ವಾಕಥಾನ್‌ನಲ್ಲಿ ಪಾಲ್ಗೊಂಡ ಮಹಿಳೆಯರು–
ಪ್ರಜಾವಾಣಿ ಚಿತ್ರ
ಮೈಸೂರು: ಮೈತುಂಬ ರೇಷ್ಮೆ ಸೀರೆಯುಟ್ಟು, ಮುಡಿಯಲ್ಲಿ ಘಮ್ಮೆನ್ನುವ ಮಲ್ಲಿಗೆ ಮುಡಿದ ನಾರಿಯರು ಗುರುವಾರ ನಗರದಲ್ಲಿ ‘ವಾಕಥಾನ್’ ಮೂಲಕ ಎಲ್ಲರ ಗಮನ ಸೆಳೆದರು.
ಅರಮನೆಯ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಬೆಳಿಗ್ಗೆ ಹತ್ತಕ್ಕೆಲ್ಲ ಮಹಿಳೆಯರ ಗುಂಪು ಸೇರತೊಡಗಿತ್ತು. ಒಬ್ಬರಿಗೊಬ್ಬರು ಪೈಪೋಟಿ ಎಂಬಂತೆ ಬಗೆಬಗೆಯ ವರ್ಣದ ಸೀರೆ ಉಟ್ಟು ಬಂದಿದ್ದರು. ಇದರೊಟ್ಟಿಗೆ ಹಾಡು–ಕುಣಿತವೂ ನಾರಿಶಕ್ತಿಯ ಸಂಭ್ರಮವನ್ನು ಇಮ್ಮಡಿಗೊಳಿಸಿತು. ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಡನೆ ಮಹಿಳೆಯರೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯು ಆಯೋಜಿಸಿದ್ದ ವಾಕಥಾನ್‌ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಚಾಲನೆ ನೀಡಿದರು. ಕಲಾವಿದರ ಜೊತೆಗೂಡಿ ತಾವೂ ಸಖತ್ ಸ್ಟೆಪ್ ಹಾಕುವ ಮೂಲಕ ನಾಗಲಕ್ಷ್ಮಿ ಗಮನ ಸೆಳೆದರು.
ಆಂಜನೇಯಸ್ವಾಮಿ ದೇಗುಲದಿಂದ ಆರಂಭವಾದ ವಾಕಥಾನ್ ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ ಮಾರ್ಗವಾಗಿ ಜೆ.ಕೆ. ಮೈದಾನಕ್ಕೆ ಸಾಗಿತು. ವಿವಿಧ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಗ್ರಾಮೀಣ ಭಾಗದಿಂದ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು.
ಮೈಸೂರು ಬ್ರಾಂಡ್ ಅನ್ನು ಬಿಂಬಿಸುವ ಮೈಸೂರು ರೇಷ್ಮೆ, ವೀಳ್ಯದೆಲೆ, ಮೈಸೂರು ಪಾಕ್, ನಂಜನಗೂಡು ರಸಬಾಳೆ ಮೊದಲಾದ ವಿವಿಧ ಉತ್ಪನ್ನಗಳನ್ನು ಒಳಗೊಂಡ ರಥವನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಮೆರವಣಿಗೆ ಮಾಡಿದ್ದು ಗಮನ ಸೆಳೆಯುವಂತೆ ಇತ್ತು.
‘ಎರಡು ದಿನದ ಹಿಂದಷ್ಟೇ ಈ ಕಾರ್ಯಕ್ರಮದ ಬಗ್ಗೆ ತಿಳಿಯಿತು. ನಮ್ಮ ಬಳಿಯೂ ಸಾಕಷ್ಟು ಮೈಸೂರು ರೇಷ್ಮೆ ಸೀರೆಗಳಿವೆ. ಇದನ್ನು ಉಟ್ಟು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕು ಎನ್ನುವ ಆಶಯದೊಂದಿಗೆ ತಾಯಿಯೊಂದಿಗೆ ಈ ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದೇನೆ. ಇಂತಹದ್ದೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ತುಂಬ ಖುಷಿ ಇದೆ’ ಎಂದು ಮೈಸೂರು ನಿವಾಸಿ ರಶ್ಮಿ ಸಂಭ್ರಮ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಉಪವಿಶೇಷಾಧಿಕಾರಿ ಬಿ.ಎಂ. ಸವಿತಾ, ಕಾರ್ಯಾಧ್ಯಕ್ಷ ಬಸವರಾಜು, ಸಮಿತಿಯ ಸದಸ್ಯರು ಪಾಲ್ಗೊಂಡರು.
ಎಲ್ಲ ಹೆಣ್ಣು ಮಕ್ಕಳಿಗೂ ರೇಷ್ಮೆ ಸೀರೆ ಎಂದರೆ ಬಲು ಇಷ್ಟ. ಇದು ನಮ್ಮ ಚೆಲುವನ್ನು ಹೆಚ್ಚಿಸುತ್ತದೆ. ಎಷ್ಟೇ ಹೊಸ ಉಡುಗೆ ಬಂದರೂ ಈ ಸೀರೆಯನ್ನು ಹಿಮ್ಮೆಟ್ಟಿಸಲು ಆಗದುಶ್ರುತಿ ಮೈಸೂರು ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.