ADVERTISEMENT

ಮೈಸೂರು ಮಾಗಿ ಉತ್ಸವ: ಅರಮನೆಗೆ ಪ್ರವಾಸಿಗರ ಲಗ್ಗೆ; ವಿಜಯ್‌ ಪ್ರಕಾಶ್‌ ಗಾಯನದ ಮೋಡಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2024, 16:42 IST
Last Updated 22 ಡಿಸೆಂಬರ್ 2024, 16:42 IST
<div class="paragraphs"><p>ವಿಜಯ್‌ ಪ್ರಕಾಶ್‌</p></div>

ವಿಜಯ್‌ ಪ್ರಕಾಶ್‌

   

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಭಾನುವಾರ ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಸಂಗೀತದ ಹೊನಲು ಹರಿಸಿದರು. ಸುಮಧುರ ಹಾಡುಗಳ ಜೊತೆಗೆ ಬೀಟ್‌ಗಳ ಅಬ್ಬರದ ಗೀತೆಗಳ ಮೂಲಕ ಮಾಗಿ ಚಳಿಯಲ್ಲಿ ಪ್ರೇಕ್ಷಕರ ಎದೆಬಡಿತ ಏರಿಸಿದರು.

ಅರಮನೆಯಲ್ಲಿ ಆಯೋಜಿಸಿರುವ ‘ಮಾಗಿ ಉತ್ಸವ’ದ ಎರಡನೇ ದಿನದಂದು ನೆರೆದ ಅಸಂಖ್ಯ ಪ್ರೇಕ್ಷಕರಿಗೆ ಪ್ರಕಾಶ್‌ ನೇತೃತ್ವದ ತಂಡವು ಹಾಡುಗಳ ಸವಿ ಉಣಬಡಿಸಿತು. ‘ಓಂ ಶಿವೋಹಂ’ ಹಾಡಿನ ಮೂಲಕ ತಮ್ಮ ಗಾಯನ ಆರಂಭಿಸಿದ ಪ್ರಕಾಶ್‌ ನಂತರದಲ್ಲಿ ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ’ ಹಾಡಿನ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಬಳಿಕ ಮೈಸೂರಿನವರೇ ಆದ ವಿಜಯ್‌ ಹಾಗೂ ಲಕ್ಷ್ಮಿ ನಾಗರಾಜ್‌ ಜೋಡಿಯು ‘ನಗುವ ನಯನ, ಮಧುರ ಮೌನ’ ಎಂಬ ಭಾವತುಂಬಿದ ಹಾಡಿನ ಮೂಲಕ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ದಿತು.

ADVERTISEMENT

ಗಾಯಕರಾದ ನಿಖಿಲ್‌ ಪಾರ್ಥಸಾರಥಿ, ಶಾಶ್ವತಿ ಕಶ್ಯಪ್‌, ಶಶಿಕಲಾ ಸುನಿಲ್‌ ಮೊದಲಾದ ಕಲಾವಿದರ ತಂಡವು ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನ ಗೆದ್ದಿತು. ಇದಕ್ಕೂ ಮುನ್ನ ಆರ್. ರಘು ಮತ್ತು ತಂಡದವರ ಗೀತಗಾಯನ ಹಾಗೂ ಭಾರತೀಯ ವಿದ್ಯಾಭವನ ವಿದ್ಯಾರ್ಥಿಗಳ ‘ಮಹಿಷ ಮರ್ಧನ’ ನೃತ್ಯ ರೂಪಕವು ವೇದಿಕೆಯಲ್ಲಿ ಪ್ರಸ್ತುತಗೊಂಡವು.

ವಾರಾಂತ್ಯವಾದ್ದರಿಂದ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಭೇಟಿ ಕೊಟ್ಟು, ಫಲಪುಷ್ಪ ಪ್ರದರ್ಶನದ ಅಂದ ಸವಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.