ADVERTISEMENT

ಮೈಸೂರು ಪಾಲಿಕೆಯಲ್ಲಿ ಜೆಡಿಎಸ್‌ ನಡೆಗೆ ‘ಶೇಮ್–ಶೇಮ್’ ಎಂದ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 11:25 IST
Last Updated 6 ಸೆಪ್ಟೆಂಬರ್ 2022, 11:25 IST
ಮೈಸೂರು ಪಾಲಿಕೆ
ಮೈಸೂರು ಪಾಲಿಕೆ   

ಮೈಸೂರು: ಮೈಸೂರುಮಹಾನಗರಪಾಲಿಕೆ ಮೇಯರ್, ಉಪ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಜೆಡಿಎಸ್‌ ನಡೆಯನ್ನು ಕಾಂಗ್ರೆಸ್ ಸದಸ್ಯರು ಅಣಕಿಸಿದರು. ಶೇಮ್ ಶೇಮ್ ಎಂದು ಕೂಗಿ ಟೀಕಿಸಿದರು.

ಜೆಡಿಎಸ್‌ ಅಭ್ಯರ್ಥಿ ರೇಷ್ಮಾ ಭಾನು ನಾಮಪತ್ರ ತಿರಸ್ಕೃತಗೊಂಡು, ಉಪ ಮೇಯರ್ ಸ್ಥಾನವೂ ಆ ಪಕ್ಷಕ್ಕೆ ಕೈ ತಪ್ಪುತ್ತಿದ್ದಂತೆಯೇ ಹರ್ಷೋದ್ಗಾರ ವ್ಯಕ್ತಪಡಿಸಿದ ಕಾಂಗ್ರೆಸ್‌ನವರು, ‘ನಿಮಗೆ ಹೀಗೇಯೇ ಆಗಬೇಕು’ ಎಂದು ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆ ನಡುವೆಯೇ ಮೂದಲಿಸಿದರು.

‘ಬಿಜೆಪಿ-ಜೆಡಿಎಸ್ ಸೇರಿ ಸಾಬರಿಗೆ ಚಾಕೊಲೇಟ್ ಕೊಟ್ಟಾಯಿತು’ ಎಂದು ಸದಸ್ಯ ಆರೀಫ್ ಹುಸೇನ್ ಟಾಂಗ್ ನೀಡಿದರು.

ADVERTISEMENT

‘ನಾಮಪತ್ರ ತಿರಸ್ಕೃತಗೊಳ್ಳಲೆಂದು ಉದ್ದೇಶಪೂರ್ವಕವಾಗಿಯೇ ತಂತ್ರ ಮಾಡಲಾಗಿದೆ. ಬಿಜೆಪಿಯ ‘ಬಿ’ ಟೀಂನ ನಾಟಕ, ಮೊಸಳೆ ಕಣ್ಣೀರು ನಡೆಯುವುದಿಲ್ಲ’ ಎಂದು ಸದಸ್ಯ ಅಯೂಬ್ ಖಾನ್ ವ್ಯಂಗ್ಯವಾಡಿದರು.

‘ಟೋಪಿ, ಬುರ್ಖಾ ಹಾಕಿಕೊಂಡು ಬಿಜೆಪಿ ಸೇರಿದ ಜೆಡಿಎಸ್ ಸದಸ್ಯರು’ ಎಂದು ಕಾಂಗ್ರೆಸ್‌ನವರು ಟೀಕಿಸಿದರು.

‘ಬಿಜೆಪಿ–ಜೆಡಿಎಸ್‌ನವರು ಅಲ್ಪಸಂಖ್ಯಾತರಿಗೆ ವ್ಯವಸ್ಥಿತವಾಗಿ ಮೋಸ ಮಾಡಿದ್ದಾರೆ’ ಎಂದು ಶಾಸಕ ತನ್ವೀರ್‌ ಸೇಠ್ ಆರೋಪಿಸಿದರು.

ಸವುದ್ ಖಾನ್ ತಟಸ್ಥ:

ವಾರ್ಡ್‌ ನಂ.14ರ ಸದಸ್ಯ ಜೆಡಿಎಸ್‌ನ ಸವುದ್ ಖಾನ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೂ ಮತ ಚಲಾಯಿಸದೆ ತಟಸ್ಥರಾಗಿ ಉಳಿದರು.

ವೆಂಟಿಲೇಟರ್‌ ಸಮೇತ ಬಂದ ಸದಸ್ಯೆ!

ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಬಿಜೆಪಿ ಸದಸ್ಯೆ ಅಶ್ವಿನಿ ಶರತ್‌ ವೆಂಟಿಲೇಟರ್‌ ಸಹಿತ ಆಂಬುಲೆನ್ಸ್‌ನಲ್ಲಿ ಬಂದು ಪಕ್ಷದ ಮೇಯರ್ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿ ಗಮನಸೆಳೆದರು. ‘ಅವರಿಗೆ ಮತ ಚಲಾಯಿಸಲು ಪೂರ್ವಾನುಮತಿ ನೀಡಲಾಗಿತ್ತು’ ಎಂದು ಚುನಾವಣಾಧಿಕಾರಿ ತಿಳಿಸಿದರು. ಉಪ ಮೇಯರ್‌ ಚುನಾವಣೆ ನಡೆಯುವ ವೇಳೆಗೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಕಾಂಗ್ರೆಸ್ ಬೆಂಬಲಿಸಿದ ಜೆಡಿಎಸ್ ಸದಸ್ಯೆ

ಜೆಡಿಎಸ್‌ನಿಂದ ಗೆದ್ದಿದ್ದ ನಿರ್ಮಲಾ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸಿದರು. ಉಪ ಮೇಯರ್‌ ಸ್ಥಾನಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರಿಗೆ ಕಾಂಗ್ರೆಸ್‌ನವರು ಬೆಂಬಲ ನೀಡಿದರು.

ಮೈತ್ರಿ ಬೆಂಬಲಿಸಿದ ಮರಿತಿಬ್ಬೇಗೌಡ!

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಧು ಮಾದೇಗೌಡ ಅವರಿಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದ ವಿಧಾನಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಈ ಚುನಾವಣೆಯಲ್ಲಿ ಉಲ್ಟಾ ಹೊಡೆದರು. ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು.

ಜೆಡಿಎಸ್‌ ಜೊತೆ ಅಂತರ ಕಾಯ್ದಕೊಂಡಿದ್ದ ಶಾಸಕ ಜಿ.ಟಿ.ದೇವೇಗೌಡ ಕೂಡ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಜೆಡಿಎಸ್‌ನಲ್ಲಿ ಅಸಮಾಧಾನಗೊಂಡವರು ನಮಗೆ ಮತ ಹಾಕಬಹುದು ಎಂಬ ಕಾಂಗ್ರೆಸ್ ನಿರೀಕ್ಷೆ ಹುಸಿಯಾಯಿತು.

ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಮೂರೂ ಪಕ್ಷದವರೂ ಹೇಳಿದ್ದರು. ಸೋಮವಾರ ತಡರಾತ್ರಿವರೆಗೂ ಅದಕ್ಕೆ ಬದ್ಧವಾಗಿದ್ದವು. ಆದರೆ, ಬದಲಾದ ಸನ್ನಿವೇಶದಲ್ಲಿ ಬಿಜೆಪಿ–ಜೆಡಿಎಸ್‌ ಕೈಜೋಡಿಸಿದವು. ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಕಾಂಗ್ರೆಸ್‌ ಬದ್ಧವಾಯಿತು.

ಗೆಲ್ಲುವುದಕ್ಕಾಗಿ ರೂಪಿಸಿದ್ದ ತಂತ್ರದಲ್ಲಿ ಕಾಂಗ್ರೆಸ್‌ಗೆ ಸೋಲಾಯಿತು. ಮಂಡ್ಯದ ವಿಧಾನಪರಿಷತ್‌ ಸದಸ್ಯರಾದ ದಿನೇಶ್‌ ಗೂಳಿಗೌಡ ಹಾಗೂ ಮಧು ಜಿ. ಮಾದೇಗೌಡ ಅವರಿಗೆ ಮತದಾನದ ಹಕ್ಕು ಸಿಗುವಂತೆ ತಂತ್ರ ರೂಪಿಸಿದರೂ ಪ್ರಯೋಜನವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.