ADVERTISEMENT

ರೈಲುಗಳ ಟಿ.ವಿ ನಿಷ್ಕ್ರಿಯ; ಮಾಹಿತಿ, ಮನರಂಜನೆ ಎರಡರಿಂದಲೂ ಪ್ರಯಾಣಿಕರು ವಿಮುಖ

ನೇಸರ ಕಾಡನಕುಪ್ಪೆ
Published 17 ಏಪ್ರಿಲ್ 2019, 13:02 IST
Last Updated 17 ಏಪ್ರಿಲ್ 2019, 13:02 IST

ಮೈಸೂರು: ಮೈಸೂರು – ಬೆಂಗಳೂರು ನಡುವೆ ಪ್ರತಿನಿತ್ಯ ಸಂಚರಿಸುತ್ತಿರುವ ರೈಲುಗಳಲ್ಲಿ ಇರುವ ಬೋಗಿಗಳಲ್ಲಿ ಅಳವಡಿಸಿರುವ ಟಿವಿ ಪರದೆಗಳು ಸುಮಾರು 2 ತಿಂಗಳಿನಿಂದ ನಿಷ್ಕ್ರಿಯವಾಗಿದ್ದು, ಪ್ರಯಾಣಿಕರಿಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.

ರೈಲ್ವೆ ಪ್ರಯಾಣಿಕರಿಗೆ ಮನರಂಜನೆ ಹಾಗೂ ಮಾಹಿತಿಯನ್ನು ನೀಡುವ ಸಲುವಾಗಿ ಐದು ವರ್ಷಗಳಿಂದ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ದೇಶದಾದ್ಯಂತ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಆಯ್ದ ರೈಲುಗಳಲ್ಲಿ ಎಲ್‌ಸಿಡಿ ಟಿವಿ ಪರದೆಗಳನ್ನು ಹಾಕಲಾಗಿದೆ. ಆದರೆ, ಮೈಸೂರು– ಬೆಂಗಳೂರು ನಡುವೆ ಸಂಚರಿಸುತ್ತಿರುವ ರೈಲುಗಳಲ್ಲಿ ಮಾತ್ರ ಈ ಟಿವಿಗಳು ಸದಾ ಕಾಲ ಬಂದ್ ಆಗಿರುತ್ತವೆ.

ಸಾಮಾನ್ಯವಾಗಿ ಈ ಟಿ.ವಿ.ಗಳಲ್ಲಿ ಮನರಂಜನೆಗಾಗಿ ಸಿನಿಮಾ ಗೀತೆಗಳು, ಸಿನಿಮಾಗಳನ್ನು ಪ್ರದರ್ಶಿಸುವುದುಂಟು. ರೈಲು ಸಂಚರಿಸುವ ಅವಧಿಯಲ್ಲಿ ಈ ಟಿ.ವಿ.ಗಳು ಕೆಲಸ ಮಾಡುತ್ತವೆ. ಕೇವಲ ಮನರಂಜನೆ ಮಾತ್ರವೇ ಅಲ್ಲದೇ, ಮಾಹಿತಿಗೂ ಈ ಪರದೆ ಬಳಕೆಯಾಗುತ್ತಿದೆ. ಅಂದರೆ, ರೈಲ್ವೆ ಇಲಾಖೆಯ ಸೌಲಭ್ಯಗಳು, ರೈಲುಗಳಲ್ಲಿ ಪ್ರಯಾಣಿಕರು ಕೈಗೊಳ್ಳಬೇಕಾಗಿರುವ ಎಚ್ಚರಿಕೆ, ಪ್ರಯಾಣಿಕರ ಜವಾಬ್ದಾರಿ ಹಾಗೂ ಹಕ್ಕುಗಳನ್ನು ಈ ಪರದೆಗಳಲ್ಲಿ ನೀಡುವ ಮೂಲಕ ಮಾಹಿತಿ ನೀಡಲಾಗುತ್ತಿದೆ.

ADVERTISEMENT

ಮೈಸೂರು – ಬೆಂಗಳೂರು ನಡುವಿನ ಚಾಮುಂಡಿ ಎಕ್ಸ್‌‍ಪ್ರೆಸ್ ಹಾಗೂ ಟಿಪ್ಪು ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಈ ಎಲ್‌ಇಡಿ ಟಿ.ವಿ.ಗಳು ಅಳವಡಿತವಾಗಿವೆ. ಒಂದು ಬೋಗಿಗೆ 2 ಟಿ.ವಿ.ಗಳಂತೆ ರೈಲೊಂದಕ್ಕೆ ಕನಿಷ್ಠ 36 ಟಿ.ವಿ.ಗಳಿವೆ. ಎರಡು ರೈಲುಗಳಿಂದ 72 ಟಿ.ವಿ.ಗಳು ಅಳವಡಿತಗೊಂಡಿದೆ. ಆದರೆ, ಮೂಲ ಆಶಯಕ್ಕೆ ವ್ಯತಿರಿಕ್ತವಾಗಿ 2 ತಿಂಗಳಿಂದ ಪರದೆಗಳು ಕೆಲಸ ಮಾಡದೇ ‌ವ್ಯರ್ಥವಾಗಿವೆ.

‘ನಾವು ಪ್ರತಿನಿತ್ಯ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತೇವೆ. ರೈಲುಗಳಲ್ಲಿ ನಮಗೆ ಈ ಟಿ.ವಿ.ಗಳಿಂದ ಮನರಂಜನೆ ಸಿಗುತ್ತಿತ್ತು. ಆದರೆ, ಎರಡು ತಿಂಗಳಿಂದ ಟಿ.ವಿ.ಗಳು ಆಫ್‌ ಆಗಿವೆ. ಹಾಗಾಗಿ, ಇವು ಇದ್ದೂ ಇಲ್ಲದಂತಾಗಿವೆ’ ಎಂದು ರೈಲ್ವೆ ಪ್ರಯಾಣಿಕ ರಾಘವೇಂದ್ರ ರಾವ್‌ ‘ಪ್ರಜಾವಾಣಿ’ಗೆ ಬೇಸರ ವ್ಯಕ್ತಪಡಿಸಿದರು.

‘ಈ ಟಿ.ವಿ ಪರದೆಗಳಲ್ಲಿ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದದ್ದು ನಮಗೆ ಅನುಕೂಲಕಾರಿಯಾಗಿತ್ತು. ಅಲ್ಲದೇ, ಈ ಟಿ.ವಿ.ಗಳಿಂದ ಹೆಚ್ಚು ಅನುಕೂಲ ಪಡೆಯುತ್ತಿದ್ದದ್ದು ಅಂಧ ಪ್ರಯಾಣಿಕರು. ಅದರ ಮೂಲಕ ಅವರಿಗೆ ಮಾರ್ಗದರ್ಶನ ಸಿಕ್ಕಂತಾಗುತ್ತಿತ್ತು. ಆದರೆ, ಈಗ ಮಾಹಿತಿಯಿಂದಲೂ ವಿಮುಖವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

‘ಟಿ.ವಿ ಗಳಲ್ಲಿ ಮಾಹಿತಿ ನೀಡುವ ಕಾರ್ಯವನ್ನು ಹೊರಗುತ್ತಿಗೆ ನೀಡಲಾಗಿತ್ತು. ಈಗ ಗುತ್ತಿಗೆ ಅವಧಿ ಮುಗಿದಿದೆ. ಗುತ್ತಿಗೆ ನವೀಕರಣವಾದ ಬಳಿಕ ಮತ್ತೆ ಕಾರ್ಯಾರಂಭ ಮಾಡಲಿವೆ’ ಎಂದು ರೈಲ್ವೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.