ADVERTISEMENT

ಚಾಮುಂಡಿಬೆಟ್ಟದಲ್ಲಿ ಮುಸ್ಲಿಮರಿಗೆ ಅಂಗಡಿ: ಮರುಪರಿಶೀಲಿಸಲು ವಿಎಚ್‌ಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 17:43 IST
Last Updated 26 ಮಾರ್ಚ್ 2022, 17:43 IST
ಚಾಮುಂಡಿ ಬೆಟ್ಟ
ಚಾಮುಂಡಿ ಬೆಟ್ಟ   

ಮೈಸೂರು: ‘ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಮುಸ್ಲಿಮರಿಗೆ ಅಂಗಡಿ ಹಾಕಲು ನೀಡಿರುವ ಅನುಮತಿಯನ್ನು ಮರುಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮೈಸೂರು ನಗರ–ಜಿಲ್ಲಾ ಘಟಕದ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಹಾಗೂ ಮುಜರಾಯಿ ಇಲಾಖೆಗೆ ಮನವಿ ಪತ್ರ ನೀಡಿದರು.

‘ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ಚಾಮುಂಡಿಬೆಟ್ಟದಲ್ಲಿನ ದೇಗುಲದ ಹೃದಯ ಭಾಗದಲ್ಲಿ ಬಟ್ಟೆ ಅಂಗಡಿ ಸೇರಿ ಐದು ಮಳಿಗೆಗಳನ್ನು ಮುಸ್ಲಿಮರಿಗೆ ನೀಡಲಾಗಿದೆ. ನಮ್ಮ ಆಚಾರ–ವಿಚಾರ ಒಪ್ಪದಿದ್ದ ಮೇಲೆ, ನ್ಯಾಯಾಲಯಕ್ಕೆ ಗೌರವ ಕೊಡದಿದ್ದ ಮೇಲೆ ಚಾಮುಂಡೇಶ್ವರಿಗೆ ಅರ್ಪಿಸುವ ಸೀರೆ ಮಾರಾಟ ಮಾಡಿ ಹಿಂದೂ ಭಕ್ತರಿಂದ ಮುಸ್ಲಿಮರು ಹಣ ಗಳಿಸುವುದು ಏಕೆ’ ಎಂದು ಮುಖಂಡರು ಪ್ರಶ್ನಿಸಿದರು.

‘ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ರಾಜ್ಯದ ಎಲ್ಲಾ ದೇವಸ್ಥಾನ, ಜಾತ್ರಾ ಮಹೋತ್ಸವ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಂಗಡಿ ಮಳಿಗೆ ಹಾಕಲು ಟೆಂಡರ್‌ ಪ್ರಕ್ರಿಯೆಯಲ್ಲಿ ಹಿಂದೂಯೇತರರಿಗೆ ಅವಕಾಶ ನೀಡಬಾರದು. ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಟೆಂಡರ್‌ ನೀಡಿದ್ದರೆ ಅದನ್ನು ಮರುಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ನ್ಯಾಯಾಲಯ ಆದೇಶ ವಿರುದ್ಧ ಈಚೆಗೆ ಮುಸ್ಲಿಮರು ಬಂದ್‌ಗೆ ಕರೆ ನೀಡಿದ್ದರು. ಇದು ಹಿಂದೂ ಸಮುದಾಯದಲ್ಲಿ ಆತಂಕ ಉಂಟು ಮಾಡಿದೆ. ದೇಗುಲದ ಸುತ್ತಲಿನ ಹಿಂದೂಗಳ ಸುರಕ್ಷತೆಯ ಬಗ್ಗೆ ಆತಂಕ ತಂದೊಡ್ಡಿದೆ’ ಎಂದರು.

ವಿಎಚ್‌ಪಿ ಮೈಸೂರು ನಗರ–ಜಿಲ್ಲಾ ಘಟಕದ ಕಾರ್ಯದರ್ಶಿ ವಿ.ಬಿ.ಪ್ರದೀಶ್‌ ಕುಮಾರ್‌ ಇದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಚಾಮುಂಡೇಶ್ವರಿ ದೇಗುಲದ ಕಾರ್ಯನಿರ್ವಹಣಾಧಿಕಾರಿ ಯತಿರಾಜ್‌, ‘ದೇಗುಲದಿಂದ ಟೆಂಡರ್‌ ನೀಡಿಲ್ಲ. ಖಾಸಗಿ ಜಾಗದಲ್ಲಿ ಮುಸ್ಲಿಮರು ಮಾರಾಟ ಮಾಡುತ್ತಿದ್ದು, ಅದಕ್ಕೂ ನಮಗೂ ಸಂಬಂಧವಿಲ್ಲ. ವಿಎಚ್‌ಪಿ ಮುಖಂಡರು ನೀಡಿರುವ ಮನವಿ ಪತ್ರವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.

‘ಟಿಪ್ಪು ಹೆಸರಿನಲ್ಲಿ ಸಲಾಂ ಮಹಾಮಂಗಳಾರತಿ ನಿಲ್ಲಿಸಿ’
ಉಡುಪಿ:
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿದಿನ ಟಿಪ್ಪು ಹೆಸರಿನಲ್ಲಿ ನಡೆಯುವ ಸಲಾಂ ಮಹಾಮಂಗಳಾರತಿ ನಿಲ್ಲಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ನೇತೃತ್ವದಲ್ಲಿ ಮನವಿ ಸಲ್ಲಿಸಿದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಪವಿತ್ರ ಕ್ಷೇತ್ರವಾಗಿದ್ದು, 108 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಆದಿ ಶಂಕರಾಚಾರ್ಯರು ಮೂಕಾಂಬಿಕಾ ದೇವಿಯನ್ನು ಕೊಲ್ಲೂರಿನಲ್ಲಿ ನೆಲೆಗೊಳಿಸಿದ್ದಾರೆ. ಕ್ರೂರಿ, ಮತಾಂಧ, ಹಿಂದೂ ವಿರೋಧಿ, ದೇವಸ್ಥಾನಗಳನ್ನು ಧ್ವಂಸಗೊಳಿಸಿದ ಟಿಪ್ಪು ಹೆಸರಿನಲ್ಲಿ ಕೊಲ್ಲೂರು ದೇವಸ್ಥಾನದಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಸಲಾಂ ಹೆಸರಿನಲ್ಲಿ ಮಹಾಮಂಗಳಾರತಿ ನಡೆಯುತ್ತಿರುವುದು ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಉಂಟುಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಸಲಾಂ ಹೆಸರಿನಲ್ಲಿ ನಡೆಯುವ ಮಹಾಮಂಗಳಾರತಿ ಗುಲಾಮಗಿರಿಯ ಸಂಕೇತವಾಗಿದ್ದು, ತಕ್ಷಣ ಕ್ಷೇತ್ರದ ವ್ಯವಸ್ಥಾಪನಾ ಮಂಡಳಿ ಹಾಗೂ ಧಾರ್ಮಿಕ ದತ್ತಿ ಇಲಾಖೆ 'ಸಲಾಂ' ಹೆಸರು ತೆಗೆದುಹಾಕಿ ದೇವರ ಹೆಸರಿನಲ್ಲಿ ಮಹಾಮಂಗಳಾರತಿ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಕೆ: ಈ ಸಂಬಂಧ ಕೊಲ್ಲೂರು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಕಾರ್ಯ ನಿರ್ವಹಣಾಧಿಕಾರಿ, ಮುಜರಾಯಿ ಸಚಿವೆ, ಜಿಲ್ಲಾಧಿಕಾರಿ ಮತ್ತು ದತ್ತಿ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

*
‘ಹಿಂದೂಯೇತರ ನೌಕರರನ್ನು ವರ್ಗಾವಣೆ ಮಾಡಿ’
ಸವದತ್ತಿ:
‘ಮುಜರಾಯಿ ಇಲಾಖೆಯಲ್ಲಿನ ಹಿಂದೂಯೇತರ ನೌಕರರನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಕರ್ನಾಟಕ ಧಾರ್ಮಿಕ ಹಾಗೂ ದತ್ತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ. ಇಲ್ಲದಿದ್ದಲ್ಲಿ, ದೇಶದಾದ್ಯಂತ ಹೋರಾಟ ಅನಿವಾರ್ಯ’ ಎಂದು ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಎಚ್ಚರಿಸಿದರು.

ಯಲ್ಲಮ್ಮ ದೇವಸ್ಥಾನದ ಸನ್ನಿಧಿಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಬಾರದೆಂದು ಆಗ್ರಹಿಸಿ ಶಾಸಕ ಆನಂದ ಮಾಮನಿ ಹಾಗೂ ದೇವಸ್ಥಾನದ ಅಧಿಕಾರಿಗೆ ಶನಿವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ‘ಅಲ್ಲಾ ಒಬ್ಬನೇ ದೇವರು; ಉಳಿದವರೆಲ್ಲ ಕಾಫಿರರು ಎನ್ನುವ ಮುಸ್ಲಿಮರಿಗೆ ಹಿಂದೂ ಕ್ಷೇತ್ರದಲ್ಲಿ ಕೆಲಸ ಏನಿದೆ? ಹಿಂದೂ ದೇವಸ್ಥಾನ, ದೇಶದ ರಕ್ಷಣೆಗೆ ನಾವು ಸಿದ್ಧರಿದ್ದೇವೆ’ ಎಂದರು.

*

ನಿರ್ಬಂಧ ಹೊಸದೇನಲ್ಲ: ಗೋಪಾಲಯ್ಯ
ಹಾಸನ:
‘ಹಿಂದೂಗಳಲ್ಲದವರಿಗೆ ದೇವಸ್ಥಾನ ಮತ್ತು ಜಾತ್ರೆಗಳಲ್ಲಿ ವ್ಯಾಪಾರ ನಿರ್ಬಂಧ ಕಾನೂನು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ರೂಪು ಗೊಂಡಿದ್ದು, ಅದರಂತೆಯೇ ಎಲ್ಲಾ ಕಡೆ ನಡೆಯಲಿ ಎಂದು ಈಗ ಜನ ಮನವಿ ಕೊಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಶ್ರವಣಬೆಳಗೊಳದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬೇಲೂರು ಚನ್ನಕೇಶವ ರಥೋತ್ಸವ ಸಂದರ್ಭದಲ್ಲಿ ಹಿಂದೂಗಳಲ್ಲದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಬಜರಂಗದಳ ಕಾರ್ಯಕರ್ತರ ಮನವಿ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿ, ಜಿಲ್ಲಾಧಿಕಾರಿ ಚರ್ಚಿಸಿ ಕ್ರಮ ಕೈಗೊಳ್ಳುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.