ಮೈಸೂರು: ಮೈಸೂರು ಅರಮನೆ ಮಂಡಳಿ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆ.14ರಂದು ಸಂಜೆ 7ರಿಂದ ಮಧ್ಯರಾತ್ರಿ 12ರವರೆಗೆ ಅರಮನೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ವೇದಿಕೆ ಕಾರ್ಯಕ್ರಮವು ಸಂಜೆ 7ಕ್ಕೆ ಪ್ರಾರಂಭವಾಗಲಿದೆ. ಸಂಜೆ 7:15ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂತರರಾಷ್ಟ್ರೀಯ ಕಲಾವಿದ ವಿದ್ವಾನ್ ಶ್ರೀಧರ್ ಜೈನ್ ಮತ್ತು ತಂಡದಿಂದ ರಾತ್ರಿ 8ರಿಂದ 9ರವರೆಗೆ ನೃತ್ಯ ರೂಪಕ ‘ಸೈನಿಕ’ ಕಾರ್ಯಕ್ರಮ, ರಾತ್ರಿ 9.15ರಿಂದ 11.15ರವರೆಗೆ ಖ್ಯಾತ ಹಿನ್ನಲೆ ಗಾಯಕ ಅಜಯ್ ವಾರಿಯರ್, ಅಂಕಿತಾ ಕುಂಡು, ಶಶಿಕಲಾ ಸುನೀಲ್, ನಾಗಚಂದ್ರಿಕಾ ಭಟ್, ರವಿ ಮುರೂರು, ಚಿಂತನ್ ವಿಕಾಸ್ ಮತ್ತು ತಂಡದಿಂದ ‘ವಂದೇ ಮಾತರಂ’ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11.30ರಿಂದ 12ರವರೆಗೆ ಮೆ.ಲೇಸರ್‌ವಿಷನ್ ಅವರಿಂದ ಲೇಸರ್ ಶೋ ಇದೆ.
ಇದಕ್ಕೂ ಮುನ್ನ, ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ‘ವಿಭಜನೆಯ ಕರಾಳತೆ ನೆನಪಿನ ದಿನ’ದ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.