
ಮೈಸೂರು: ‘ಮಂಡಕಳ್ಳಿಯ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಈ ಮೊದಲು ಇದ್ದ ಬೈಪಾಸ್ ರಸ್ತೆ ನಿರ್ಮಾಣ ವಿನ್ಯಾಸ ಬದಲಾವಣೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಸಮ್ಮತಿ ನೀಡಿದ್ದು, ಅದರಂತೆ 9 ಕಿ.ಮೀ ಇದ್ದ ಬೈಪಾಸ್ ರಸ್ತೆ 3 ಕಿ.ಮೀಗೆ ಕಡಿತಗೊಳ್ಳಲಿದೆ. ಅದರಲ್ಲಿ 520 ಮೀಟರ್ ಸುರಂಗವೂ ಇರಲಿದೆ’ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮಿಲಿಂದ್ ಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ, ‘ವಿಮಾನ ನಿಲ್ದಾಣ ವಿಸ್ತರಣೆಗೆ ಈ ಮೊದಲು ರೂಪಿಸಿದ್ದ ಬೈಪಾಸ್ ವಿನ್ಯಾಸ ಮಾರ್ಪಾಡು ಮಾಡಲಾಗಿದೆ. ಹೊಸ ಡಿಪಿಆರ್ ಅನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರದ ಭದ್ರತಾ ಅನುಮೋದನೆಯಷ್ಟೇ ಬಾಕಿ ಇದೆ’ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ‘ರನ್ ವೇ ವಿಸ್ತರಣೆಗೆ ಹೆಚ್ಚುವರಿ 240 ಎಕರೆ ಬೇಕಿದ್ದು, 206 ಎಕರೆ ಸ್ವಾಧೀನ ಮಾಡಿಕೊಳ್ಳಲಾಗಿದೆ. 160 ಎಕರೆ ಭೂಮಿಗೆ ಪರಿಹಾರವನ್ನು ನೀಡಲಾಗಿದೆ. ಉಳಿದ 46 ಎಕರೆಯಲ್ಲಿ 34 ಮಂದಿಗೆ ಹಣ ನೀಡಬೇಕಿದೆ. ಮೂರು ತಿಂಗಳಲ್ಲಿ ಭೂಸ್ವಾಧೀನ ಮಾಡಿಕೊಡಲಾಗುತ್ತದೆ’ ಎಂದು ತಿಳಿಸಿದರು.
‘ಮೈಸೂರು– ಕುಶಾಲನಗರ (ಎನ್‌ಎಚ್–275) ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ನಡೆದಿದ್ದು, ಬೈಲುಕುಪ್ಪೆಯ ಟಿಬೆಟನ್ ಪುನರ್ವಸತಿಯಲ್ಲಿ 70 ಎಕರೆ ಬೇಕಿದೆ. ಅದು ಸರ್ಕಾರದ ಹೆಸರಿನಲ್ಲಿಯೇ ಇದ್ದು, ಬೇರೆಡೆ ಒಂದೇ ಕಡೆ ಅಷ್ಟು ಭೂಮಿ ಕೊಡಲು ಜಾಗವಿಲ್ಲ. ಹೀಗಾಗಿ, ಬಿಡಿ ಭೂಮಿ ನೀಡಲು ₹ 30 ಕೋಟಿ ಆಗಲಿದೆ’ ಎಂದರು.
‘ಇದೇ ಹೆದ್ದಾರಿಯ ಸರ್ವಿಸ್ ರಸ್ತೆ ಕಾಮಗಾರಿಗೆ ಜನರು ತಡೆ ಒಡ್ಡುತ್ತಿದ್ದಾರೆ. ಬನ್ನಿಕುಪ್ಪೆಯಲ್ಲಿ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಅನುಮತಿ ಸಿಕ್ಕಿಲ್ಲ’ ಎಂದು ಮಿಲಿಂದ್‌ಕುಮಾರ್ ಸಭೆಯ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಇದನ್ನು ಕೂಡಲೇ ಬಗೆಹರಿಸಿ’ ಎಂದರು.
‘ಮೈಸೂರು– ನಂಜನಗೂಡು, ಹುಣಸೂರು, ತಿ.ನರಸೀಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ 8 ಅಪಘಾತ ಸ್ಥಳಗಳನ್ನು ಗುರುತಿಸಿದ್ದು, ಅಲ್ಲಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ನಡೆದಿದೆ’ ಎಂದು ಮಿಲಿಂದ್ ತಿಳಿಸಿದರು.
‘ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಪಾರದರ್ಶಕವಾಗಿ ಸೌಲಭ್ಯ ತಲುಪಿಸಬೇಕು. ಶೇ 100ರಷ್ಟು ಅನುದಾನ ಬಳಕೆ ಆಗಬೇಕು. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ₹ 25 ಸಾವಿರ ಕೋಟಿ ಅನುದಾನವಿದ್ದು, ಕೂಡಲೇ ಪ್ರಸ್ತಾವನೆ ಸಲ್ಲಿಸಿ’ ಎಂದು ಕುಮಾರಸ್ವಾಮಿ ಜಿಲ್ಲಾಡಳಿತಕ್ಕೆ ಸೂಚಿಸಿದರು.
ಶಾಸಕರಾದ ಜಿ.ಡಿ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಡಿಸಿಪಿ ಕೆ.ಎಸ್.ಸುಂದರರಾಜು, ದಿಶಾ ಸಮಿತಿ ಸದಸ್ಯರಾದ ಎಂ.ಅಶ್ವಿನ್ ಕುಮಾರ್, ಎಚ್.ಸಿ.ಕುಮಾರ್, ಡಿ.ಜೆ.ರೇಖಾ ಜಗದೀಶ್, ಟಿ.ಎಸ್.ಲಕ್ಷ್ಮಿ, ಪ್ರೇಮಾ ಶಂಕರೇಗೌಡ, ನರಸಿಂಹಸ್ವಾಮಿ ಪಾಲ್ಗೊಂಡಿದ್ದರು.
‘ಅನುಮತಿ ಪಡೆಯದೇ ಪರೀಕ್ಷೆ’
‘ನಗರದ ಪಾರಂಪರಿಕ ರಸ್ತೆಗಳಾಗಿರುವ ಜೆಎಲ್‌ಬಿ ವಿನೋಬಾ ರಸ್ತೆಯಲ್ಲಿ ಮೇಲ್ಸೇತುವೆ ರಸ್ತೆ ಮಾಡಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅನುಮತಿ ಪಡೆಯದೇ ಮಣ್ಣಿನ ಪರೀಕ್ಷೆ ಮಾಡಲಾಗಿದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದರು.
‘ಜೆಎಲ್‌ಬಿ ರಸ್ತೆಯಲ್ಲಿ ಪಾರಂಪರಿಕ ಕಟ್ಟಡಗಳಿದ್ದು ಫ್ಲೈಓವರ್ ನಿರ್ಮಾಣವಾದರೆ ನಗರದ ಪಾರಂಪರಿಕತೆ ಹಾಗೂ ಸೌಂದರ್ಯಕ್ಕೆ ಧಕ್ಕೆ ಆಗಲಿದೆ’ ಎಂದು ಗಮನ ಸೆಳೆದರು. ಮಾಹಿತಿ ಕೊಡಿ: ‘ಜಿಲ್ಲೆಯಲ್ಲಿ ಪಿಎಂ ಸೂರ್ಯಘರ್ ಯೋಜನೆಯಡಿ ಎಷ್ಟು ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ ಎಂಬ ಮಾಹಿತಿಯೇ ಇಲ್ಲ’ ಎಂದು ಯದುವೀರ್ ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ಅಧಿಕಾರಿ ‘ಜಿಲ್ಲೆಯಲ್ಲಿ 1879 ಸೂರ್ಯಘರ್ ಫಲಾನುಭವಿಗಳಿದ್ದಾರೆ. ಗೃಹಜ್ಯೋತಿ ಇರುವುದರಿಂದ ಸೌರವಿದ್ಯುತ್ ಫಲಕ ಅಳವಡಿಸಿಕೊಳ್ಳುತ್ತಿಲ್ಲ. ನಗರದಲ್ಲಿ 40x60 ನಿವೇಶನವಿರುವ ಮನೆಯವರು ಹಾಕಿಸಿಕೊಳ್ಳುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಎನ್‌ಒಸಿ ಪಡೆಯದೇ ಕೆಲಸ’
‘ಹುಣಸೂರು ತಾಲ್ಲೂಕಿನಲ್ಲಿ ಹೆದ್ದಾರಿ ನಿರ್ಮಾಣ ಆಗುತ್ತಿದೆ. ಎನ್‌ಒಸಿ ಪಡೆಯದೇ ಹೆದ್ದಾರಿ ಪಕ್ಕದಲ್ಲೇ ಪೈಪ್‌ಲೈನ್ ಕಾಮಗಾರಿ ನಡೆಸಲಾಗಿದೆ. ರಸ್ತೆ ಅಗಲೀಕರಣವಾದರೆ ಹುಣಸೂರು ನಗರಕ್ಕೆ ನೀರಿನ ಸಮಸ್ಯೆ ಆಗಲಿದೆ’ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಸಭೆಯ ಗಮನಕ್ಕೆ ತಂದರು. ಶಾಸಕ ಟಿ.ಎಸ್.ಶ್ರೀವತ್ಸ ‘ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ಮುಗಿದಿಲ್ಲ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸೂಪರ್ ಸಕ್ಕಿಂಗ್ ಮಿಷನ್ ಖರೀದಿಗೆ ಹಣ ನೀಡಬೇಕು’ ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ‘ಡಿಸೆಂಬರ್ ಅಂತ್ಯದ ಒಳಗೆ ಜಲಜೀವನ್ ಮಿಷನ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಈಗಾಗಲೇ ಶೇ 87ರಷ್ಟು ಕೆಲಸ ಮುಗಿದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.