ADVERTISEMENT

ಹೊಟ್ಟೆಪಾಡಿಗೆ ಸರ್ಕಾರಿ ನೌಕರಿ ಬೇಕಿಲ್ಲ: ಡಾ.ಎನ್.ಬೋರಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 14:04 IST
Last Updated 12 ಫೆಬ್ರುವರಿ 2020, 14:04 IST
ಸಾಹಿತ್ಯ ಅಕಾಡೆಮಿ ಬುಧವಾರ ಏರ್ಪಡಿಸಿದ್ದ ‘ಅಡಿಗರ ಕಾವ್ಯ: ಅನುಸಂಧಾನ’ ಕುರಿತ ವಿಚಾರ ಸಂಕಿರಣದಲ್ಲಿ ಪ್ರತಿಭಾ ನಂದಕುಮಾರ್ ಮಾತನಾಡಿದರು. ಡಾ.ಎನ್.ಬೋರಲಿಂಗಯ್ಯ ಇದ್ದಾರೆ
ಸಾಹಿತ್ಯ ಅಕಾಡೆಮಿ ಬುಧವಾರ ಏರ್ಪಡಿಸಿದ್ದ ‘ಅಡಿಗರ ಕಾವ್ಯ: ಅನುಸಂಧಾನ’ ಕುರಿತ ವಿಚಾರ ಸಂಕಿರಣದಲ್ಲಿ ಪ್ರತಿಭಾ ನಂದಕುಮಾರ್ ಮಾತನಾಡಿದರು. ಡಾ.ಎನ್.ಬೋರಲಿಂಗಯ್ಯ ಇದ್ದಾರೆ   

ಮೈಸೂರು: ‘ಯಾವೊಬ್ಬ ವ್ಯಕ್ತಿಯೂ ಹೊಟ್ಟೆಪಾಡಿಗಾಗಿ ಸರ್ಕಾರಿ ನೌಕರಿಯನ್ನೇ ಅವಲಂಬಿಸಬೇಕಿಲ್ಲ’ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

ಸಾಹಿತ್ಯ ಅಕಾಡೆಮಿ ಬುಧವಾರ ಏರ್ಪಡಿಸಿದ್ದ ‘ಅಡಿಗರ ಕಾವ್ಯ: ಅನುಸಂಧಾನ’ ಕುರಿತ ವಿಚಾರ ಸಂಕಿರಣದಲ್ಲಿ ‘ಅಡಿಗರ ಕಾವ್ಯ: ಹೊಸ ನೋಟ’ ಕುರಿತ ವಿಷಯದಲ್ಲಿ ಮಾತನಾಡಿದ ಅವರು, ‘ಹೊಟ್ಟೆಪಾಡಿಗೆ ಶರೀರವಿದೆ. ಗಟ್ಟಿ ಮುಟ್ಟಾದ ಕೈ ಕಾಲುಗಳಿವೆ. ಆದ್ದರಿಂದ ಸರ್ಕಾರಿ ನೌಕರಿಯೇ ಬೇಕಿಲ್ಲ. ಯಾವ ಪ್ರಾಣಿಯೂ ಸರ್ಕಾರಿ ಕೆಲಸವನ್ನು ನಂಬಿಕೊಂಡಿಲ್ಲ’ ಎಂದರು.

‘ಶಬರಿಮಲೆಗೆ ಹೋಗಲು ಸುಪ್ರೀಂಕೋರ್ಟ್‌ಗೆ ಹೋಗಬೇಕೆ ? ದೇವರು ಎಲ್ಲೆಡೆ ಇದ್ದಾನೆ. ನಾವು ದೇವಸ್ಥಾನಕ್ಕೆ ಬರಲ್ಲ ಎಂದು ಪ್ರತಿಜ್ಞೆ ಮಾಡಿದರೆ ಅರ್ಧ ಸಮಸ್ಯೆಯೇ ಮುಗಿದಂತೆ’ ಎಂದು ಬೋರಲಿಂಗಯ್ಯ ವ್ಯಾಖ್ಯಾನಿಸಿದರು.

ADVERTISEMENT

‘ಕಾಲಕಾಲಕ್ಕೆ ಮಹಾಪುರುಷರು ಜನಿಸುತ್ತಾರೆ. ಮಹಾತ್ಮ ಗಾಂಧಿಯೂ ಮಹಾಪುರುಷ. ಕಷ್ಟ ಶಾಶ್ವತವಲ್ಲ. ಸುಖ ಶಾಶ್ವತವಾದುದು. ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ಕಷ್ಟಕ್ಕೂ, ಪರಿಹಾರವಿರಲಿದೆ’ ಎಂದು ಹೇಳಿದರು.

‘ಶೃಂಗಾರದ ಪರಿಭಾಷೆಯಲ್ಲಿ ಅಧ್ಯಾತ್ಮ ಹೇಳಿದವರು, ಕನ್ನಡ ಭಾಷೆಗೆ ಸಂಸ್ಕೃತ ಲಯ ಒದಗಿಸಿದವರು ಅಡಿಗರು’ ಎಂದು ಬಣ್ಣಿಸಿದ ಬೋರಲಿಂಗಯ್ಯ, ‘ಅಡಿಗರ ಕಾವ್ಯಗಳ ಕುರಿತು ಮಾಸ್ತಿ, ಕೆ.ಎಸ್‌.ನ ನಡೆಸಿದ ವಿಮರ್ಶೆಯೂ ಸರಿಯಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಅಡಿಗರ ಕಾವ್ಯದಲ್ಲಿ ವಿಡಂಬನೆ’ ಕುರಿತು ಕವಯತ್ರಿ ಪ್ರತಿಭಾ ನಂದಕುಮಾರ್ ಮಾತನಾಡಿ, ‘ಅಡಿಗರ ಕಾವ್ಯ ಸಾರದ ಸ್ಥಾಯಿ ಭಾವವೇ ವಿಡಂಬನೆ. ವಾಸ್ತವವಾಗಿ ಅಡಿಗರಿಗೆ ಹಾಸ್ಯಪ್ರಜ್ಞೆಯಿಲ್ಲ. ಆದರೆ ವಿಡಂಬನೆಯನ್ನು ಅತ್ಯಂತ ಪ್ರಬಲವಾಗಿ ಬಳಸಿದ್ದಾರೆ. ಆಯುಧವನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.