ADVERTISEMENT

ದಾರಿ ಯಾವುದಯ್ಯಾ ಮಹಾರಾಣಿ ಸಮಾಧಿಗೆ?

ಸಮಾಧಿಯನ್ನು ಸ್ಮಾರಕ ಎಂದು ಇದೂವರೆಗೂ ಘೋಷಣೆ ಮಾಡಿಲ್ಲ, ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ

ಗಣಂಗೂರು ನಂಜೇಗೌಡ
Published 19 ಆಗಸ್ಟ್ 2019, 19:31 IST
Last Updated 19 ಆಗಸ್ಟ್ 2019, 19:31 IST
ಶ್ರೀರಂಗಪಟ್ಟಣ ಸಮೀಪದ ಪಶ್ಚಿಮವಾಹಿನಿ ಬಳಿ ಇರುವ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪನಂಜಮ್ಮಣ್ಣಿ ಅವರ ಸಮಾಧಿ
ಶ್ರೀರಂಗಪಟ್ಟಣ ಸಮೀಪದ ಪಶ್ಚಿಮವಾಹಿನಿ ಬಳಿ ಇರುವ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪನಂಜಮ್ಮಣ್ಣಿ ಅವರ ಸಮಾಧಿ   

ಶ್ರೀರಂಗಪಟ್ಟಣ: ಸರಿ ಸುಮಾರು 170 ವರ್ಷಗಳ ಕಾಲ ಒಡೆಯರ್ ದೊರೆಗಳ ರಾಜಧಾನಿಯಾಗಿದ್ದ ದ್ವೀಪ ಪಟ್ಟಣದ ಸ್ಮಾರಕಗಳು ಅವಸಾನ ಹೊಂದುತ್ತಿವೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ತಾಯಿ (ತಂದೆಯ ಮೊದಲ ಪತ್ನಿ-ಮಲತಾಯಿ) ಕೆಂಪನಂಜಮ್ಮಣ್ಣಿ (ಸಮುಖದ ಕೆಂಪುನಂಜಮ್ಮಣ್ಣಿ) ಅವರ ಸಮಾಧಿ ಕೂಡ ಶಿಥಿಲಾವಸ್ಥೆ ತಲುಪುತ್ತಿರುವುದು ಆಡಳಿತ ನಡೆಸುವವರ ನಿರ್ಲಕ್ಷ್ಯದ ಬೆಳಕಿಂಡಿಯಾಗಿದೆ.

ಪಶ್ಚಿಮವಾಹಿನಿ ಬಳಿ, ಕಾವೇರಿ ನದಿ ದಡದಲ್ಲಿರುವ ಕೆಂಪು ನಂಜಮ್ಮಣ್ಣ ಅವರ ಸಮಾಧಿಯ ಸುತ್ತ ತಂತಿ ಬೇಲಿ ನಿರ್ಮಿಸಲಾಗಿದೆ. ಖಾಸಗಿ ವ್ಯಕ್ತಿಯ ತೋಟದ ಮಧ್ಯೆ ಸೇರಿಕೊಂಡಿರುವ ಈ ಸಮಾಧಿ ನೋಡಲು ಯಾರಿಗೂ ಅವಕಾಶ ಇಲ್ಲದಂತಾಗಿದೆ. ಸ್ಥಳೀಯರಿಗೆ ಇದು ಮಹಾರಾಣಿಯ ಸಮಾಧಿ ಎಂಬುದೇ ಗೊತ್ತಿಲ್ಲ. ಈ ಸಮಾಧಿಯನ್ನು ಸ್ಮಾರಕ ಎಂದು ಇದೂವರೆಗೆ ಘೋಷಿಸದೇ ಇರುವುದು ಅಚ್ಚರಿ ಮೂಡಿಸಿದೆ.

ಕಲ್ಲಿನ 12 ಕಂಬಗಳಿಂದ ನಿರ್ಮಿಸಿರುವ ಈ ಸಮಾಧಿಯ ಒಳಭಾಗ ದನದ ಕೊಟ್ಟಿಗೆಯಾಗಿ ಮಾರ್ಪಟ್ಟಿದೆ. ಸಮಾಧಿ ಮಧ್ಯೆ ಇರುವ ಗ್ರಾನೈಟ್ ಶಿಲೆಯ ಬೃಂದಾವನದ ಮೇಲೆ ಮುರುಕು ಚಾಪೆ, ಪ್ಲಾಸ್ಟಿಕ್ ಚೀಲಗಳು ಬಿದ್ದಿವೆ. ಸ್ಮಾರಕದ ಮೇಲೆ ಆಲದ ಮರ ಬೆಳೆಯುತ್ತಿದ್ದು, ಚಾವಣಿಯಲ್ಲಿ ಬಿರುಕು ಮೂಡಿದೆ. ಸಮಾಧಿಯ ಸುತ್ತಲೂ ಇರುವ ಕಾಂಪೌಂಡ್ ಭಾಗಶಃ ಕುಸಿದಿದೆ. ಅದರ ಮೇಲೂ ಮರಗಳು ಬೆಳೆಯುತ್ತಿವೆ. ಒಳಾವರಣದಲ್ಲಿ ಕಾಲಿಡಲು ಆಗದಷ್ಟು ಮುಳ್ಳು ಗಿಡಗಳು ಬೆಳೆದಿವೆ.

ADVERTISEMENT

ದಾರಿ ಬಂದ್: ಕೆಲವು ವರ್ಷಗಳ ಹಿಂದೆ ಈ ಸಮಾಧಿ ಬಳಿಗೆ ತೆರಳಲು ಇದ್ದ ದಾರಿಯನ್ನು ಈಗ ಸಂಪೂರ್ಣ ಬಂದ್ ಮಾಡಲಾಗಿದೆ. ಈ ಸ್ಮಾರಕ ನೋಡಲೇಬೇಕು ಎನ್ನುವವರು ಪಾಲಹಳ್ಳಿ ಕಡೆಯ ರಸ್ತೆ ಬದಿಯಿಂದ ಕೊರಕಲು ದಾಟಿ ತೋಟದ ಒಳಗೆ ಬರಬೇಕು. ಆದರೂ ವಯೋ ವೃದ್ಧರು, ಮಹಿಳೆಯರು ಈ ದಾರಿಯಲ್ಲಿ ಬರುವುದು ಕಷ್ಟಸಾಧ್ಯ.

ಖಾಸಾ ಚಾಮರಾಜ ಒಡೆಯರ್ (1776-96) ಅವರ ಮೊದಲ ಪತ್ನಿ ಕೆಂಪನಂಜಮ್ಮಣ್ಣಿ ಅವರ ಸಮಾಧಿಯ ಮುಂದಿನ ತಳಪಾಯದಲ್ಲಿ ಶಿಲಾ ಶಾಸನ ಕೆತ್ತಲಾಗಿದೆ. ಶ್ರೀರಂಗಪಟ್ಟಣದಲ್ಲಿ, 1794ರಲ್ಲಿ ಜನಿಸಿದ ಮುಮ್ಮಡಿ ಕೃಷ್ಣರಾಜ ಒಡೆಯರ್ (1799-1868) ಅಧಿಕಾರ ವಹಿಸಿಕೊಳ್ಳುವ ವೇಳೆ ರಾಜಧಾನಿ ಮೈಸೂರಿಗೆ ಸ್ಥಳಾಂತರಗೊಂಡರೂ ತಮ್ಮ ತಾಯಿ ಕೆಂಪುನಂಜಮ್ಮಣ್ಣಿ (ಖಾಸಾ ಚಾಮರಾಜ ಒಡೆಯರ್ ಅವರ 7 ಜನ ಪತ್ನಿಯರಲ್ಲಿ ಮೊದಲಿಗರು- ಮುಮ್ಮಡಿಯವರ ಹೆತ್ತ ತಾಯಿ ತಾಂಡವಾಡಿಯ ಲಕ್ಷ್ಮಮ್ಮಮ್ಮಣ್ಣಿ)ಯ ಸಮಾಧಿಯನ್ನು ಕಾವೇರಿ ನದಿ ತೀರದ ಪಶ್ಚಿಮವಾಹಿನಿಯಲ್ಲಿ ನಿರ್ಮಿಸಿರುವ ಬಗ್ಗೆ ಈ ಶಾಸನದಿಂದ ತಿಳಿದು ಬರುತ್ತದೆ.

4ನೇ ಆಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪು ಹತನಾದ ಬಳಿಕ, ಒಪ್ಪಂದದಂತೆ ಬ್ರಿಟಿಷರು ಒಡೆಯರ್ ವಂಶಸ್ಥರಿಗೆ ಮೈಸೂರು ರಾಜ್ಯದ ಒಂದು ಭಾಗವನ್ನು ಬಿಟ್ಟು ಕೊಟ್ಟರು. ಆ ವೇಳೆ ರಾಜಧಾನಿ ಮೈಸೂರಿಗೆ (1800) ಸ್ಥಳಾಂತರಗೊಂಡಿತು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಪ್ರಾಪ್ರ ವಯಸ್ಸಿಗೆ ಬರುವವರೆಗೆ ರಾಜಮಾತೆ ಅವರೇ ಆಡಳಿತ ನೋಡಿಕೊಳ್ಳುತ್ತಿದ್ದರು ಎಂಬುದು ಗಮನಾರ್ಹ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.