗೆ, ಖಾತೆ ಮಾಡಿಕೊಡುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುವುದು. ಏಕಗವಾಕ್ಷಿ ಪದ್ಧತಿಯನ್ನೂ ಪರಿಚಯಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ನಕ್ಷೆ ಅನುಮೋದನೆಗಾಗಿ ಅಲೆದಾಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಎರಡು ಗಂಟೆಗಳೊಳಗಾಗಿ ನಕ್ಷೆ ಫಲಾನುಭವಿ ಕೈಗೆ ಸಿಗುವಂತಹ ವ್ಯವಸ್ಥೆಯನ್ನು ಜಾರಿಗೊಳಿಸುವ ಚಿಂತನೆ ನಡೆದಿದೆ’ ಎಂದು ಅವರು ತಿಳಿಸಿದರು.
‘1990ರ ದಶಕದಿಂದಲೂ ನಿವೇಶನಕ್ಕಾಗಿ ಚಾತಕ ಹಕ್ಕಿಗಳಂತೆ ಕಾದಿರುವವರು ಇದ್ದಾರೆ. ರೈತರ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿಪಡಿಸಿ, ಇವರಿಗೆ ನಿವೇಶನ ನೀಡಲು ಮೊದಲ ಆದ್ಯತೆ ಕೊಡುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಮುಡಾ ಭೂ ಸ್ವಾಧೀನಪಡಿಸಿಕೊಂಡ ಜಮೀನಿನ ರೈತರಿಗೆ ಇನ್ನೂ ₹ 247 ಕೋಟಿ ಬಾಕಿ ಪಾವತಿಸಬೇಕಿದೆ’ ಎಂದ ರಾಜೀವ್, ‘ನಿವೇಶನ ಖರೀದಿಗೂ ಮುನ್ನ ಒಮ್ಮೆ ಮುಡಾದಲ್ಲಿ ದಾಖಲೆ ಪರಿಶೀಲಿಸಿಕೊಳ್ಳಿ. ವಂಚನೆಗೊಳಗಾಗುವುದನ್ನು ತಪ್ಪಿಸಿಕೊಳ್ಳಿ’ ಎಂದು ನಿವೇಶನ ಖರೀದಿದಾರರಿಗೆ ಮನವಿ ಮಾಡಿದರು.
‘ಮುಡಾ ಹೆಸರಿನಲ್ಲಿ ವಂಚಿಸುವ ವಂಚಕರನ್ನು ಶಿಕ್ಷೆಗೊಳಪಡಿಸಲು ಕ್ರಮ ತೆಗೆದುಕೊಳ್ಳುವೆ. ಅತಿಕ್ರಮಣದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡುತ್ತೇವೆ. ಪ್ರಾಧಿಕಾರದ ಆಸ್ತಿ ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಮುಖ ನಿರ್ಧಾರಗಳು
*ಕೋವಿಡ್ ವಾರಿಯರ್ಸ್ ಚಿಕಿತ್ಸೆಗೆ ₹ 90 ಲಕ್ಷ ಅನುದಾನ
*ಮೈಸೂರು ದಸರಾಗೆ ₹ 5 ಕೋಟಿ ಅನುದಾನ
*5 ಸಾವಿರ ಗುಂಪು ಮನೆ ನಿರ್ಮಾಣ ಯೋಜನೆ
*ಕೆಟಿಸಿಪಿ ಕಾಯ್ದೆಗೆ ತಿದ್ದುಪಡಿ
*ಬಲ್ಲಹಳ್ಳಿ ಯೋಜನೆಗೆ ತ್ವರಿತಗತಿ
*ಒಂದೇ ಕಂತಿನಲ್ಲಿ ಬಡ್ಡಿಸಹಿತ ಶಾಸನಬದ್ಧ ಪರಿಹಾರ ನೀಡಿಕೆ
*ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ 33 ಗ್ರಾಮಗಳು
*ಗ್ರೀನ್ ಫೆನ್ಸಿಂಗ್ ಅಳವಡಿಕೆ ಕಡ್ಡಾಯ
*ಏಕರೂಪ ನಿಯಮ ಅಳವಡಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.