ಮೈಸೂರು: ‘ಕರ್ನಾಟಕ ರಂಗಭೂಮಿ ಇತಿಹಾಸದಲ್ಲಿ ಮೈಸೂರು ರಂಗಭೂಮಿ ಸೃಷ್ಟಿಸಿರುವ ಚರಿತ್ರೆ ದೊಡ್ಡದು’ ಎಂದು ರಂಗಸಮಾಜ ಸದಸ್ಯ ಎಚ್.ಎಸ್.ಸುರೇಶ್ ಬಾಬು ಹೇಳಿದರು.
ಸಂಚಲನ ಮೈಸೂರು, ರಂಗರಥ ಬೆಂಗಳೂರು ಸಹಯೋಗದಲ್ಲಿ ನಗರದ ಕಲಾಮಂದಿರದ ತಾಲೀಮ ಕೊಠಡಿಯಲ್ಲಿ ಮಂಗಳವಾರ ನಡೆದ ನಟನಾಭ್ಯಾಸ ಶಿಬಿರದ ಉದ್ಘಾಟನೆಯಲ್ಲಿ ಮಾತನಾಡಿದರು.
‘ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ತನ್ನದೇ ಛಾಪು ಮೂಡಿಸುವಲ್ಲಿ ಮೈಸೂರು ರಂಗಭೂಮಿ ಯಶಸ್ವಿಯಾಗಿದೆ. ಇದನ್ನು ಪ್ರೋತ್ಸಾಹಿಸಲು ಸರ್ಕಾರ, ಅಕಾಡೆಮಿಗಳು ಅಥವಾ ಇತರೆ ಸಂಸ್ಥೆಗಳು ಪ್ರಶಸ್ತಿ ನೀಡದಿರುವುದು ವಿಷಾದನೀಯ’ ಎಂದರು.
ಶಿಬಿರ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಮಾತನಾಡಿ, ‘ಪಾಶ್ಚಿಮಾತ್ಯ ಪ್ರಭಾವದಿಂದ ಯುವ ಸಮೂಹವನ್ನು ದೂರ ಇರಿಸುವಲ್ಲಿ ರಂಗಭೂಮಿ ಚಟುವಟಿಕೆಗಳು ಸಹಕಾರಿ’ ಎಂದು ಹೇಳಿದರು.
‘ಜನರಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಯಾಗಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಇದಕ್ಕೆ ಇಲಾಖೆಯೂ ಕೈ ಜೋಡಿಸುತ್ತದೆ. ಯುವ ಸಮೂಹ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಆಗಸ್ಟ್ 15ರವರೆಗೆ 10 ಜನರಿಗೆ ನಟನಾಭ್ಯಾಸ ಶಿಬಿರ ನಡೆಯಲಿದೆ’ ಎಂದು ಸಂಚಲನ ಮೈಸೂರು ಅಧ್ಯಕ್ಷ ದೀಪಕ್ ಮೈಸೂರು ಮಾಹಿತಿ ನೀಡಿದರು.
ನಿರ್ದೇಶಕ ಆಸಿಫ್ ಕ್ಷತ್ರಿಯ, ನಟಿ ಶ್ವೇತಾ ಶ್ರೀನಿವಾಸ್, ಗುರುರಾಜ್ ತಲಕಾಡು, ವಿನೋದ್, ಗಾಯಕಿ ಸಿಂಚನಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.