ಮೈಸೂರು: ಪತ್ರಿಕೋದ್ಯಮಿ, ಮೈಸೂರು ಮಿತ್ರ– ಸ್ಟಾರ್ ಆಫ್ ಮೈಸೂರು ಸಮೂಹದ ಸಂಪಾದಕರಾಗಿದ್ದ ಕೆ.ಬಿ. ಗಣಪತಿ (85) ಹೃದಯಾಘಾತದಿಂದ ಇಲ್ಲಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ಕೊಡಗಿನವರಾದ ಗಣಪತಿ ಅವರು ಬಿ.ಎ, ಬಿ.ಎಲ್ ಪದವಿ ಪಡೆದು ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಮುಂಬೈನಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಮಾಡಿ, ಅಲ್ಲಿಯೇ ‘ಫ್ರೀ ಪ್ರೆಸ್ ಜನರಲ್’, ‘ಇಪಿಡಬ್ಲ್ಯೂ’ ಹಾಗೂ ‘ದ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಪುಣೆಯಲ್ಲಿ ಜಾಹೀರಾತು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ 7 ವರ್ಷ ಕೆಲಸ ಮಾಡಿ, 1978ರಲ್ಲಿ ಮೈಸೂರಿಗೆ ಮರಳಿದ ಅವರು, ಮೈಸೂರು ಮಿತ್ರ– ಸ್ಟಾರ್ ಆಫ್ ಮೈಸೂರು ಪತ್ರಿಕೆಗಳನ್ನು ಆರಂಭಿಸಿದರು.
ಪತ್ರಿಕೆಗಳಲ್ಲಿ ನಿರಂತರ ಅಂಕಣಗಳನ್ನು ಬರೆದಿದ್ದ ಅವರಿಗೆ 2001ರಲ್ಲಿ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, 2023ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ದೊರೆತಿವೆ.
ಕನ್ನಡ ಮತ್ತು ಇಂಗ್ಲಿಷ್‌ಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದ ಅವರು, ‘ಆದರ್ಶವಾದಿ’, ‘ದ ಕ್ರಾಸ್ ಆ್ಯಂಡ್ ದ ಕೂರ್ಗ್ಸ್’ ಕಾದಂಬರಿಗಳನ್ನು ಬರೆದಿದ್ದರು. ‘ಸ್ವಾರ್ಡ್ ಆಫ್ ಶಿವಾಜಿ’, ‘ಶಿವಾಜಿಯ ಖಡ್ಗ’ ಜೀವನ ಚರಿತ್ರೆಗಳು. ‘ಅಮೆರಿಕ– ಆ್ಯನ್ ಏರಿಯಾ ಆಫ್ ಲೈಟ್’ ಅವರ ಪ್ರವಾಸ ಕಥನ. ‘ಅಬ್ರಕಡಬ್ರಾ’, ‘ಗಾಂಧೀಸ್ ಎಪಿಸ್ಟಲ್ ಟು ಒಬಾಮಾ’ ಅವರ ಲೇಖನಗಳ ಸಂಗ್ರಹವಾಗಿವೆ.
ಮಧ್ಯಾಹ್ನ 12ರಿಂದ ಕೆ.ಸಿ.ಬಡಾವಣೆಯಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಚಾಮುಂಡಿ ಬೆಟ್ಟದ ತಪ್ಪಲಿನ ಸುಡುವ ಸ್ಮಶಾನದಲ್ಲಿ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.