ADVERTISEMENT

ಅಧಿಕಾರಿಗಳು ಪ್ರವಾಸ ಮಾಡಿ, ಸಮಸ್ಯೆ ಬಗೆಹರಿಸಿ: ಎನ್.ಜಯರಾಮ್

ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 12:37 IST
Last Updated 29 ಜುಲೈ 2022, 12:37 IST
   

ಮೈಸೂರು: ‘ಅಧಿಕಾರಿಗಳು ಕಚೇರಿಯಲ್ಲಿ ಕುಳಿತರೆ ಜನರ ಸಮಸ್ಯೆಗಳ ನೈಜ ದರ್ಶನವಾಗುವುದಿಲ್ಲ. ಆದ್ದರಿಂದ, ವಾರದಲ್ಲಿ ಮೂರು ದಿನ ಜಿಲ್ಲಾ ಪ್ರವಾಸ ಮಾಡಬೇಕು. ಅದು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಫಲಪ್ರದ ಆಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಅಧಿಕಾರಿಗಳು ತಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ; ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಅದನ್ನು ಹೋಗಲಾಡಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಸದ್ಯ, ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಕೃಷಿಕರು ಮೃತ‍ಪಟ್ಟರೆ ಪರಿಹಾರ ನೀಡಲಾಗುತ್ತಿದೆ. ಅಂತೆಯೇ, ಉಳುಮೆ ಮೊದಲಾದ ವೇಳೆ ಎತ್ತುಗಳು ಸೇರಿದಂತೆ ಜಾನುವಾರು ಮೃತಪಟ್ಟರೆ ಪರಿಹಾರಕ್ಕೆ ಪರಿಗಣಿಸಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಪ್ರಸ್ತಾವ ಸಲ್ಲಿಸಬೇಕು’ ಎಂದು ಸೂಚಿಸಿದರು.

ಕಾಮಗಾರಿವಾರು ಪರಿಶೀಲಿಸಬೇಕು:‘ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿವಾರು ಪ್ರಗತಿ ಪರಿಶೀಲಿಸಿ ನನಗೆ ವರದಿ ಕಳುಹಿಸಬೇಕು. ಟೆಂಡರ್‌ ಪೂರ್ಣಗೊಂಡು ಕಾರ್ಯಾದೇಶ ನೀಡಿದ 2 ದಿನಗಳಲ್ಲಿ ಕಾಮಗಾರಿ ಆರಂಭವಾಗಬೇಕು. ವಿಳಂಬ ಮಾಡಬಾರದು’ ಎಂದು ನಿರ್ದೇಶನ ನೀಡಿದರು.

‘ನೋಡಲ್ ಅಧಿಕಾರಿಗಳು‌ ಶಾಲೆ, ಅಂಗನವಾಡಿ, ಹಾಸ್ಟೆಲ್‌ ಮೊದಲಾದವುಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು. ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆಯೇ ಎನ್ನುವುದನ್ನು ‍ಖಾತ್ರಿಪಡಿಸಿಕೊಳ್ಳಬೇಕು. ಸ್ಥಳೀಯವಾಗಿ ಸಮಸ್ಯೆಗಳಿದ್ದರೆ ತ್ವರಿತವಾಗಿ ಪರಿಹರಿಸಬೇಕು. ಎಲ್ಲ ಮಕ್ಕಳೂ‌ ಶಾಲೆಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಂತೆ ನೋಡಿಕೊಳ್ಳಬೇಕು. ಮಡಿವಂತಿಕೆಯ ಅಥವಾ ಆಹಾರ ರುಚಿಯಾಗಿರುವುದಿಲ್ಲವೋ ಎನ್ನುವ ಕಾರಣಗಳೇನಾದರೂ ಇದ್ದರೆ ಅದನ್ನು ಪರಿಹರಿಸಬೇಕು. ಶಾಲೆಯಲ್ಲಿ ಕೊಡುವ ಊಟ ಚೆನ್ನಾಗಿದ್ದರೆ, ಮನೆಯಿಂದ ತರುವುದಿಲ್ಲ’ ಎಂದು ತಿಳಿಸಿದರು.

‘ಶಾಲೆಗಳು, ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಅವಶ್ಯವಿದ್ದಲ್ಲಿ ಹೊಸದಾಗಿಯೇ ನಿರ್ಮಿಸಬೇಕು. ಇದಕ್ಕೆ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಅವಕಾಶ ಬಳಸಿಕೊಳ್ಳಬೇಕು’ ಎಂದು ಹೇಳಿದರು.

18 ನ್ಯಾಯಬೆಲೆ ಅಂಗಡಿ ಅಮಾನತು:‘ಜಿಲ್ಲೆಯಲ್ಲಿ ಅಕ್ರಮ ನಡೆಸಿದ ಹಿನ್ನೆಲೆಯಲ್ಲಿ 18 ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಿದ್ದೇವೆ. 21ಕ್ಕೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಒಂದು ಎಫ್‌ಐಆರ್‌ ದಾಖಲಿಸಲಾಗಿದೆ. ಅಕ್ರಮವಾಗಿ ಅಕ್ಕಿ ಸಾಗಣೆ ಮೇಲೆ ನಿಗಾ ವಹಿಸಲಾಗಿದೆ’ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕಿ ಕುಮುದಾ ತಿಳಿಸಿದರು.

ಪ್ರತಿಕ್ರಿಯಿಸಿದ ಜಯರಾಮ್, ‘ಪ್ರಕರಣ ದಾಖಲಿಸಿರುವುದು ಸಾಲದು. ಪಡಿತರವನ್ನು ಕಾಳಸಂತೆಯಲ್ಲಿ ಮಾರುವುದು, ಅನ್ಯ ಉದ್ದೇಶಕ್ಕೆ ಬಳಸುವುದು ನಡೆಯುತ್ತಿದೆ. ಹೆಚ್ಚಿನ ಪ್ರಕರಣ ದಾಖಲಿಸಬೇಕು. ಬಿಸಿ ಮುಟ್ಟಿಸಬೇಕು. ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಸೂಚಿಸಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರುದ್ರೇಶ್‌, ‘ಆ.1ರಿಂದ ಹನಿ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು. ₹ 16 ಕೋಟಿ ಅನುದಾನ ದೊರೆತಿದೆ’ ಎಂದು ತಿಳಿಸಿದರು.

ಮಹಾನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಪಾಲ್ಗೊಂಡಿದ್ದರು.

‘ಸಿಸಿ ರಸ್ತೆ ಫ್ಯಾಷನ್ ಆಗುತ್ತದೆ’
ಹಳ್ಳಿಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ‘ಗ್ರಾ.ಪಂಗಳಲ್ಲಿ ಅಷ್ಟು ಹಣ ಖರ್ಚು ಮಾಡಿ‌ ಸಿಸಿ ರಸ್ತೆ ನಿರ್ಮಿಸುವ ಅಗತ್ಯವಿಲ್ಲ. ಸಿಗುವ ಕಡಿಮೆ ಅನುದಾನದಲ್ಲೂ ಸಿಸಿ ರಸ್ತೆ ಮಾಡಿದರೆ ಉಳಿದುದ್ದಕ್ಕೆ ಅನುದಾನದ ಕೊರತೆ ಉಂಟಾಗುತ್ತದೆ. ಒಂದೆಡೆ ಮಾಡಿದರೆ ಫ್ಯಾಷನ್ ಆಗುತ್ತದೆ. ಎಲ್ಲರೂ ಸಿಸಿ ರಸ್ತೆ ಕೇಳುತ್ತಾರೆ’ ಎಂದರು.

‘ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಬರುವುದಿಲ್ಲ. ಹೀಗಾಗಿ, ಎಲ್ಲ ಕಡೆಯೂ ಸಿಸಿ ರಸ್ತೆ ಬೇಕಾಗುವುದಿಲ್ಲ’ ಎಂದು ತಿಳಿಸಿದರು.

‘ಜ್ಯೋತಿ’ಗೆ ಹೆಚ್ಚಿನ ಬೇಡಿಕೆ
ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ‘ಜಿಲ್ಲೆಯಲ್ಲಿ ಈವರೆಗೆ ಶೇ 55 ಹೆಚ್ಚುವರಿ ಮಳೆಯಾಗಿದೆ. ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಭತ್ತ ಹಾಗೂ ರಾಗಿ ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ಕೊಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಜ್ಯೋತಿ’ ಭತ್ತದ ತಳಿಗೆ ನಿರೀಕ್ಷೆಗಿಂತಲೂ ಹೆಚ್ಚಿನ ಬೇಡಿಕೆ ಇದೆ‌. ಹೀಗಾಗಿ ಕೊರತೆ ಆಗುತ್ತಿದೆ. ಬೇರೆ ವೆರೈಟಿಯನ್ನೂ ಬಿತ್ತುವಂತೆ ರೈತರಿಗೆ ತಿಳಿಸಿದ್ದೇವೆ. ದಲ್ಲಾಳಿಗಳು ರೈತರ ಜಮೀನಿಗೇ ಬಂದು ಕ್ವಿಂಟಲ್‌ಗೆ ₹ 2,220 ಕೊಟ್ಟು ‘ಜ್ಯೋತಿ’ ಭತ್ತ ಖರೀದಿಸಿದ್ದರು. ಹೀಗಾಗಿ, ಬೇಡಿಕೆ ಕಂಡುಬಂದಿದೆ’ ಎಂದು ವಿವರಿಸಿದರು.

‘ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ 52ರಷ್ಟು ಹುದ್ದೆಗಳು ಖಾಲಿ ಇವೆ. ‘ಆತ್ಮ’ ಯೋಜನೆ ತಾಂತ್ರಿಕ ಸಿಬ್ಬಂದಿಯನ್ನು ರೈತರಿಗೆ ತಾಂತ್ರಿಕ ಮಾಹಿತಿ ಕೊಡಲು ಬಳಸಿಕೊಳ್ಳಲಾಗುತ್ತಿದೆ’ ಎಂದರು.

‘ರೈತರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮ ಅನುಷ್ಠಾನದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಜಯರಾಮ್‌ ಸೂಚಿಸಿದರು.

ಪ್ರಗತಿ ಬಗ್ಗೆ ಅಸಮಾಧಾನ
‘ಹಾವು, ನಾಯಿ‌ ಕಡಿತಕ್ಕೆ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯವಿದೆ. ಪ್ರಸ್ತುತ ಡೆಂಗಿ ಕೇಸ್‌ಗಳು ಜಾಸ್ತಿ ಇವೆ. ಔಷಧಿ ಕೊರತೆ ಇಲ್ಲ’ ಎಂದು ಡಿಎಚ್ಒ ಡಾ.ಕೆ.ಎಚ್.ಪ್ರಸಾದ್ ಹೇಳಿದರು.

ಅರಣ್ಯ ಇಲಾಖೆ ಸಾಮಾಜಿಕ‌‌ ವಿಭಾಗ ಹಾಗೂ ಹಲವು ಇಲಾಖೆಗಳ ಕಾರ್ಯವೈಖರಿ ಬಗ್ಗೆ ಜಯರಾಮ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ 10 ಎಕರೆ ಗಿಡಗಳನ್ನು ನೆಟ್ಟು ಬೆಳೆಸಬೇಕು. ರೇಷ್ಮೆ ಕೃಷಿಯತ್ತ ಅದರಲ್ಲೂ ತಂಬಾಕು ಬೆಳೆಗಾರರನ್ನು ಆಕರ್ಷಿಸಬೇಕು. ರೇಷ್ಮೆಯಿಂದ ಹೆಚ್ಚು ಲಾಭವಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು’ ಎಂದು ಸೂಚಿಸಿದರು.

‘ಪೋಡಿ ಮಾಡಿಸಲು ರೈತರು ಮರು ಜನ್ಮ ಪಡೆದಂತಾಗುತ್ತದೆ. ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗಿದೆ. ಇದನ್ನು ತಪ್ಪಿಸಲು ತ್ವರಿತವಾಗಿ ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.