ADVERTISEMENT

ಜೋಡೊ ಯಾತ್ರೆ: ‘ಜೋಡಿ’ಸಿದ ರಸ್ತೆ, ವೈಷಮ್ಯ ನಿವಾರಣೆ ಯತ್ನ– ವಿಶೇಷ ವರದಿ

ಬದನವಾಳು ಗ್ರಾಮದಲ್ಲಿ ಸಂಚಲನ ಮೂಡಿಸಿದ ರಾಹುಲ್‌ ನಡೆ

ಎಂ.ಮಹೇಶ
Published 2 ಅಕ್ಟೋಬರ್ 2022, 22:18 IST
Last Updated 2 ಅಕ್ಟೋಬರ್ 2022, 22:18 IST
ಬದನವಾಳು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ‘ಭಾರತ್ ಜೋಡೊ’ ರಸ್ತೆ
ಬದನವಾಳು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ‘ಭಾರತ್ ಜೋಡೊ’ ರಸ್ತೆ   

ಬದನವಾಳು (ಮೈಸೂರು ಜಿಲ್ಲೆ): ಭಾರತ್‌ ಜೋಡೊ ಯಾತ್ರೆಯಲ್ಲಿರುವಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಲ್ಲಿನ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಿಸಿದರು. ಸಹಚಿಂತನ, ಸಹಭೋಜನ, ಶ್ರಮದಾನದಿಂದ ಗಮನ ಸೆಳೆದರು.

1993ರಲ್ಲಿ ನಡೆದಿದ್ದ ಗಲಭೆಯಿಂದ ವೀರಶೈವ ಲಿಂಗಾಯತ–ದಲಿತರ ನಡುವೆ ಉಂಟಾಗಿದ್ದ ವೈಷಮ್ಯ ನಿವಾರಣೆಗೆ ಪ್ರಯತ್ನಿಸಿದರು. ಅವರ ಭೇಟಿಯ ನೆನಪಿಗೆ ಕೆಲ ಸೇವಾ ಕಾರ್ಯಗಳೂ ನಡೆದವು. ಕೆಲ ಮನೆಗಳಿಗೆ ಆಯೋಜಕರು ಸುಣ್ಣ–ಬಣ್ಣ ಮಾಡಿಸಿಕೊಟ್ಟಿದ್ದಾರೆ.

ರಾಜ್ಯದಲ್ಲಿ ಯಾತ್ರೆಯ 3ನೇ ದಿನವಾದ ಭಾನುವಾರ ಬೆಳಿಗ್ಗೆ ತಾಂಡವ
ಪುರದ ವಾಸ್ತವ್ಯ ಸ್ಥಳದಿಂದ, 1927ರಲ್ಲಿ ಗಾಂಧೀಜಿ ಭೇಟಿ ನೀಡಿದ್ದ ಖಾದಿ ಗ್ರಾಮೋದ್ಯೋಗ ಕೇಂದ್ರದ ಆವರಣಕ್ಕೆ ಬಂದ ರಾಹುಲ್‌, ರಾಷ್ಟ್ರಪಿತನ
ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಪ್ರಸ್ತುತಪಡಿಸಿದ ಗಾಂಧೀಜಿಗೆ ಪ್ರಿಯವಾದ ಭಜನೆಗಳನ್ನು ಆಲಿಸಿದರು.

ADVERTISEMENT

ಭೇಟಿಯ ಸ್ಮರಣೆಗಾಗಿ ಕೇಂದ್ರದಲ್ಲಿ ತೆಂಗಿನಸಸಿ ನೆಟ್ಟರು. ಯಾತ್ರೆಯಲ್ಲಿರುವ ‘ಭಾರತ ಯಾತ್ರಿ’ಗಳೂ ಗಿಡಗಳನ್ನು ನೆಟ್ಟರು.

ಗ್ರಾಮದಲ್ಲಿ ಪ್ರದಕ್ಷಿಣೆ: ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಅವರನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದರು. ಮಹಿಳೆಯರು, ಮಕ್ಕಳನ್ನು ಮಾತನಾಡಿಸಿದರು. ಜೊತೆಯಾದ ಬಾಲಕಿಯರೊಂದಿಗೆ ನಡೆದರು. ‘ಯಾತ್ರೆ ಸ್ಮರಣಾರ್ಥ’ ಶಾಲೆ–ಅಂಗನವಾಡಿ ಕೇಂದ್ರದ ಕಾಂಪೌಂಡ್‌ಗೆ ಬಣ್ಣ ಹಚ್ಚಿದ್ದ ಜಾಗದಲ್ಲಿ ಬಣ್ಣದಿಂದ ಹಸ್ತದ ಗುರುತು ಮೂಡಿಸಿದರು. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ
ಡಿ.ಕೆ.ಶಿವಕುಮಾರ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್‌ ಇದ್ದರು.

ಸಹ ಭೋಜನ: ವೀರಶೈವ ಲಿಂಗಾಯತರು, ಹಿಂದುಳಿದವರು, ದಲಿತರೊಂದಿಗೆ ರಾಹುಲ್‌ ಮತ್ತು ನಾಯಕರು ಸಹಭೋಜನ ಮಾಡಿದರು. ‘ವಿವಿಧ ಸಮಾಜದವರು ಸಹಪಂಕ್ತಿಯಲ್ಲಿ ಊಟ ಮಾಡಿದ್ದು 29 ವರ್ಷಗಳ ನಂತರ ಇದೇ ಮೊದಲು’ ಎಂದು ಮುಖಂಡರು ತಿಳಿಸಿದರು.

ಆಯಾ ಸಮಾಜದ ಮೂರ್ನಾಲ್ಕು ಪ್ರತಿನಿಧಿಗಳ ನಡುವೆ ತಲಾ ಒಬ್ಬ ನಾಯಕರು ಕುಳಿತು ಭೋಜನ ಸವಿದರು. ರಾಹುಲ್‌ ಮಕ್ಕಳೊಂದಿಗೆ ಕುಳಿತಿದ್ದರು.

ಬಳಿಕ ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ರಾಹುಲ್ ಅವರು ಪಾದಯಾತ್ರೆ ಮುಂದುವರಿಸಿದರು.

‘ಭಾರತ್‌ ಜೋಡೊ’ ರಸ್ತೆ

ಗ್ರಾಮದಲ್ಲಿ ನಡೆದಿದ್ದ ಗಲಭೆಯ ನಂತರ ವೈಷಮ್ಯ ಏರ್ಪಟ್ಟು‌, ಎರಡು ಬೀದಿಗಳ ಸಂಪರ್ಕ ರಸ್ತೆ ಬಳಕೆ ಆಗುತ್ತಿರಲಿಲ್ಲ. ‘ಯಾತ್ರೆ’ ಹಿನ್ನೆಲೆಯಲ್ಲಿ ಎರಡೂ ಬೀದಿಗಳನ್ನು ಜೋಡಿಸಲು ರಸ್ತೆ ನಿರ್ಮಿಸಲಾಗಿದ್ದು, ಅದಕ್ಕೆ ಪೇವರ್ಸ್‌ ಅಳವಡಿಸಲಾಗಿದೆ. ‘ಭಾರತ್ ಜೋಡೊ ರಸ್ತೆ’ ಎಂಬ ಹೆಸರಿಟ್ಟು ಫಲಕ ಅಳವಡಿಸಲಾಗಿದೆ.

ಪೇವರ್ಸ್‌ ಜೋಡಿಸುವ ಮೂಲಕ 180 ಮೀಟರ್‌ ಉದ್ದದ ರಸ್ತೆಯನ್ನು ರಾಹುಲ್‌ ಉದ್ಘಾಟಿಸಿ ಸ್ಥಳೀಯರೊಂದಿಗೆ ನಡೆದರು. ದಲಿತರ ಕೇರಿಯಲ್ಲಿದ್ದ ಮಹಾತ್ಮಗಾಂಧಿ ಪ್ರತಿಮೆಗೆ ನಮಿಸಿದರು.

‘ಗಲಭೆ ನಂತರ ಹೆಚ್ಚು ಬಳಕೆಯಾಗದೇ ಗಿಡ–ಗಂಟಿ ಬೆಳೆದಿದ್ದ ರಸ್ತೆಯನ್ನು, ಎರಡೂ ಸಮುದಾಯದ ಮುಖಂಡರ ಮನವೊಲಿಸಿ ದುರಸ್ತಿಪಡಿಸಿ, ಪೇವರ್ಸ್‌ ಅಳವಡಿಸಿದ್ದೇವೆ. ಸ್ಥಳೀಯರೇ ಹಣ ನೀಡಿದ್ದಾರೆ. ಒಡೆದಿದ್ದ ಮನಸ್ಸುಗಳು ಒಂದಾಗಿವೆ’ ಎಂದು ಮುಖಂಡರಾದ ಬಸವರಾಜ, ಕಳಲೆ ಕೇಶವಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.