
ಮೈಸೂರು: ಕೊಪ್ಪಳ ಜಿಲ್ಲೆ ಕನಕಗಿರಿ ಸಮೀಪದ ಕನ್ನೇರಮಡು ಗ್ರಾಮದ ರೈತ ಕಾರ್ಮಿಕ ದಂಪತಿ ಪುತ್ರ ಚಂದ್ರಶೇಖರ ಎಂ.ಎ ಕನ್ನಡದಲ್ಲಿ 13 ಚಿನ್ನದ ಪದಕ, 4 ನಗದು ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ.
ಸೋಮವಾರ ಇಲ್ಲಿನ ಕ್ರಾಫರ್ಡ್ ಭವನದಲ್ಲಿ ನಡೆದ ಮೈಸೂರು ವಿಶ್ವವಿದ್ಯಾಲಯದ 106ನೇ ಘಟಿಕೋತ್ಸವದಲ್ಲಿ ಪದಕ ಪಡೆದ ಸಂಭ್ರಮವನ್ನು ಪೋಷಕರಾದ ಸಣ್ಯಪ್ಪ– ಶಾಂತಮ್ಮ ಅವರೊಂದಿಗೆ ಹಂಚಿಕೊಂಡರು. ಮಗನ ಸಾಧನೆ ಕಂಡು ಭಾವುಕರಾದರು.
ಕೊಪ್ಪಳದ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಪದವಿ, ನಂತರ ಮೈಸೂರಿನಲ್ಲಿ ಬಿ.ಇಡಿ ಪದವಿ ಪಡೆದ ಚಂದ್ರಶೇಖರ್, ಕನ್ನಡ ಸಾಹಿತ್ಯದ ಕುರಿತ ಒಲವಿನಿಂದ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಸೇರಿದರು. ಪ್ರಥಮದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗುವ ಗುರಿ ಹೊಂದಿದ್ದಾರೆ.
‘3 ಎಕರೆ ಒಣ ಭೂಮಿ ಇದೆ. ಉನ್ನತ ಶಿಕ್ಷಣ ಕೊಡಿಸಲು ಪೋಷಕರು ದುಡಿದಿದ್ದಾರೆ. ಬೇಗನೆ ಕೆಲಸ ತೆಗೆದು ಕೊಳ್ಳಬೇಕು. ಟಿಇಟಿ, ಕೆ–ಸೆಟ್ ಆಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದೇನೆ’ ಎಂದು ನುಡಿದರು.
ಹರ್ಮೀನ್‌ಗೆ 6 ಚಿನ್ನದ ಪದಕ:
ಟಿ.ಹರ್ಮೀನ್ ಅವರು ಬಿಎಸ್‌ಸಿ ಪದವಿಯಲ್ಲಿ 6 ಚಿನ್ನದ ಪದಕ ಮತ್ತು 5 ನಗದು ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ.
ಇವರು, ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗದಲ್ಲಿ ಬಸ್ ಕಂಡಕ್ಟರ್ ಆಗಿರುವ ತಾಯಬ್ ಅಹ್ಮದ್ ಅವರ ಪುತ್ರಿ. ಮೂಲತಃ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದವರು. ಮೈಸೂರಿನಲ್ಲಿ ವಾಸ. ತಾಯಿ ರುಕ್ಸಾನಾ ಅವರು ನಾಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿ.
‘ತಂದೆ–ತಾಯಿ, ದೊಡ್ಡಮ್ಮ, ಚಿಕ್ಕಮ್ಮ ಅವರೇ ಪ್ರೇರಣೆ. ಸರ್ಕಾರಿ ಉದ್ಯೋಗದಲ್ಲಿರುವ ಅವರಂತೆ ಸೇವೆ ಸಲ್ಲಿಸುವ ಆಸೆಯಿದೆ. ಈಗ ಹೈದರಾಬಾದ್‌ನ ಸೇಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿ ಎಂ.ಎಸ್ಸಿ ಸಸ್ಯವಿಜ್ಞಾನ ಪದವಿ ಓದುತ್ತಿದ್ದು, ಅಲ್ಲಿಯೇ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದೇನೆ’ ಎಂದು ಹರ್ಮೀನ್ ಹೇಳಿದರು.
ಎಂ.ಕಾಂನಲ್ಲಿ 7 ಚಿನ್ನದ ಪದಕ, 2 ನಗದು ಬಹುಮಾನ ಪಡೆದಿರುವ ಎಂ.ಸುಮಲತಾ, ಮೈಸೂರು ತಾಲ್ಲೂಕಿನ ಮಾರಶೆಟ್ಟಿಹಳ್ಳಿಯ ರೈತ ದಂಪತಿ ಮಹೇಶ್– ಮಂಜುಳಾ ಪುತ್ರಿ. ಸಹಾಯಕ ಪ್ರಾಧ್ಯಾಪಕಿಯಾಗಲು ತಯಾರಿ ನಡೆಸಿದ್ದಾರೆ.
ದೃಷ್ಟಿ ವಂಚಿತೆಯ ಸಾಧನೆ’: ದೃಷ್ಟಿದೋಷವುಳ್ಳ ನಿಸರ್ಗಾ ಎಸ್.ಗೌಡ, ಕನ್ನಡ ಎಂ.ಎ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಹಾಸನದ ಹೊಳೆನರಸೀಪುರದ ಅವರು ಸಂಶೋಧನೆ ನಡೆಸುತ್ತಿದ್ದಾರೆ.
ಅದಿತಿಗೆ 24 ಪ್ರೇರಣಾಗೆ 16 ಚಿನ್ನದ ಪದಕ
ದಕ್ಷಿಣಕನ್ನಡ ಜಿಲ್ಲೆ ಮೂಲ್ಕಿಯ ಎನ್.ಅದಿತಿ ಎಂ.ಎಸ್ಸಿ ರಸಾಯನವಿಜ್ಞಾನದಲ್ಲಿ 24 ಚಿನ್ನದ ಪದಕ ಹಾಗೂ 8 ನಗದು ಬಹುಮಾನ ಪಡೆದರು. ತಂದೆ ನಿರಂಜನ್ ನಾಯ್ಕ್ ಬೈಕಂಪಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರೆ ತಾಯಿ ಶುಭಲಕ್ಷ್ಮಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿ. ಪೋಷಕರಂತೆಯೇ ಪಿಎಚ್.ಡಿ ನಂತರ ಅಧ್ಯಾಪಕಿಯಾಗುವ ಆಕಾಂಕ್ಷೆಯನ್ನು ಅದಿತಿ ಹೊಂದಿದ್ದಾರೆ. ಮಂಡ್ಯದ ಎಸ್.ಎಲ್.ಪ್ರೇರಣಾ ಎಂ.ಟೆಕ್‌ನಲ್ಲಿ 16 ಚಿನ್ನದ ಪದಕ ಪಡೆದಿದ್ದು ತಂದೆ ಲೋಕಪ್ರಕಾಶ್ ನಾರಾಯಣ್ ಉಪನ್ಯಾಸಕರಾಗಿದ್ದರೆ ತಾಯಿ ಶಿಲ್ಪಾ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿ. ಶ್ರೀಜಯಚಾಮರಾಜ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪಿಎಚ್.ಡಿ ಮಾಡುತ್ತಿರುವ ಪ್ರೇರಣಾಗೆ ಬೋಧಕಿಯಾಗುವ ಹಂಬಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.