ADVERTISEMENT

ಮೈಸೂರು ದಸರಾ: ತೀವ್ರ ಬರಗಾಲದಲ್ಲೂ ₹29.25 ಕೋಟಿ ವೆಚ್ಚ!

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 13:25 IST
Last Updated 2 ಡಿಸೆಂಬರ್ 2023, 13:25 IST
<div class="paragraphs"><p>ಮೈಸೂರು ದಸರಾ (ಸಂಗ್ರಹ ಚಿತ್ರ)</p></div>

ಮೈಸೂರು ದಸರಾ (ಸಂಗ್ರಹ ಚಿತ್ರ)

   

ಮೈಸೂರು: ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ‘ತೀವ್ರ ಬರಗಾಲ’ದ ನಡುವೆಯೂ ₹ 29.25 ಕೋಟಿ ವೆಚ್ಚ ಮಾಡಲಾಗಿದೆ. ಹೋದ ವರ್ಷ ₹ 28.74 ಕೋಟಿ ವೆಚ್ಚವಾಗಿತ್ತು.

ಬರಗಾಲದ ಹಿನ್ನೆಲೆಯಲ್ಲಿ ‘ಸರಳವೂ ಹಾಗೂ ಅದ್ಧೂರಿಯೂ ಅಲ್ಲದ ರೀತಿಯಲ್ಲಿ ದಸರೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುವುದು’ ಎಂದು ಸರ್ಕಾರ ಹೇಳಿತ್ತು. ಆದರೆ, ಮಾಡಲಾದ ವೆಚ್ಚ ಗಮನಿಸಿದರೆ ಅದ್ಧೂರಿಯಾಗಿಯೇ ಉತ್ಸವ ನಡೆದಿದೆ.

ADVERTISEMENT

ಕ್ರೀಡಾ ದಸರಾ, ದೀಪಾಲಂಕಾರ, ಆಹಾರ ಮೇಳ, ಸ್ವಚ್ಛತೆ ಹಾಗೂ ವ್ಯವಸ್ಥೆಗೆ ಮಾಡಿರುವ ವೆಚ್ಚವನ್ನು ಜಿಲ್ಲಾಡಳಿತ ನೀಡಿಲ್ಲ. ಇದೆಲ್ಲವನ್ನೂ ಸೇರಿಸಿದರೆ ಉತ್ಸವಕ್ಕೆ ಆಗಿರುವ ವೆಚ್ಚ ₹40 ಕೋಟಿಗೂ ಹೆಚ್ಚಾಗಲಿದೆ. ಈ ಬಾರಿ ಕೇವಲ 4 ದಿನಗಳಷ್ಟೆ ನಡೆದ ಯುವ ದಸರೆಗೆ ₹ 5.88 ಕೋಟಿ ವೆಚ್ಚ ಮಾಡಲಾಗಿದೆ! ಯುವ ಸಂಭ್ರಮಕ್ಕೆ ₹2 ಕೋಟಿ ವ್ಯಯಿಸಲಾಗಿದೆ.

ಮೈಸೂರು ರಾಜವಂಶಸ್ಥರಿಗೆ ಗೌರವ ಸಂಭಾವನೆ ರೂಪದಲ್ಲಿ ಹೋದ ವರ್ಷ ₹ 47.20 ಲಕ್ಷ ನೀಡಲಾಗಿತ್ತು. ಈ ವರ್ಷ ಜಿಎಸ್‌ಟಿ ಸೇರಿ ₹ 50 ಲಕ್ಷ ಕೊಡಲಾಗಿದೆ. ಬಹುತೇಕ ಉಪ ಸಮಿತಿಗಳು ಹೋದ ವರ್ಷಕ್ಕಿಂತ ಹೋಲಿಸಿದರೆ ಈ ಬಾರಿ ಹೆಚ್ಚಾಗಿಯೇ ವೆಚ್ಚ ಮಾಡಿವೆ.

ಯುವದಸರೆಯು ನಾಲ್ಕೇ ದಿನ ನಡೆದರೂ ಕಲಾವಿದರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆಸಲಾಗಿತ್ತು. ಆದ್ದರಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ವೆಚ್ಚವಾಗಿದೆ
ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಖರ್ಚು–ವೆಚ್ಚದ ಮಾಹಿತಿಯನ್ನು ಶನಿವಾರ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ‘ಖರ್ಚು–ವೆಚ್ಚದ ಮಾಹಿತಿ ಕೊಡುವುದು ತಾಂತ್ರಿಕ ಕಾರಣದಿಂದಾಗಿ ತಡವಾಗಿದೆ. ಸಾಂಪ್ರದಾಯಿಕವಾದ ಈ ಉತ್ಸವವನ್ನು ಯಾವುದಕ್ಕೂ ಕಡಿಮೆ ಇಲ್ಲದಂತೆ ಆಯೋಜಿಸಲಾಗಿತ್ತು. ಅದ್ಧೂರಿಯಾಗಿಯೇ ನಡೆದಿದೆ ಎಂದೇ ಒಪ್ಪಬೇಕಾಗುತ್ತದೆ. ಆದರೆ, ಸರ್ಕಾರದಿಂದ ಹೆಚ್ಚುವರಿಯಾಗಿ ಅನುದಾನ ಕೇಳುತ್ತಿಲ್ಲ’ ಎಂದು ತಿಳಿಸಿದರು.

‘ಕ್ರೀಡಾ ದಸರಾ, ದೀಪಾಲಂಕಾರ, ಆಹಾರ ಮೇಳ, ಸ್ವಚ್ಛತೆ ಹಾಗೂ ವ್ಯವಸ್ಥೆಗೆ ಮಾಡಿರುವ ವೆಚ್ಚವನ್ನು ಆಯಾ ಇಲಾಖೆ ಹಾಗೂ ಸೆಸ್ಕ್‌ ಮಾಡಿವೆ. ಈ ಉತ್ಸವವನ್ನು ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಲ್ಲಿ ನೋಡಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಯಾವ್ಯಾವುದಕ್ಕೆ ಎಷ್ಟು ವೆಚ್ಚ?

‘ಸರ್ಕಾರದಿಂದ ₹ 15 ಕೋಟಿ, ಮುಡಾದಿಂದ ₹ 10 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಅರಮನೆ ಆವರಣದಲ್ಲಿ ನಡೆದ ಕಾರ್ಯಕ್ರಮಗಳಿಗೆ ಅರಮನೆ ಮಂಡಳಿಯಿಂದಲೇ ₹ 5 ಕೋಟಿ ಭರಿಸಲಾಗಿದೆ. ಪ್ರಾಯೋಜಕತ್ವದಿಂದ ₹ 2.25 ಕೋಟಿ ಬಂದಿತ್ತು (ಹೋದ ವರ್ಷ ₹ 32.50 ಲಕ್ಷವಷ್ಟೆ ಸಂಗ್ರಹವಾಗಿತ್ತು). ಟಿಕೆಟ್ ಹಾಗೂ ಗೋಲ್ಡ್‌ಕಾರ್ಡ್‌ ಮಾರಾಟದಿಂದ ₹ 1.19 ಕೋಟಿ ವರಮಾನ ಬಂದಿತ್ತು. ಆಹಾರ ಮೇಳಕ್ಕೆ ನಾವು ಅನುದಾನ ನೀಡಿರಲಿಲ್ಲ. ಅದರಿಂದ ಪ್ರಾಯೋಜಕತ್ವ ಮೊದಲಾದವುಗಳಿಂದ ₹ 81 ಲಕ್ಷ ಸ್ವೀಕೃತಿಯಾಗಿದೆ. ಒಟ್ಟಾರೆ ₹ 29.26 ಕೋಟಿ ದೊರೆತಿತ್ತು’ ಎಂದು ಮಾಹಿತಿ ನೀಡಿದರು.

‘ಸಾರಿಗೆ ಮತ್ತು ಆಮಂತ್ರಣ, ಸ್ಥಳಾವಕಾಶ, ಸಾರಿಗೆ ಹಾಗೂ ಶಿಷ್ಟಾಚಾರಕ್ಕೆಂದೇ ₹ 3.22 ಕೋಟಿ, ಮೆರವಣಿಗೆಗೆ ₹ 2.45 ಕೋಟಿ, ಪಂಜಿನ ಕವಾಯತಿಗೆ ₹ 1.24 ಕೋಟಿ, ಸಾಂಸ್ಕೃತಿಕ ದಸರೆಗೆ ₹ 2 ಕೋಟಿ, ಗಜಪಡೆಗೆ ₹ 1.60 ಕೋಟಿ ವೆಚ್ಚವಾಗಿದೆ. ಸಿವಿಲ್ ಕಾಮಗಾರಿಗೆಂದೇ ₹ 6 ಕೋಟಿ ಬಳಸಲಾಗಿದೆ. ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ದಸರಾ ಅನುದಾನವಾಗಿ ₹ 2.20 ಕೋಟಿ ಕೊಡಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.