ADVERTISEMENT

ಮೈಸೂರು: ಅರಮನೆ ಅಂಗಳದಲ್ಲಿ ಕಾಡಿನ ಮಕ್ಕಳ ಕಲರವ

ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗರ ಮಕ್ಕಳಿಗಾಗಿ ತಾತ್ಕಾಲಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 5:45 IST
Last Updated 24 ಆಗಸ್ಟ್ 2025, 5:45 IST
ಮೈಸೂರಿನ ಅರಮನೆ ಅಂಗಳದಲ್ಲಿ ತೆರೆದ ತಾತ್ಕಾಲಿಕ ಶಾಲೆಯಲ್ಲಿ ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗೆ ಶಿಕ್ಷಕರು ಪಾಠ ಹೇಳಿಕೊಟ್ಟರು ಪ್ರಜಾವಾಣಿ ಚಿತ್ರ: ಅನೂಪ್ ರಾಘ. ಟಿ.
ಮೈಸೂರಿನ ಅರಮನೆ ಅಂಗಳದಲ್ಲಿ ತೆರೆದ ತಾತ್ಕಾಲಿಕ ಶಾಲೆಯಲ್ಲಿ ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗೆ ಶಿಕ್ಷಕರು ಪಾಠ ಹೇಳಿಕೊಟ್ಟರು ಪ್ರಜಾವಾಣಿ ಚಿತ್ರ: ಅನೂಪ್ ರಾಘ. ಟಿ.   

ಮೈಸೂರು: ಅರಮನೆ ಅಂಗಳದಲ್ಲಿ ಆನೆ ಬಿಡಾರದ ಮಧ್ಯೆ ‘ನಂಗ ಜೇನು ಕುರುಬ ಮಕ್ಕಾಳು.. ದೂರಿ ದೂರಿ, ನಂಗ ಕಾಡಿನ ಅರಸಾರು.. ದೂರಿ ದೂರಿ’ ಹಾಡಿಗೆ ರಂಚಿಸಿದ ಮಕ್ಕಳ ಮೊಗದಲ್ಲಿ ನಾಚಿಕೆ ಭಾವದ ನಿಟ್ಟುಸಿರು, ಹಾಡಿಗೆ ತಲೆದೂಗಿದ ಶಿಕ್ಷಕರು, ಹೊರಗಡೆ ನಿಂತು ಕಣ್ಣುಹಾಯಿಸಿ ನೋಡುತ್ತಿದ್ದ ಪೋಷಕರು...

–ಇದು ದಸರಾ ಗಜಪಡೆಗಳೊಂದಿಗೆ ಬಂದಿರುವ ಮಾವುತರು ಮತ್ತು ಕಾವಾಡಿಗರ ಮಕ್ಕಳಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆರಂಭಿಸಿದ ತಾತ್ಕಾಲಿಕ ಶಾಲೆಯಲ್ಲಿ ಕಂಡುಬಂದ ದೃಶ್ಯ.

ಅರಮನೆಯ ಜಯಮಾರ್ತಾಂಡ ದ್ವಾರದ ಪಕ್ಕವಿರುವ ಕಟ್ಟಡದಲ್ಲಿ ತಾತ್ಕಾಲಿಕ ಶಾಲೆ ಕಾರ್ಯಾರಂಭ ಮಾಡಿದೆ. ಹಾಡಿಯಿಂದ ಪೋಷಕರೊಂದಿಗೆ ಬಂದಿರುವ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಶಾಲೆ ತೆರೆಯಲಾಗಿದ್ದು, 1ರಿಂದ 9ನೇ ತರಗತಿಯ 25 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ADVERTISEMENT

ನಲಿ-ಕಲಿ ವಿಧಾನ: ಕಾಡಿನ ಪರಿಸರದ ಮಕ್ಕಳಿಗೆ ಸಾಮಾನ್ಯ ಶೈಲಿಯಲ್ಲಿ ಪಾಠ ಮಾಡಿದರೆ ಮನಮುಟ್ಟುವುದಿಲ್ಲ. ಹೀಗಾಗಿ ನಲಿ-ಕಲಿ ವಿಧಾನದ ಮೂಲಕ ವಿವಿಧ ಫಲಕ ಪ್ರದರ್ಶಿಸಿ ಅಕ್ಷರ ಕಲಿಸಲಾಗುತ್ತಿದೆ. ಕಥೆ ಹೇಳುವುದು, ಚಿತ್ರಪುಸ್ತಕಗಳು, ವಿಜ್ಞಾನ, ಪ್ರಾಥಮಿಕ ಗಣಿತ ವಿಷಯಗಳ ಬಗ್ಗೆ ಹೇಳಿಕೊಡಲಾಗುತ್ತಿದೆ. ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

‘ಬೆಳಗಿನ ತರಗತಿಗಳಲ್ಲಿ ಸರ್ಕಾರಿ ಶಾಲೆಯ ಪಠ್ಯ ಕಲಿಸಲಾಗುತ್ತಿದೆ. ಮಧ್ಯಾಹ್ನ ಪಠ್ಯೇತರ ಚಟುವಟಿಕೆ ಹಾಡು, ನೃತ್ಯ ಮಾಡಿಸಲಾಗುತ್ತಿದೆ. ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮಕ್ಕಳನ್ನು ತೊಡಗಿಸಲಾಗುತ್ತಿದೆ. ಅಕ್ಷರ ದಾಸೋಹ ಯೋಜನೆಯಡಿ ಇಸ್ಕಾನ್ ಸಂಸ್ಥೆ ಪೂರೈಸುವ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದ್ದು, ತರಗತಿಯೂ ಬೆಳಿಗ್ಗೆ 9.30ರಿಂದ ಸಂಜೆ 4ರವರೆಗೆ ತರಗತಿ ನಡೆಯುತ್ತದೆ’ ಎಂದು ಶಿಕ್ಷಕಿ ದಿವ್ಯ ಪ್ರಿಯದರ್ಶಿನಿ ತಿಳಿಸಿದರು.

ಮೂರು ಗುಂಪು ರಚನೆ: ಮಕ್ಕಳನ್ನು ತರಗತಿವಾರು ವಿಂಗಡಣೆ ಮಾಡಿ, ಮುಖ್ಯ ವಿಷಯಗಳನ್ನು ಬೋಧಿಸಲಾಗುತ್ತಿದೆ. ಸಾಮರ್ಥ್ಯ ಹಾಗೂ ವಯಸ್ಸಿಗೆ ಅನುಗುಣವಾಗಿ ಕಲಿಕೆಗೆ 1–4ನೇ ತರಗತಿ, 5–7ನೇ ತರಗತಿ ಹಾಗೂ 8– 9ನೇ ತರಗತಿಯ ಗುಂಪುಗಳನ್ನು ರಚಿಸಲಾಗಿದೆ ಎಂದು ಶಿಕ್ಷಕಿ ಮೋಸಿನ್ ತಾಜ್ ಹೇಳಿದರು.

ಮೂವರು ಶಿಕ್ಷಕಿಯರು: ತಾತ್ಕಾಲಿಕ ಶಾಲೆಗೆ ದಕ್ಷಿಣ ಬಿಇಒ ಕಚೇರಿಯಿಂದ ಮೂವರು ಶಿಕ್ಷಕಿಯರನ್ನು ನಿಯೋಜಿಸಲಾಗಿದೆ. ಗಣಿತ, ಇಂಗ್ಲಿಷ್ ಬೋಧನೆಗೆ ವಿದ್ಯಾರಣ್ಯಪುರಂನ ರೆಹಮಾನಿಯಾ ಉರ್ದು ಶಾಲೆಯ ಶಿಕ್ಷಕಿ ನೂರ್‌ಫಾತಿಮಾ, ವಿಜ್ಞಾನಕ್ಕೆ ಕುಕ್ಕರಹಳ್ಳಿ ಶಾಲೆಯ ದಿವ್ಯ ಪ್ರಿಯದರ್ಶಿನಿ, ಚಾಮುಂಡಿಪುರಂ ವಿಎಂಇ ಬಾಲಬೋಧಿನಿ ಶಾಲೆಯ ಮೋಸಿನ್ ತಾಜ್ ಅವರನ್ನು ಕನ್ನಡ ವಿಷಯಕ್ಕೆ ನಿಯೋಜಿಸಲಾಗಿದೆ.

ನೋಡಲ್‌ ಅಧಿಕಾರಿಯಾಗಿ ವಿಜಯ್‌ಕುಮಾರ್ ಅವರನ್ನು ನೇಮಿಸಲಾಗಿದ್ದು, ಡಿಡಿಪಿಐ ಜವರೇಗೌಡ ಮಾರ್ಗದರ್ಶನದಲ್ಲಿ ದಕ್ಷಿಣ ವಲಯ ಬಿಇಒ ಎಂ.ಆರ್.ಅನಂತರಾಜು, ಬಿಆರ್‌ಸಿ ಎಂ.ಬಿ.ಶ್ರೀಕಂಠಸ್ವಾಮಿ ನೇತೃತ್ವ ವಹಿಸಿದ್ದಾರೆ.

ಮೈಸೂರಿನ ಅರಮನೆ ಅಂಗಳದ ತಾತ್ಕಾಲಿಕ ಶಾಲೆಯಲ್ಲಿರುವ ಮಾವುತರ ಹಾಗೂ ಕಾವಡಿಗರ ಮಕ್ಕಳಿಗೆ ಶಿಕ್ಷಕಿ  ದಿವ್ಯ ಪ್ರಿಯದರ್ಶಿನಿ ಅವರಿಂದ ಯೋಗ ಪಾಠ ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಮೋಸಿನ್ ತಾಜ್
ತಾರುಣ್ಯ
ಆಟದ ಮೂಲಕ ಚಟುವಟಿಕೆ ಕಲಿಸುವುದರೊಂದಿಗೆ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ
ಮೋಸಿನ್ ತಾಜ್ ಶಿಕ್ಷಕಿ ಚಾಮುಂಡಿಪುರಂ ವಿಎಂಇ ಬಾಲಬೋಧಿನಿ ಶಾಲೆ
ಪಾಠ ಚೆನ್ನಾಗಿದೆ ಹೇಳಿಕೊಡುತ್ತಾರೆ. ಅರಮನೆಯ ಮುಂದೆಯೇ ಓದುತ್ತಿರುವುದರಿಂದ ತುಂಬಾ ಸಂತೋಷವಾಗುತ್ತಿದೆ. ಇದು ಹೊಸ ಅನುಭವ
ತಾರುಣ್ಯ, 9ನೇ ತರಗತಿ ವಿದ್ಯಾರ್ಥಿನಿ
ಗಜಪಡೆಯ ಎರಡನೇ ತಂಡದಲ್ಲಿ ಬರಲಿರುವ 5 ಆನೆಗಳ ಮಾವುತ ಕಾವಾಡಿಗಳ ಮಕ್ಕಳೂ ಸೇರಿ 40ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಕಲಿಯಲಿದ್ದಾರೆ
ಐ.ಬಿ.ಪ್ರಭುಗೌಡ, ಡಿಸಿಎಫ್
ಅರಮನೆ ಆವರಣದ ಶಾಲೆಯಲ್ಲಿ ನಮ್ಮ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದು ಸಂತೋಷ. ಎಲ್ಲ ಸೌಲಭ್ಯ ನೀಡಿದ್ದಾರೆ
ನಂಜುಂಡಸ್ವಾಮಿ, ಕಾವಾಡಿಗ

‘ಟೆಂಟ್ ಶಾಲೆ ಪದ್ಧತಿ ಪರಿವರ್ತನೆ’

‘45 ದಿನಗಳಿಗೂ ಹೆಚ್ಚು ಸಮಯ ಕುಟುಂಬದೊಂದಿಗೆ ಇರುತ್ತಿದ್ದ ಮಕ್ಕಳು ಶಾಲೆಯನ್ನೇ ಮರೆತು ಬಿಡುತ್ತಿದ್ದರು. ಇದನ್ನು ಮನಗಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂಬ ಕಾರಣದಿಂದ ತಾತ್ಕಾಲಿಕ ಶಾಲೆಯನ್ನು ಔಪಚಾರಿಕವಾಗಿ ಆರಂಭಿಸಲಾಗಿದೆ. ಹಲವು ವರ್ಷಗಳಿಂದ ಆನೆ ಬಿಡಾರದ ಬಳಿ ಟೆಂಟ್ ಶಾಲೆ ಆರಂಭಿಸುವ ಪದ್ಧತಿಯಿತ್ತು. ನಾಲ್ಕೈದು ವರ್ಷದಿಂದ ಟೆಂಟ್ ಶಾಲೆ ಪದ್ಧತಿ ಪರಿವರ್ತನೆಯಾಗಿದೆ. ಮಕ್ಕಳಿಗೆ ಅಗತ್ಯ ಪರಿಕರಗಳಾದ ಪುಸ್ತಕ ಲೇಖನಿ ಸಮವಸ್ತ್ರವನ್ನೂ ನೀಡಲಾಗಿದೆ’ ಎಂದು ಡಿಡಿಪಿಐ ಜವರೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.