ADVERTISEMENT

ಮೈಸೂರು ವಿ.ವಿ ಲಲಿತಕಲಾ ಕಾಲೇಜಿನ ಪ್ರೊ.ಎವಿಬಿಗೆ ಆತ್ಮೀಯ ಬೀಳ್ಕೊಡುಗೆ

ಕಾರ್ಯವೈಖರಿ ನೆನೆದ ಸಹೋದ್ಯೋಗಿಗಳು, ಒಡನಾಡಿಗಳು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 13:55 IST
Last Updated 26 ಡಿಸೆಂಬರ್ 2025, 13:55 IST
<div class="paragraphs"><p>ಮೈಸೂರು ವಿ.ವಿ. ಲಲಿತಕಲಾ ಕಾಲೇಜಿನ ಪ್ರೊ.ಎವಿಬಿಗೆ ಆತ್ಮೀಯ ಬೀಳ್ಕೊಡುಗೆ</p></div>

ಮೈಸೂರು ವಿ.ವಿ. ಲಲಿತಕಲಾ ಕಾಲೇಜಿನ ಪ್ರೊ.ಎವಿಬಿಗೆ ಆತ್ಮೀಯ ಬೀಳ್ಕೊಡುಗೆ

   

ಮೈಸೂರು: ‘ಮಾನವೀಯತೆ ಹಾಗೂ ವಿದ್ಯಾರ್ಥಿಗಳ ಕುರಿತ ಕಾಳಜಿಗೆ ಮತ್ತೊಂದು ಹೆಸರು ಪ್ರೊ.ಅನಿಟ ವಿಮಲಾ ಬ್ರ್ಗಾಗ್ಸ್‌’ ಎಂದು ಯುವರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸಿ.ಡಿ. ಪರಶುರಾಮ ಹೇಳಿದರು.

ಮೈಸೂರು ವಿ.ವಿ. ಲಲಿತಕಲಾ ಕಾಲೇಜಿನ ಪ್ರಾಂಶುಪಾಲ ಹುದ್ದೆಯಿಂದ ವಯೋನಿವೃತ್ತಿ ಹೊಂದುತ್ತಿರುವ ಪ್ರೊ.ಅನಿಟ ವಿಮಲಾ ಬ್ರ್ಯಾಗ್ಸ್‌ ಅವರಿಗೆ ಕಾಲೇಜಿನ ಸಭಾಂಗಣದಲ್ಲಿ ಶಿಷ್ಯ ಬಳಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ಪ್ರೊ.ಅನಿಟ ಅವರು ವಿವಿಯಲ್ಲಿ 38 ವರ್ಷಗಳ ಸೇವಾವಧಿಯಲ್ಲಿ ಮಹಾರಾಜ ಕಾಲೇಜಿನಲ್ಲಿಯೇ 35 ವರ್ಷ ಕೆಲಸ ಮಾಡಿದ್ದಾರೆ. ಈ ಪೈಕಿ 3 ವರ್ಷ ಪ್ರಾಂಶುಪಾಲರಾಗಿದ್ದರು. ಆಗ ನಾನು ಹಾಸ್ಟೆಲ್‌ನ ನಿಲಯಪಾಲಕನಾಗಿದ್ದೆ. ಅವರು ಹಾಸ್ಟೆಲ್‌ನ 552 ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಕಲ್ಪಿಸಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳಿರುವ ಗ್ರಂಥಾಲಯ, ಧ್ಯಾನ ಕೇಂದ್ರ, ‘ಡಿ’ ಗ್ರೂಪ್‌ ನೌಕರರಿಂದ ಹಿಡಿದು ಎಲ್ಲರೊಂದಿಗೂ ಸಹಭೋಜನ ಪ್ರಮುಖವಾದವು’ ಎಂದು ಹೇಳಿದರು.

‘ಪ್ರಾಧ್ಯಾಪಕಿಯಾಗಿ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿ ಇಂಗ್ಲಿಷ್‌ ಪಾಠ ಮಾಡುತ್ತಿದ್ದರು. ಕಲಿಕೆಯಲ್ಲಿ ಹಿಂದುಳಿದವರಿಗೆ ಬಿಡುವಿನಲ್ಲಿ ವಿಶೇಷವಾಗಿ ಕಲಿಸುತ್ತಿದ್ದರು’ ಎಂದರು.

ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಸರ್ವಮಂಗಳಬಾಯಿ ಮಾತನಾಡಿ, ‘ಅನಿಟ ಅವರು ದಕ್ಷತೆ, ಪ್ರಾಮಾಣಿಕತೆ ವೃತ್ತಿ ನಿರ್ವಹಿಸಿದ್ದಾರೆ. ಹಿಂದೆ ಗುರು- ಶಿಷ್ಯರ ನಡುವೆ ಅತ್ಯುತ್ತಮ ಬಾಂಧವ್ಯವಿತ್ತು. ಅಂತಹ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಅಧ್ಯಾಪಕರ ಕೈಯಲ್ಲಿಯೇ ಇರುತ್ತದೆ’ ಎಂದು ಹೇಳಿದರು.

ಮಹಾರಾಜ ಕಾಲೇಜು ಜಾನಪದ ವಿಭಾಗದ ಮುಖ್ಯಸ್ಥೆ ಪ್ರೊ.ಎಚ್.ಆರ್‌. ಚೇತನಾ ಅಭಿನಂದನಾ ಭಾಷಣ ಮಾಡಿದರು.

‘ರಾಜ್ಯ ಸರ್ಕಾರ ವಿವಿಧ ಭಾಗ್ಯಗಳನ್ನು ಜಾರಿಗೊಳಿಸಿದೆ. ನನಗೆ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಹಾಗೂ ಕುಟುಂಬದ ಪ್ರೀತಿಯ ಭಾಗ್ಯ ಸಿಕ್ಕಿದೆ’ ಎಂದು ಅನಿಟ ಭಾವುಕರಾದರು.

‘38 ವರ್ಷಗಳ ಸೇವೆ ಸಂತೋಷ ಹಾಗೂ ತೃಪ್ತಿ ಕೊಟ್ಟಿದೆ. ವಿದ್ಯಾರ್ಥಿಗಳು ಎಲ್ಲೇ ಸಿಕ್ಕರೂ ಪ್ರೀತಿ–ಗೌರವದಿಂದ ಮಾತನಾಡಿಸುತ್ತಾರೆ. ನನ್ನ ಸೇವಾವಧಿಯಲ್ಲಿ ಯಾವುದೇ ಕೋರ್ಸ್‌ ಬಂದ್‌ ಆಗದಂತೆ ನೋಡಿಕೊಂಡಿದ್ದೇನೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕಿ ಎಚ್‌.ಎಂ. ವಸಂತಮ್ಮ ಮಾತನಾಡಿದರು.

ಅನಿಟ ಅವರ ಪತಿ ನೆಸ್ಟರ್‌ ಡಿಸೋಜ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಸಿಂಡಿಕೇಟ್‌ ಸದಸ್ಯ ಕ್ಯಾತನಹಳ್ಳಿ ಸಿ. ನಾಗರಾಜು ಮುಖ್ಯ ಅತಿಥಿಗಳಾಗಿದ್ದರು. ಪಿ.ಎನ್. ಶ್ರೀದೇವಿ, ಲತಾ ಕೆ. ಬಿದ್ದಪ್ಪ, ಇಂದಿರಮ್ಮ, ತಿಮ್ಮರಾಯಪ್ಪ, ರಾಚಯ್ಯ, ಬಿ.ಕೆ. ಜ್ಞಾನಪ್ರಕಾಶ್, ಎಸ್‌. ಕೃಷ್ಣಪ್ಪ, ಆರ್‌. ನಿಂಗರಾಜು, ನಿಂಗರಾಜು ಹಳೇಬೀಡು, ಗ್ರಂಥಪಾಲಕ ಸೋಮಶೇಖರ್‌, ಬಸವರಾಜು ಕುರಬೂರು, ಜೆ, ಹೇಮಂತ್‌, ಸಬಿತಾ, ಪ್ರಜ್ವಲ್‌, ಸಿಂಥಿ, ಮಹೇಶ್‌, ಭವ್ಯಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.