ADVERTISEMENT

ಮೈಸೂರಿನ ಗತ ವೈಭವ: ಈ ಗಣೇಶೋತ್ಸವ

40 ದಿನ ನಡೆಯುತ್ತಿದ್ದ ಸಂಭ್ರಮೋತ್ಸವ; ಕಾರಂಜಿ ಕೆರೆಯಲ್ಲಿ ವಿಸರ್ಜನಾ ಮಹೋತ್ಸವ

ಡಿ.ಬಿ, ನಾಗರಾಜ
Published 25 ಆಗಸ್ಟ್ 2020, 3:40 IST
Last Updated 25 ಆಗಸ್ಟ್ 2020, 3:40 IST
ಮೈಸೂರಿನ ಪದ್ಮಾ ಟಾಕೀಸ್ ಮುಂಭಾಗವಿರುವ ನೂರೊಂದು ಗಣಪತಿ ದೇಗುಲ
ಮೈಸೂರಿನ ಪದ್ಮಾ ಟಾಕೀಸ್ ಮುಂಭಾಗವಿರುವ ನೂರೊಂದು ಗಣಪತಿ ದೇಗುಲ   

ಮೈಸೂರು: ‘ನೂರೊಂದು ಗಣೇಶೋತ್ಸವ’ ನಾಲ್ಕೈದು ದಶಕದ ಅವಧಿ ಮೈಸೂರಿಗರ ಮನೆ ಮಾತಿನ ಉತ್ಸವವಾಗಿತ್ತು. 40 ದಿನವೂ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿತ್ತು. ಎಲ್ಲರನ್ನೂ ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸುತ್ತಿತ್ತು. ದಸರಾ ನಂತರದ ದೊಡ್ಡ ಉತ್ಸವವೂ ಇದೇ ಆಗಿತ್ತು.

ಗಣೇಶನ ಸನ್ನಿಧಿಯಲ್ಲಿ ನಿತ್ಯ ರಾತ್ರಿ ಹರಿಕಥೆ, ದೇವರ ನಾಮ, ಸುಗಮ ಸಂಗೀತ, ನಾಟಕ ಸೇರಿದಂತೆ ಇನ್ನಿತರೆ ಕಲೆಗಳ ಪ್ರದರ್ಶನವೂ ನಿರಂತರವಾಗಿ ನಡೆಯುತ್ತಿತ್ತು.

ಖ್ಯಾತನಾಮರು ಇಲ್ಲಿ ತಮ್ಮ ಕಲೆ ಪ್ರದರ್ಶಿಸುತ್ತಿದ್ದರು. ವರ್ಷದಿಂದ ವರ್ಷಕ್ಕೆ ಗಣೇಶೋತ್ಸವದ ವೈಭವ ಇಮ್ಮಡಿಗೊಳ್ಳುತ್ತಿತ್ತು. ಭಾದ್ರಪದ ಮಾಸದ ರಾತ್ರಿಗಳನ್ನು ಇಲ್ಲಿಯೇ ಕಳೆಯುತ್ತಿದ್ದವರ ಸಂಖ್ಯೆ ಅಸಂಖ್ಯಾತ... ಇದೀಗ ಎಲ್ಲವೂ ನೆನಪಷ್ಟೇ. ಗತ ವೈಭವದ ಸ್ಮರಣೆ.

ADVERTISEMENT

ಗಣೇಶೋತ್ಸವ ಕುರಿತು: ‘ಪದ್ಮಾ ಟಾಕೀಸ್ ಸರ್ಕಲ್‌ನ ಸೈಕಲ್‌ ಶಾಪ್‌ವೊಂದರಲ್ಲಿ ಈ ಗಣೇಶೋತ್ಸವ ಶುರುವಾಯ್ತು. ನಂತರ ಮೈಸೂರಿನಲ್ಲಿ ಖ್ಯಾತಿ ಗಳಿಸಿತು. 1955ರಲ್ಲಿ ನಾಗಣ್ಣ, ಶಿವರುದ್ರಪ್ಪ, ಶಿವಬಸಪ್ಪ ಮತ್ತಿತರರು ಸರ್ಕಲ್‌ನಲ್ಲಿದ್ದ ಉದ್ಯಾನದಲ್ಲಿ ನೂರೊಂದು ಗಣಪಮೂರ್ತಿ ಪ್ರತಿಷ್ಠಾಪಿಸಿ, ಉತ್ಸವಕ್ಕೆ ಚಾಲನೆ ನೀಡಿದರು. ಇದರ ಜೊತೆಗೆ 101 ಬಹುಮಾನಗಳ ಲಾಟರಿ ಆರಂಭಿಸಿದರು. ಕಾರಂಜಿ ಕೆರೆಯಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜಿಸುತ್ತಿದ್ದರು’ ಎಂದು ಈಗಿನ ನೂರೊಂದು ಗಣಪತಿ ದೇಗುಲದ ಅರ್ಚಕ ಸುನೀಲ್‌ ಕುಮಾರ್‌ ಶಾಸ್ತ್ರಿ ಗಣೇಶೋತ್ಸವದ ಐತಿಹ್ಯವನ್ನು ‘ಪ್ರಜಾವಾಣಿ’ಯೊಟ್ಟಿಗೆ ಹಂಚಿಕೊಂಡರು.

‘ವರ್ಷದಿಂದ ವರ್ಷಕ್ಕೆ ಗಣೇಶೋತ್ಸವದ ಖ್ಯಾತಿ ಎಲ್ಲೆಡೆ ಪಸರಿಸಿತು. 1980ರಲ್ಲಿ ಬೆಳ್ಳಿ ಮಹೋತ್ಸವ ಆಚರಣೆಗೊಂಡಿತು. ಸುತ್ತೂರಿನ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಈ ಉತ್ಸವದಲ್ಲಿ ಪಾಲ್ಗೊಂಡು, ನೂರೊಂದು ಗಣಪತಿಯ ಶಾಶ್ವತ ದೇಗುಲ ನಿರ್ಮಿಸುವಂತೆ ಪ್ರೇರಣೆ ನೀಡಿದರು. ಮೂವರು ಸ್ವಾಮೀಜಿಗಳ ಪ್ರೇರಣೆಯಂತೆ ದೇಗುಲ ನಿರ್ಮಾಣ ಶುರುವಾಯ್ತು. ‘ನೂರೊಂದು ಗಣಪತಿ ಸೇವಾ ಟ್ರಸ್ಟ್‌’ ರಚನೆಗೊಂಡಿತು. 1985ರಲ್ಲಿ 100 ಚಿಕ್ಕ ಗಣಪತಿ, ಒಂದು ಬೃಹತ್ ಮೂರ್ತಿಯನ್ನು ದೇಗುಲದಲ್ಲಿ ಪ್ರತಿಷ್ಠಾಪಿಸಲಾಯಿತು. ಇದರ ಬಳಿಕವೂ ಗಣೇಶೋತ್ಸವದ ವೈಭವ ಮುಂದುವರೆಯಿತು. ಆದರೆ ಈಚೆಗಿನ ದಶಕಗಳಲ್ಲಿ ಹಿಂದಿನ ವೈಭವ ಕ್ಷೀಣಿಸಿದೆ. ಶ್ರದ್ಧಾ–ಭಕ್ತಿಯ ಪೂಜೆ ಮಾತ್ರ ಎಂದಿನಂತೆ ಮುಂದುವರೆದಿದೆ’ ಎಂದು ಶಾಸ್ತ್ರಿ ಹೇಳಿದರು.

‘ದೇಗುಲ ಆರಂಭದ ಬಳಿಕವೂ ಮಣ್ಣಿನ ಗಣೇಶ ಪ್ರತಿಷ್ಠಾಪಿಸಿ, ಉತ್ಸವ ಆಚರಿಸುವುದು ಈ ಹಿಂದಿನಂತೆ ನಡೆದಿದೆ. ಆದರೆ ವೈಭವ ಕಡಿಮೆಯಾಗಿದೆ. ಮೊದಲು 15 ದಿನಕ್ಕಿಂತಲೂ ಹೆಚ್ಚು ದಿನ ಉತ್ಸವ ನಡೆದಿತ್ತು. ಇದೀಗ ಮೂರು ದಿನಕ್ಕೆ ಸೀಮಿತವಾಗಿದೆ. ಈ ಮೂರು ದಿನಗಳು ದೇಗುಲದ ಬಳಿ ಹರಿಕಥೆ, ಭಕ್ತಿಗೀತೆಯ ಕಾರ್ಯಕ್ರಮ ನಡೆಯಲಿವೆ’ ಎಂದು ನೂರೊಂದು ಗಣಪತಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಚ್‌.ಎಸ್.ರುದ್ರಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.