ADVERTISEMENT

ಮೈಸೂರು ವಿಶ್ವವಿದ್ಯಾಲಯ | ಹಾಸ್ಟೆಲ್‌ ನಿಯಮ ಮೀರಿ ಇರುವಂತಿಲ್ಲ: ಕುಲಸಚಿವೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:52 IST
Last Updated 20 ನವೆಂಬರ್ 2025, 4:52 IST
ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿ ಸ್ನಾತಕೋತ್ತರ ವಿಭಾಗದ ಹುಡುಗರ ವಿದ್ಯಾರ್ಥಿನಿಲಯದಲ್ಲಿ ಸಿಬ್ಬಂದಿ ನಲ್ಲಿ ರಿಪೇರಿ ಮಾಡುತ್ತಿರುವುದು
ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿ ಸ್ನಾತಕೋತ್ತರ ವಿಭಾಗದ ಹುಡುಗರ ವಿದ್ಯಾರ್ಥಿನಿಲಯದಲ್ಲಿ ಸಿಬ್ಬಂದಿ ನಲ್ಲಿ ರಿಪೇರಿ ಮಾಡುತ್ತಿರುವುದು   

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯಗಳಿಗೆ ಕುಲಸಚಿವೆ ಎಂ.ಕೆ.ಸವಿತಾ ಭೇಟಿ ನೀಡಿ ಮೂಲಸೌಕರ್ಯಗಳ ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸಿದರು.

ಬಳಿಕ ಮಾತನಾಡಿ, ‘ಹಾಸ್ಟೆಲ್‌ ನಿಯಮ ಮೀರಿ, ಇಲ್ಲಿನ ಸಾಮರ್ಥ್ಯಕ್ಕಿಂತ ಹೆಚ್ಚುವರಿಯಾಗಿ ಇರುವವರನ್ನು ಕಳುಹಿಸುತ್ತೇವೆ. ವಿಶ್ವವಿದ್ಯಾಲಯದ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ವಿದ್ಯುತ್‌, ಕುಡಿಯುವ ನೀರು ಹಾಗೂ ಶೌಚಾಲಯದ ಮೂಲಸೌಕರ್ಯ ಕೊರತೆಯ ಬಗ್ಗೆ ವಿದ್ಯಾರ್ಥಿಗಳಿಂದ ಆಕ್ಷೇಪಣೆ ಬಂದಿದ್ದು, ವಾರದ ಹಿಂದೆಯೇ ಎಂಜಿನಿಯರ್‌ಗಳ ಸಭೆ ನಡೆಸಿ, ಹತ್ತು ದಿನಗಳೊಳಗೆ ಸಮಸ್ಯೆ ಸರಿಪಡಿಸಬೇಕು ಎಂದು ತಿಳಿಸಲಾಗಿದೆ’ ಎಂದರು.

‘ವಿದ್ಯಾರ್ಥಿಗಳು ಮೂಲ ಸೌಲಭ್ಯ ಸಮಸ್ಯೆಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ವಿದ್ಯಾಭ್ಯಾಸ ಬಗ್ಗೆ ಗಮನ ಹರಿಸಿ. ಮೈಸೂರು ವಿವಿ ಹಾಸ್ಟೆಲ್‌ ಅಷ್ಟೇ ಅಲ್ಲದೆ ಮಹಾರಾಜ, ಯುವರಾಜ ಕಾಲೇಜಿಗಳ ವಸತಿ ನಿಲಯಗಳಿಗೂ ತೆರಳಿ ಸಮಸ್ಯೆ ಗಮನಿಸಿರುವೆ. ಕ್ಯಾಂಪಸ್‌ನಲ್ಲಿ ವಿದ್ಯುತ್‌ ದೀಪದ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಪಿಪಿಪಿ ಮಾದರಿಯಲ್ಲಿ ಯೋಜನೆ ಸಿದ್ಧಪಡಿಸಿ ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಿದ್ದೆವು. ಆದರೆ ಚಳಿಗಾಲವಾದ್ದರಿಂದ ಸಂಜೆ ವೇಳೆ ಬೇಗನೆ ಕತ್ತಲಾವರಿಸುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ಅರಿತು ವಿವಿಯೇ ವಿದ್ಯುತ್‌ ದೀಪಗಳ ದುರಸ್ತಿಗೆ ಮುಂದಾಗಿದೆ. ಒಟ್ಟು 120 ದೀಪಗಳ ಅವಶ್ಯಕತೆಯಿದ್ದು, ತುರ್ತಾಗಿ 60 ದೀಪ ಅಳವಡಿಸಲು ಸೂಚಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಹಾಸ್ಟೆಲ್‌ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಾಸವಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಹೀಗಾಗಿ ವಿವಿ ಹಾಸ್ಟೆಲ್‌ಗಳ ನಿಯಮ ಮೀರಿ ಹೆಚ್ಚುವರಿಯಾಗಿ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ, ತಕ್ಷಣ ತೆರವುಗೊಳಿಸಲು ಕ್ರಮ ವಹಿಸುತ್ತೇವೆ. ವಿದ್ಯಾರ್ಥಿಗಳ ಕಲ್ಯಾಣ ಮುಖ್ಯವಾದರೂ, ಹಾಸ್ಟೆಲ್ ಸಾಮರ್ಥ್ಯಕ್ಕಿಂತ ಮೀರಿದ ವಾಸವನ್ನು ಅನುಮತಿಸುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.