ADVERTISEMENT

ಅಂಬಾವಿಲಾಸ ಅರಮನೆ ಚಿತ್ರಕಲಾ ಇತಿಹಾಸದ ಮಾರ್ಗದರ್ಶಿ: ಸಿ.ಎಸ್.ಅನುಪಮಾ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:41 IST
Last Updated 2 ಫೆಬ್ರುವರಿ 2026, 4:41 IST
ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಭಾಂಗಣದಲ್ಲಿ ಶನಿವಾರ ನಡೆದ ಮಾಸಿಕ ಸರಣಿ ವಿಶೇಷ ಉಪನ್ಯಾಸ ಉದ್ಘಾಟನೆ ನಡೆಯಿತು. ವೀರಣ್ಣ ಅಕ್ಕಸಾಲಿ, ಎ.ದೇವರಾಜು, ಸಿ.ಎಸ್.ಅನುಪಮಾ, ಅಂಬರೀಶ್‌ ಹಾಜರಿದ್ದರು
ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಭಾಂಗಣದಲ್ಲಿ ಶನಿವಾರ ನಡೆದ ಮಾಸಿಕ ಸರಣಿ ವಿಶೇಷ ಉಪನ್ಯಾಸ ಉದ್ಘಾಟನೆ ನಡೆಯಿತು. ವೀರಣ್ಣ ಅಕ್ಕಸಾಲಿ, ಎ.ದೇವರಾಜು, ಸಿ.ಎಸ್.ಅನುಪಮಾ, ಅಂಬರೀಶ್‌ ಹಾಜರಿದ್ದರು   

ಮೈಸೂರು: ‘ಇಲ್ಲಿನ ಅಂಬಾವಿಲಾಸ ಅರಮನೆಯು ಮೈಸೂರು ಸಾಮ್ರಾಜ್ಯದ ಚಿತ್ರಕಲಾ ಇತಿಹಾಸ ಅರಿಯಲು ಮಾರ್ಗದರ್ಶಿಯಾಗಿದೆ’ ಎಂದು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಕಲಾವಿದೆ ಸಿ.ಎಸ್.ಅನುಪಮಾ ಹೇಳಿದರು.

ನಗರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಭಾಂಗಣದಲ್ಲಿ ಶನಿವಾರ ನಡೆದ ಮಾಸಿಕ ಸರಣಿ ವಿಶೇಷ ಉಪನ್ಯಾಸದಲ್ಲಿ ‘ಮೈಸೂರಿನ ಅರಮನೆ ಚಿತ್ರಕಲೆಗಳು’ ಕುರಿತು ಮಾತನಾಡಿದರು.

‘ಅರಮನೆಯಲ್ಲಿನ ಚಿತ್ರಕಲೆಗಳು ವಿಜಯನಗರ ಸಾಮ್ರಾಜ್ಯದ ಕಲಾವಿದರ ಪರಂಪರೆಯೊಂದಿಗೆ ಆಧುನಿಕ, ಪಾಶ್ಚಾತ್ಯ ಶೈಲಿಗಳ ಪರಿಚಯವನ್ನೂ ನೀಡುತ್ತವೆ. ಮುಮ್ಮಡಿ ಕೃಷ್ಣರಾಜ ಒಡೆಯರ್‌ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲಘಟ್ಟವು ಚಿತ್ರಕಲೆ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ ನೀಡಿದೆ’ ಎಂದು ವಿವರಿಸಿದರು.

ADVERTISEMENT

‘ವಿಜಯನಗರ ಸಾಮ್ರಾಜ್ಯವು ಸುರಪುರ, ಲೇಪಾಕ್ಷಿ, ತಂಜಾವೂರು, ಗಂಜೀಫಾ, ಮೈಸೂರು ಮತ್ತು ಕಿನಾಲ ಚಿತ್ರಕಲೆಗಳಿಗೆ ಆಶ್ರಯವಾಗಿತ್ತು. ಸಾಮ್ರಾಜ್ಯದ ಪತನದ ನಂತರ ಕಲಾವಿದರಿಗೆ ಆಶ್ರಯ ನೀಡಿದ ಪ್ರಮುಖ ಸಂಸ್ಥಾನ ಮೈಸೂರು. ತಂಜಾವೂರು ಮತ್ತು ಮೈಸೂರು ಚಿತ್ರಕಲೆಗಳಲ್ಲಿ ಸಾಮ್ಯತೆಯನ್ನು ನೋಡಬಹುದು. ಸೂಕ್ಷ್ಮ ಕೆಲಸದಿಂದ ಇವುಗಳು ಪ್ರಸಿದ್ಧಿ’ ಎಂದರು.

ಅಭಿವೃದ್ಧಿ ಹೊಂದಿತು: ‘ಪರ್ಷಿಯಾ ಮೂಲದಿಂದ ಬಂದ ಗಂಜೀಫಾ ಕಲೆಯು ನಾಲ್ವಡಿಯವರ ಕಾಲದಲ್ಲಿ ಮೈಸೂರಿನ ಶೈಲಿಯನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಿತು. ಗೋಡೆ ಚಿತ್ರಕಲೆಯಂತೂ ಮುಮ್ಮಡಿ ಅವರ ಕಾಲದಿಂದಲೇ ಮೈಸೂರಿನ ವಿವಿಧೆಡೆ, ಪ್ರಮುಖವಾಗಿ ದೇವಸ್ಥಾನಗಳ ಗೋಡೆಗಳಲ್ಲಿ ಪ್ರಚಲಿತಕ್ಕೆ ಬಂತು. ಅರಮನೆ ಆವರಣದ ಪ್ರಸನ್ನ ವೇಣುಗೋಪಾಲ ದೇವಸ್ಥಾನದಲ್ಲಿರುವ ಕೃಷ್ಣನ ಲೀಲೆಯ ಚಿತ್ರಗಳು ಇದಕ್ಕೆ ಉದಾಹರಣೆ’ ಎಂದರು.

‘ಶಿಲ್ಪಿ ಸಿದ್ದಲಿಂಗಸ್ವಾಮಿ ಮತ್ತು ರಾಜ ರವಿವರ್ಮ ಅವರು ಮೈಸೂರಿನ ಚಿತ್ರಕಲೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅರಮನೆ ಚಾವಣಿಯಲ್ಲಿ ಸಿದ್ದಲಿಂಗಸ್ವಾಮಿ ರಚಿಸಿರುವ ಚಿತ್ರಗಳು, ರಾಜವಂಶಸ್ಥರನ್ನು, ವಿವಿಧ ದೇವತೆಗಳನ್ನು ಪರಿಚಯಿಸುವ ರಾಜ ರವಿವರ್ಮ ಚಿತ್ರಗಳು ಅಪೂರ್ವ ಸಾಧ್ಯತೆಯ ಪ್ರತಿಬಿಂಬವಾಗಿವೆ. ಇಲ್ಲಿನ ಪ್ರತಿ ಚಿತ್ರಗಳು ಪುರಾಣ, ಇತಿಹಾಸದ ಸಾರವನ್ನು ಹೊಂದಿರುವುದನ್ನು ವೀಕ್ಷಕರು ಅರಿಯಬೇಕು’ ಎಂದರು.

ಉದ್ಘಾಟಿಸಿದ ಇಲಾಖೆಯ ಆಯುಕ್ತ ಎ.ದೇವರಾಜು, ‘ಚಿತ್ರಕಲೆಯನ್ನು ನೋಡಿ ಗ್ರಹಿಸುವುದೂ ಒಂದು ಕಲೆ. ಯಾವುದೇ ಚಿತ್ರಕಲೆಗಳನ್ನು ನೋಡುವ ಮುನ್ನ ಅದರ ರಚನೆ, ಇತಿಹಾಸದ ಬಗ್ಗೆ ಕೊಂಚ ತಿಳಿದುಕೊಳ್ಳುವುದು ಉತ್ತಮ ಅನುಭವ ಪಡೆಯಲು ಸಹಕಾರಿ ಆಗುತ್ತದೆ’ ಎಂದು ತಿಳಿಸಿದರು.

ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಫೋಟೊಗ್ರಫಿ ಮತ್ತು ಫೋಟೊಜರ್ನಲಿಸಂ ವಿಭಾಗದ ಮುಖ್ಯಸ್ಥ ವೀರಣ್ಣ ಅರ್ಕಸಾಲಿ, ಇಲಾಖೆಯ ಎಂಜಿನಿಯರಿಂಗ್‌ ವಿಭಾಗದ ಎಇಇ ಅಂಬರೀಶ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.