ADVERTISEMENT

ಮೈಸೂರು: ಆತಂಕ ಮೂಡಿಸಿದ್ದ ದಸರಾ ಆನೆಗಳು ತಾಲೀಮಿನಲ್ಲಿ ಭಾಗಿ

ಅರಮನೆ ಗೇಟ್ ತಳ್ಳಿ ಹೊರಗಡೆ ಬಂದಿದ್ದ ಆನೆಗಳು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 16:01 IST
Last Updated 21 ಸೆಪ್ಟೆಂಬರ್ 2024, 16:01 IST
<div class="paragraphs"><p>ಮೈಸೂರಿನಲ್ಲಿ ಶನಿವಾರ ಸಂಜೆ ನಡೆದ ದಸರಾ ಜಂಬೂಸವಾರಿ ಮೆರವಣಿಗೆಯ ತಾಲೀಮಿನಲ್ಲಿ ‘ಮಹೇಂದ್ರ’ ಆನೆಗೆ ಮರದ ಅಂಬಾರಿ ಕಟ್ಟಲಾಗಿತ್ತು</p></div>

ಮೈಸೂರಿನಲ್ಲಿ ಶನಿವಾರ ಸಂಜೆ ನಡೆದ ದಸರಾ ಜಂಬೂಸವಾರಿ ಮೆರವಣಿಗೆಯ ತಾಲೀಮಿನಲ್ಲಿ ‘ಮಹೇಂದ್ರ’ ಆನೆಗೆ ಮರದ ಅಂಬಾರಿ ಕಟ್ಟಲಾಗಿತ್ತು

   

–ಪ್ರಜಾವಾಣಿ ಚಿತ್ರ

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ಗೇಟ್‌ನಲ್ಲಿ ಬ್ಯಾರಿಕೇಡ್‌ ತಳ್ಳಿ ಹೊರಬಂದು, ಮೈಸೂರು– ಊಟಿ ರಸ್ತೆಯಲ್ಲಿ ಓಡಾಡಿ ಜನರಲ್ಲಿ ಆತಂಕ ಮೂಡಿಸಿದ್ದ ದಸರಾ ಆನೆಗಳಾದ ‘ಧನಂಜಯ’ ಹಾಗೂ ‘ಕಂಜನ್‌’ ಶನಿವಾರ ಬೆಳಿಗ್ಗೆ ಮತ್ತು ಸಂಜೆ ತಾಲೀಮಿನಲ್ಲಿ ಭಾಗವಹಿಸಿದವು. ‘ವರಲಕ್ಷ್ಮಿ’ ಆನೆ ಬಿಟ್ಟು ಉಳಿದ 13 ಆನೆಗಳಿಗೂ ತಾಲೀಮು ನೀಡಲಾಯಿತು.

ADVERTISEMENT

ಶುಕ್ರವಾರ ರಾತ್ರಿ ನಡೆದ ಘಟನೆಯಿಂದ ತೀವ್ರ ಆತಂಕ ಉಂಟಾಗಿತ್ತು. ಊಟದ ಸಮಯದಲ್ಲಿ ಎರಡೂ ಆನೆಗಳು ಜಗಳವಾಡಿದ್ದರಿಂದ ಅವುಗಳನ್ನು ಮಾವುತರು ಹಾಗೂ ಕಾವಾಡಿಗಳು ಅರಮನೆ ಆವರಣದೊಳಗೆ ನಿಯಂತ್ರಿಸುವುದು ಸಾಧ್ಯವಾಗಿರಲಿಲ್ಲ. ಧನಂಜಯ ಆನೆಯು ಕಂಜನ್‌ ಆನೆಯನ್ನು ಅಟ್ಟಾಡಿಸಿಕೊಂಡು ಬಂದಿತ್ತು. ಕಂಜನ್‌ ಘೀಳಿಡುತ್ತಾ ರಸ್ತೆಗೆ ಬಂದಿದ್ದ. ಆಗ ಅಲ್ಲಿ ಕೆಲವರಷ್ಟೆ ಇದ್ದರು. ಹೆಚ್ಚಿನ ವಾಹನಗಳೂ ಇರಲಿಲ್ಲ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ನಂತರ ಮಾವುತ ಹಾಗೂ ಕಾವಾಡಿಗಳು ಕೆಲವೇ ಹೊತ್ತಿನಲ್ಲಿ ಅವುಗಳನ್ನು ನಿಯಂತ್ರಿಸಿದರು.

ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಡಿಸಿಎಫ್‌ ಐ.ಬಿ.ಪ್ರಭುಗೌಡ, ‘ಸಿಬ್ಬಂದಿಯು ಧನಂಜಯಗೆ ಶುಕ್ರವಾರ ರಾತ್ರಿ ಆಹಾರ ನೀಡುತ್ತಿದ್ದಾಗ, ಹಿಂದಿನಿಂದ ಕಂಜನ್‌ ಬಂದಿದ್ದ. ಜಗಳ ಮಾಡಿದ ಧನಂಜಯ ಕಂಜನ್‌ನನ್ನು ದಂತದಿಂದ ದೂಡಿ, ಓಡಿಸಿಕೊಂಡು ಹೋಗಿದ್ದ. ಕಂಜನ್‌ ಓಡುವ ರಭಸಕ್ಕೆ ಮಾವುತ ಕೆಳಗೆ ಜಿಗಿದಿದ್ದ’ ಎಂದು ತಿಳಿಸಿದರು.

‘ಇವು ದುಬಾರೆ ಶಿಬಿರದ ಆನೆಗಳು. ಅಲ್ಲಿಯೂ ಜಗಳವಾಡುತ್ತಿದ್ದವು. ಗಂಡಾನೆಗಳು ಶೌರ್ಯ ಪ್ರದರ್ಶಿಸುವುದು ಸಾಮಾನ್ಯ. ಅವುಗಳನ್ನು ನಿಯಂತ್ರಿಸಲು ನಮ್ಮ ತಂಡ ಸದಾ ಸನ್ನದ್ಧವಾಗಿರುತ್ತದೆ. ಅಗತ್ಯ ಪರಿಕರಗಳಿವೆ. ವೈದ್ಯರೂ ಇರುತ್ತಾರೆ. ಹೀಗಾಗಿ, ಆತಂಕಪಡುವ ಅಗತ್ಯವಿಲ್ಲ’ ಎಂದರು.

‘ನಿಗಾ ವಹಿಸಲು ಸೂಚಿಸಿರುವೆ’

ಮಾವುತರು ಕಾವಾಡಿಗಳು ಹಾಗೂ ಕುಟುಂಬದವರಿಗೆ ಅರಮನೆ ಮಂಡಳಿಯಿಂದ ಶನಿವಾರ ಬೆಳಿಗ್ಗೆ ಉಪಾಹಾರ ಕೂಟ ಆಯೋಜಿಸಲಾಗಿತ್ತು.  ಆನೆಗಳು ಏಕಾಏಕಿ ಅರಮನೆಯಿಂದ ಓಡಿಬಂದ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ.ಮಹದೇವಪ್ಪ ‘ಹಳ್ಳಿಗಳಲ್ಲಿ ಎರಡು ಹೋರಿಗಳು ಅಕ್ಕಪಕ್ಕ ಇದ್ದಾಗ ಹೇಗೆ ಜಗಳವಾಡುತ್ತವೆಯೋ ಹಾಗೆಯೇ ಆನೆಗಳೂ ಜಗಳವಾಡಿವೆ. ಹೋರಿ ಜಗಳದ ತೀವ್ರತೆ ಬೇರೆ; ಆನೆಗಳದ್ದೇ ಬೇರೆ. ಶುಕ್ರವಾರದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ವಿವರವನ್ನೂ ಪಡೆದಿದ್ದೇನೆ. ಇಲ್ಲಿ ಯಾರದು ತಪ್ಪು ಅಥವಾ ನಿರ್ಲಕ್ಷ್ಯವೆಂದು ಈಗ ಹೇಳಲಾಗುವುದಿಲ್ಲ’ ಎಂದರು. ‘ಆನೆಗಳ ವರ್ತನೆಗೆ ಏನು ಕಾರಣವೆಂಬುದು ಯಾರಿಗೂ ಗೊತ್ತಾಗಿಲ್ಲ. ಸದ್ಯ ಹಾನಿಯಾಗಿಲ್ಲ. ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.