ADVERTISEMENT

ಮೈಸೂರು: ಉತ್ಸವದ ತೆರೆಮರೆಯ ನಕ್ಷತ್ರಗಳು!

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 9:32 IST
Last Updated 9 ಜನವರಿ 2026, 9:32 IST
   

ಮೈಸೂರು: ಲೈಟಿಂಗ್‌, ಮೇಕಪ್‌, ಮೈಕ್‌, ಕಾಸ್ಟ್ಯೂಮ್‌, ಸೆಟ್‌ ಸಿದ್ಧತೆ, ವಾದ್ಯ ರಿಪೇರಿ, ಕಾರ್ಪೆಂಟರಿ, ಎಲೆಕ್ಟ್ರೀಷಿಯನ್‌, ಟೆಕ್ನಿಕಲ್‌ ಟೀಂ, ಸೆಟ್ಟಿಂಗ್, ಬುಲೆಟಿನ್‌ ಉಸ್ತುವಾರಿಗಳು, ‘ಡಿ’ ಗ್ರೂಪ್‌ ನೌಕರರು.

ಬಹುರೂಪಿ ಉತ್ಸವವವು ಎರಡೂವರೆ ದಶಕಗಳ ಪಯಣದಲ್ಲಿ ಯಶಸ್ಸು ಕಂಡು ಮಿಂಚುವಂತಾಗಲು ತೆರೆಮರೆಯ ಇಂಥ ನೂರಾರು ಸೂತ್ರಧಾರಿಗಳ ದೊಡ್ಡ ಪಡೆಯೇ ಹಗಲಿರುಳೆನ್ನದೆ ಶ್ರಮಿಸಿದೆ. ಇವರೆಲ್ಲರೂ ಉತ್ಸವದ ತೆರೆ ಮರೆಯ ನಕ್ಷತ್ರಗಳು.

‘ನಾಟಕಗಳನ್ನು ನೋಡುವವರಿಗೆ ಎಲ್ಲವೂ ಚೆನ್ನಾಗಿದೆ ಅನ್ನಿಸುತ್ತದೆ. ಆದರೆ ಅದರ ಸಿದ್ಧತೆ ಎಂಬುದು ಬಹಳ ಸವಾಲಿನ ಕೆಲಸ’ ಎನ್ನುತ್ತಾರೆ ನಾಟಕಗಳ ಲೈಟಿಂಗ್‌ ಇನ್‌ಚಾರ್ಜ್‌ ಆಗಿರುವ ಮಹೇಶ್‌ ಕಲ್ಲತ್ತಿ.

ADVERTISEMENT

‘ಸ್ಥಳೀಯರಿಂದ ಶುರುವಾಗಿ ವಿವಿಧ ರಾಜ್ಯಗಳ ರಂಗ ತಂಡಗಳ ನಿರೀಕ್ಷೆಯಂತೆ ನೆರಳು–ಬೆಳಕಿನ ವಿನ್ಯಾಸ ಮಾಡುವುದಕ್ಕೆ ಸಮಯವೇ ಸಾಕಾಗುವುದಿಲ್ಲ. ಕೆಲವೊಮ್ಮೆ ಅಗತ್ಯ ಪರಿಕರಗಳಿಗಾಗಿ ಪರದಾಡಬೇಕಾಗುತ್ತದೆ. ಅವುಗಳನ್ನು ಜೋಡಿಸಲು ನಿದ್ದೆಗೆಟ್ಟು ಕೆಲಸ ಮಾಡುತ್ತೇವೆ’ ಎನ್ನುತ್ತಾರೆ ಅವರು.

‘ಕೆಲವು ತಂಡಗಳು ಬರುತ್ತಿದ್ದುದೇ ರಾತ್ರಿ 11 ಗಂಟೆಗೆ. ಅವರೊಂದಿಗೆ ಬೆಳಗಿನ 6 ಗಂಟೆವರೆಗೂ ಕೆಲಸ ಮಾಡಿದ್ದೇವೆ. ಎಲ್ಲವೂ ಮುಗಿದ ಬಳಿಕ, ರಿಹರ್ಸಲ್‌ಗೆ ಬಂದಾಗ ಮತ್ತೆ ಹೊಸದಾಗಿ ವಿನ್ಯಾಸ ಮಾಡಿಸುತ್ತಿದ್ದ ನೆನಪುಗಳೂ ಇವೆ’ ಎಂದರು.

‌‘ಒಮ್ಮೆ ಉತ್ಸವಕ್ಕೆ ಬಂದಿದ್ದ ತಂಡವೊಂದು ಪ್ರೊಜೆಕ್ಟರ್‌ ಕೇಳಿತ್ತು. ಆದರೆ, ಅದು ಮೈಸೂರಿನಲ್ಲಿರಲಿಲ್ಲ. ಬೆಂಗಳೂರಿನಿಂದ ಕಾರಿನಲ್ಲಿ ತರಿಸುವ ಪ್ರಯತ್ನ ಮಾಡಿದೆವು. ಸೌಂಡ್‌ಸಿಸ್ಟಂ ಕೂಡ ಇರಲಿಲ್ಲ. ಬೆಳಿಗ್ಗೆ ಸಿಗುತ್ತದೆ ಎಂದಾಗ ನಿರ್ದೇಶಕರು ಸಿಟ್ಟಾಗಿ, ಪ್ಯಾಕಪ್‌ ಎನ್ನುತ್ತಾ ಹೊರಗೆ
ಬಂದು ಬಿಟ್ಟರು. ಎಲ್ಲರೂ ಸೇರಿ ಅವರನ್ನು ಸಮಾಧಾನಪಡಿಸಿದೆವು’ ಎಂದು ಸ್ಮರಿಸಿದರು. ಇಂಥ ಒತ್ತಡದ ಅನುಭವಗಳು ಹತ್ತಾರು.

‘ಎಲೆಕ್ಟ್ರೀಷಿಯನ್‌ ಶಿವಕುಮಾರಸ್ವಾಮಿ ಅವರಿಗೆ ರಂಗಾಯಣದ ಪ್ರತಿಯೊಂದು
ವೈರಿಂಗ್ ಮಾಹಿತಿಯೂ ಗೊತ್ತಿದೆ. ಉತ್ಸವ ಬಂತೆಂದರೆ ಅವರಿಗೆ ವಿಶೇಷ ಹೊಣೆಗಾರಿಕೆ. ಎಲ್ಲ
ವನ್ನೂ ಪರಿಶೀಲಿಸುತ್ತಾರೆ. ಅದು ಬಹಳ ಜವಾಬ್ದಾರಿಯುತ ಕೆಲಸ. ಏಕೆಂದರೆ ವಿದ್ಯುತ್‌ ಇಲ್ಲವೆಂದರೆ ಎಲ್ಲದ್ದಕ್ಕೂ ತೊಂದರೆ’ ಎಂದರು.

‘ಉತ್ಸವದ ಸಲುವಾಗಿ ಪ್ರತಿ ವೇದಿಕೆಗೂ ಒಬ್ಬ ಉಸ್ತುವಾರಿ ಇರುತ್ತಾರೆ. ಕಲಾಮಂದಿರಕ್ಕೆ ಮಧುಸೂದನ್‌, ಕಿರುರಂಗಮಂದಿರಕ್ಕೆ ಜೀವನ್‌ಕುಮಾರ್‌ ಹೆಗ್ಗೋಡು, ವನರಂಗಕ್ಕೆ ಮಂಜು ಹಿರೇಮಠ್‌ ಇದ್ದಾರೆ. ವಿನೋದ್‌
ಈ ವರ್ಷ ಜೊತೆಯಾಗಿದ್ದಾರೆ. ರಂಗಶಾಲೆಯ ವಿದ್ಯಾರ್ಥಿಗಳೂ ಇರುತ್ತಾರೆ. ತೆರೆಯ ಹಿಂದೆ
ಕೆಲಸ ಮಾಡುವ ನಮ್ಮಲ್ಲಿ ಯಾರಿಗೂ ನಾಟಕಗಳನ್ನು ನೋಡಲು ಸಮಯಾವಕಾಶವಾಗುವುದಿಲ್ಲ. ಉತ್ಸವ ಸುಸೂತ್ರವಾಗಿ ನಡೆದರೆ ಅಷ್ಟೇ ಸಂತೋಷ’ ಎಂದರು.

‘ಆತಿಥ್ಯವೆಂಬ ಸವಾಲು’

‘ದೂರದ ಊರುಗಳಿಂದ ನಾಟಕೋತ್ಸವಕ್ಕೆ ಬರುವ ಅತಿಥಿ ಗಣ್ಯರಿಗೆ, ರಂಗ ತಂಡಗಳಿಗೆ ವಾಸ್ತವ್ಯ ಕಲ್ಪಿಸುವುದು ಬಹು ದೊಡ್ಡ ಸವಾಲು. ಬರುವವರು ಯಾವ ಸಮಯಕ್ಕೆ ಬರುತ್ತಾರೆಂಬುದು ಖಚಿತವಾಗಿರುವುದಿಲ್ಲ. ಕೆಲವರು ಅವೇಳೆಯಲ್ಲಿ ಬರುತ್ತಾರೆ. ಅವರಿಗೆ ನಿಗದಿಯಾದ ಸ್ಥಳದ ಮಾಹಿತಿ ನೀಡುವುದು, ಅವರನ್ನು ಬರಮಾಡಿಕೊಳ್ಳುವುದು, ನಿಗದಿತ ಸ್ಥಳಕ್ಕೆ ಕರೆದೊಯ್ಯುವುದು ಅಪಾರ ತಾಳ್ಮೆಯನ್ನು ಬೇಡುತ್ತದೆ. ಅವರು ಸಂತೃಪ್ತರಾದರೆ ಅದೇ ದೊಡ್ಡ ಸಮಾಧಾನ ನಮಗೆ’ ಎನ್ನುತ್ತಾರೆ ವಾಸ್ತವ್ಯದ ಹೊಣೆ ಹೊತ್ತಿರುವ ಆಲೂರು ದೊಡ್ಡ ನಿಂಗಪ್ಪ.

‘ಉತ್ಸವಕ್ಕೆ ಜೀವ ತುಂಬುವ ಹೊಣೆ’

‘ಉತ್ಸವದ ವಾತಾವರಣಕ್ಕೆ ಜೀವ ತುಂಬಬೇಕಾದ್ದು ನಮ್ಮ ಕೆಲಸ. ಕಲಾತಂಡಗಳ ವೈಶಿಷ್ಟ್ಯಗಳನ್ನು ಚೆಂದ ಕಾಣುವಂತೆ ಅನಾವರಣಗೊಳಿಸಬೇಕು’ ಎನ್ನುತ್ತಾರೆ ರಂಗಸಜ್ಜಿಕೆ ವಿಭಾಗದ ಕಲಾವಿದರಾದ ದ್ವಾರಕಾನಾಥ್.

‘ಹೆಚ್ಚು ಕಡಿಮೆ ತಿಂಗಳಿನಿಂದ ಶ್ರಮ ವಹಿಸುತ್ತಿದ್ದೇವೆ. ಉತ್ಸವಕ್ಕೆ ಬೇಕಾದ ಫಲಕಗಳನ್ನು ಕೈಯಿಂದಲೇ ಬರೆಯುವ ರಂಗನಾಥ್‌ ಸೇರಿದಂತೆ ಕಾರ್ಪೆಂಟರ್‌ಗಳು, ಚಪ್ಪರ ಕಟ್ಟುವವರು, ಕಂಬ ನಿಲ್ಲಿಸುವವರು ಹೀಗೆ.. ಎಲ್ಲರೂ ಬಹುರೂಪಿಯ ಪಾಲುದಾರರೇ ಆಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.