ADVERTISEMENT

ಜೀವ ಉಳಿಸಿದ ವೈದ್ಯನಿಗೆ ‘ಏರ್‌ ಫ್ರಾನ್ಸ್’ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 15:58 IST
Last Updated 8 ಡಿಸೆಂಬರ್ 2018, 15:58 IST
ಡಾ.ಪ್ರಭುಲಿಂಗಸ್ವಾಮಿ
ಡಾ.ಪ್ರಭುಲಿಂಗಸ್ವಾಮಿ   

ಮೈಸೂರು: ಫ್ರಾನ್ಸ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಅಸ್ವಸ್ಥರಾದ ವಿದೇಶಿ ಹಿರಿಯ ನಾಗರಿಕರ ಜೀವ ಉಳಿಸಿದ ಮೈಸೂರಿನ ವೈದ್ಯರನ್ನು ‘ಏರ್‌ ಫ್ರಾನ್ಸ್‌’ ವಿಮಾನಯಾನ ಸಂಸ್ಥೆ ಅಭಿನಂದಿಸಿದೆ.

ಮೈಸೂರಿನ ಕುವೆಂಪು ನಗರದಲ್ಲಿ ಕ್ಲಿನಿಕ್‌ ನಡೆಸುತ್ತಿರುವ ವೈದ್ಯ ಪ್ರಭುಲಿಂಗಸ್ವಾಮಿ ಸಂಗನಾಳ್‌ಮಠ್ ಅವರು ಈಚೆಗೆ ಫ್ರಾನ್ಸ್‌ನಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಯೂರೋಪ್ ಮೂಲದ ಹಿರಿಯ ನಾಗರಿಕರೊಬ್ಬರು ಅಸ್ವಸ್ಥರಾಗಿದ್ದರು. ವಿಮಾನದ ಕ್ಯಾಪ್ಟನ್‌ ಕೋರಿಕೆಯ ಮೇರೆಗೆ ಚಿಕಿತ್ಸೆ ನೀಡಿದ್ದು, ವ್ಯಕ್ತಿ ಅಪಾಯದಿಂದ ಪಾರಾಗಿದ್ದರು.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 6 ವೈದ್ಯರ ಪೈಕಿ ಪ್ರಭುಲಿಂಗಸ್ವಾಮಿ ಚಿಕಿತ್ಸೆ ನೀಡಿದ್ದಾರೆ. ಅದೇ ವಿಮಾನದಲ್ಲಿ ಇದ್ದ ಶುಶ್ರೂಷಕಿಯೊಬ್ಬರ ಸಹಾಯ ಪಡೆದು ವ್ಯಕ್ತಿಯನ್ನು ಪರಿಶೀಲಿಸಿದ್ದಾರೆ. ಹೃದಯ ಬಡಿತ ನಿಂತಿರುವುದನ್ನು ಗಮನಿಸಿ, ಕೂಡಲೇ ಎದೆಭಾಗವನ್ನು ಉಜ್ಜಿ ಕೃತಕ ಉಸಿರು ನೀಡಿದ್ದಾರೆ. ವಿಮಾನದಲ್ಲಿದ್ದ ಆಮ್ಲಜನಕದ ಸಿಲಿಂಡರ್‌ ಬಳಸಿಕೊಂಡಿದ್ದಾರೆ. ಇದರಿಂದ ವ್ಯಕ್ತಿಗೆ ಪ್ರಜ್ಞೆ ಬಂದಿದ್ದು, ಕೆಲ ಹೊತ್ತಿನ ಬಳಿಕ ಹಣ್ಣಿನ ರಸವನ್ನೂ ಕುಡಿದಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ವಿಮಾನ ಇಳಿಯುವವರೆಗೂ ರೋಗಿಯ ಬಗ್ಗೆ ನಿಗಾ ವಹಿಸಿ‌, ವಿಮಾನ ನಿಲ್ದಾಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದಾರೆ.

ವಿಮಾನದ ಕ್ಯಾಪ್ಟನ್ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮರುದಿನವೇ ‘ಏರ್‌ ಫ್ರಾನ್ಸ್’ ಕಂಪನಿಯು ಅಭಿನಂದನಾ ಪತ್ರವನ್ನು ರವಾನೆ ಮಾಡಿದೆ. ಜತೆಗೆ, 100 ಯೂರೊ ಮೌಲ್ಯದ ಉಡುಗರೆ ಚೀಟಿಯನ್ನೂ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.