ADVERTISEMENT

ಮೈಸೂರು: ನೋಂದಣಿ ಸಂಖ್ಯೆ ಮರೆಮಾಚಿ ಟ್ರಾಫಿಕ್ ಪೊಲೀಸರಿಗೆ ಚಳ್ಳೆಹಣ್ಣು!

ನಗರದಲ್ಲಿ ಎಐ ಕ್ಯಾಮೆರಾಗಳಿಗೆ ಕಾಣಿಸಿದಂತೆ ಮಾಡಲು ಈ ತಂತ್ರ

ಎಂ.ಮಹೇಶ
Published 15 ಅಕ್ಟೋಬರ್ 2024, 8:41 IST
Last Updated 15 ಅಕ್ಟೋಬರ್ 2024, 8:41 IST
ಮೈಸೂರಿನಲ್ಲಿ ಸಂಚರಿಸುವ ಹಲವು ಲಾರಿಗಳು ನೋಂದಣಿ ಸಂಖ್ಯೆಯ ಪ್ಲೇಟನ್ನು ಮರೆಮಾಚುವುದು ಹೀಗೆ..
ಮೈಸೂರಿನಲ್ಲಿ ಸಂಚರಿಸುವ ಹಲವು ಲಾರಿಗಳು ನೋಂದಣಿ ಸಂಖ್ಯೆಯ ಪ್ಲೇಟನ್ನು ಮರೆಮಾಚುವುದು ಹೀಗೆ..   

ಮೈಸೂರು: ನಗರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದಾಗ ತೆರಬೇಕಾದ ದಂಡ ಅಥವಾ ಎದುರಿಸಬೇಕಾದ ಪ್ರಕರಣ ಗಳಿಂದ ತಪ್ಪಿಸಿಕೊಳ್ಳಲು ಲಾರಿಗಳ ಚಾಲಕರು ‘ನೋಂದಣಿ ಸಂಖ್ಯೆಯನ್ನೇ ಮರೆ ಮಾಚುವ’ ತಂತ್ರ ಅನುಸರಿಸುತ್ತಿರುವುದು ಕಂಡುಬಂದಿದೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚಲು ನಗರದಾದ್ಯಂತ ಕೃತಕ ಬುದ್ಧಿಮತ್ತೆಯ (ಎಐ) ವಿಶೇಷ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಪೊಲೀಸರ ಸಹಜ ಬುದ್ಧಿಮತ್ತೆಯಿಂದ ತಪ್ಪಿಸಿಕೊಳ್ಳುವ ಕೆಲಸವನ್ನು ಲಾರಿಗಳವರು ಹಾಗೂ ಭಾರಿ ವಾಹನಗಳವರು ಮಾಡುತ್ತಿದ್ದಾರೆ.

ಕೃತಕ ಬುದ್ಧಿಮತ್ತೆಯ ಕ್ಯಾಮೆರಾಗಳು ಸೆರೆಹಿಡಿಯುತ್ತಿರುವ ಚಿತ್ರಗಳನ್ನು ಕಚೇರಿಯಲ್ಲಿ ಕುಳಿತು ವೀಕ್ಷಿಸುತ್ತಾ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಚಾಲಕರು ಅಥವಾ ಮಾಲೀಕರ ವಿರುದ್ಧ ದಂಡ ಪ್ರಯೋಗಿಸಲು ಪೊಲೀಸರು ಕ್ರಮ  ಕೈಗೊಳ್ಳುತ್ತಿದ್ದಾರೆ. ಆದರೆ, ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚಲು ಚಾಪೆ ಕೆಳಗೆ ತೂರುವ ಪೊಲೀಸರಿಂದ ಬಚಾವಾಗಲು ಲಾರಿಗಳು ರಂಗೋಲೆಯ ಕೆಳಗೆ ತೂರುತ್ತಿವೆ!

ADVERTISEMENT

ಮಣ್ಣೆರಚಲು: ನಗರದಲ್ಲಿ ಪೊಲೀಸ್ ಇಲಾಖೆಯಿಂದ ಅಳವಡಿಸಿರುವ ಕೃತಕ ಬುದ್ಧಿಮತ್ತೆಯ ಕ್ಯಾಮೆರಾಗಳಿಗೆ ಮಣ್ಣೆರಚಲು ಲಾರಿ, ಆಟೊರಿಕ್ಷಾ, ಸ್ಕೂಟರ್ ಮೊದಲಾದ ವಾಹನಗಳ ವಿಶೇಷ ಬುದ್ಧಿಮತ್ತೆಯ ಚಾಲಕರು, ಸವಾರರು ತಮ್ಮ ವಾಹನಗಳ ನಂಬರ್ ಪ್ಲೇಟ್‌ನಲ್ಲಿರುವ ಸಂಖ್ಯೆಗಳು ಕೃತಕ ಬುದ್ಧಿಮತ್ತೆಯ ಕ್ಯಾಮೆರಾ ಕಣ್ಣಿಗೆ ಗೋಚರಿಸದಂತೆ ಪ್ಲೇಟ್‌ನ ಮೇಲೆಯೇ ‘ದೃಷ್ಟಿ ತೆಗೆಯುವ ದೇವರ ದಾರ’ವನ್ನು ಕಟ್ಟಿ ನೇತುಬಿಡುತ್ತಾರೆ. ಕ್ಯಾಮೆರಾ ಕಣ್ಣುಗಳು ಸಂಚಾರ ನಿಯಮ ಉಲ್ಲಂಘಿಸುವ ಲಾರಿಗಳ ನಂಬರ್ ಪ್ಲೇಟ್‌ನಲ್ಲಿರುವ ಸಂಖ್ಯೆಗಳನ್ನು ಓದಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಉಪಾಯ ಮಾಡಲಾಗುತ್ತಿದೆ. ಇಂತಹ ಎಐ ಕ್ಯಾಮೆರಾಗಳನ್ನು ಅವಲಂಬಿಸಿರುವ ಪೊಲೀಸರಿಗೆ ಲಾರಿಗಳವರು ಚಳ್ಳೆಹಣ್ಣು ತಿನ್ನಿಸಿ, ದಂಡದಿಂದ ಪಾರಾಗುತ್ತಿದ್ದಾರೆ. ಅಲ್ಲದೇ, ಸಂಚಾರ ನಿಯಮ ಉಲ್ಲಂಘಿಸುವುದು ನಡೆಯುತ್ತಲೇ ಇದೆ.

ಮರಳನ್ನು ಅಕ್ರಮವಾಗಿ ಸಾಗಿಸುವ ಲಾರಿ ಹಾಗೂ ವಾಹನಗಳು ಈ ತಂತ್ರವನ್ನು ಹೆಚ್ಚಾಗಿ ಅನುಸರಿಸುತ್ತಿವೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಹೃದಯ ಭಾಗದಲ್ಲೇ ಸಂಚಾರ: ನಂಬರ್ ಪ್ಲೇಟ್‌ನ ಸಂಖ್ಯೆ ಗೋಚರಿಸದಂತೆ ಒಂದು ದಾರದ ಗೊಂಚಲನ್ನು ತೂಗು ಹಾಕಿ ಮರಳಿನ ಲಾರಿಗಳು ನಗರದ ಹೃದಯ ಭಾಗದಲ್ಲೇ ಸಂಚರಿಸುತ್ತಿವೆ. ಪೊಲೀಸ್ ಠಾಣೆಗಳು, ಎಸಿಪಿ, ಡಿಸಿಪಿ, ಪೊಲೀಸ್ ಆಯುಕ್ತರ ಕಚೇರಿಗಳ ಎದುರು, ನ್ಯಾಯಾಲಯ ಮತ್ತು ನ್ಯಾಯಾಧೀಶರ ವಸತಿಗೃಹಗಳ ಎದುರು ಹಾಗೂ ಸಂಚಾರ ಪೊಲೀಸರು ಕುಳಿತಿರುವ ಪೊಲೀಸ್ ಚೌಕಿಯ ಎದುರೇ ಸಂಚರಿಸುತ್ತಿವೆ. ಅಷ್ಟೇ ಏಕೆ? ಪೊಲೀಸರು ಹಾಕಿರುವ ಕೃತಕ ಬುದ್ಧಿಮತ್ತೆಯ ಕ್ಯಾಮೆರಾ ಎದುರೇ ಈ ಲಾರಿಗಳು ಸಂಚರಿಸುತ್ತಿವೆ!

‘ಹಿಟ್ ಅಂಡ್ ರನ್, ಸಿಗ್ನಲ್‌ ಜಂ‍ಪ್‌, ಅತಿವೇಗದ ಚಾಲನೆ ಮೊದಲಾದ ಸಂಚಾರ ನಿಯಮ ಉಲ್ಲಂಘನೆಯ ಹಾಗೂ ಮರಳು ಅಕ್ರಮವಾಗಿ ಸಾಗಾಣಿಕೆಯ ಪ್ರಕರಣಗಳಿಂದ ಪಾರಾಗಲು ಲಾರಿಗಳು ಇಂತಹ ವಿಶೇಷ ಬುದ್ಧಿಮತ್ತೆಯನ್ನು ಪ್ರದರ್ಶಿಸುತ್ತಿವೆ. ಇದು ನಮ್ಮ ಪೊಲೀಸರ ಸಹಜ ಬುದ್ಧಿಮತ್ತೆಗೆ ಗೋಚರಿಸುತ್ತಿಲ್ಲ. ಎಐ ಕ್ಯಾಮೆರಾ ಕಣ್ಣಿಗೆ ಮಣ್ಣೆರಚುವ ವಾಹನಗಳನ್ನು ಪತ್ತೆಹಚ್ಚಲು ಪೊಲೀಸರು ಸಹಜ ಬುದ್ಧಿಮತ್ತೆ ಪ್ರದರ್ಶಿಸಬೇಕಾಗಿದೆ. ಇಂತಹ ವಾಹನಗಳ ದಾಖಲೆಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿದ್ದರೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಾಗಿದೆ’ ಎನ್ನುತ್ತಾರೆ ವಕೀಲ ಪಿ.ಜೆ.ರಾಘವೇಂದ್ರ.

ಮೈಸೂರಿನಲ್ಲಿ ಸಂಚರಿಸುವ ಹಲವು ಲಾರಿಗಳು ನೋಂದಣಿ ಸಂಖ್ಯೆಯ ಪ್ಲೇಟನ್ನು ಮರೆಮಾಚುವುದು ಹೀಗೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.