
ಮೈಸೂರು: ಸ್ವಚ್ಛ ಸರ್ವೇಕ್ಷಣ್ 2025-26ರ ಅಂಗವಾಗಿ ಮಹಾನಗರಪಾಲಿಕೆಯ ವತಿಯಿಂದ ನಗರದಲ್ಲಿ ಸ್ವಚ್ಛ– ಸ್ವಾಸ್ಥ್ಯ– ತ್ಯಾಜ್ಯ ವಿಂಗಡಣೆ ಹಾಗೂ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಲು ‘ಸ್ವಚ್ಛತೆಗಾಗಿ ಸ್ಪರ್ಧಾತ್ಮಕ ಅಭಿಯಾನ’ ಹಮ್ಮಿಕೊಳ್ಳಲಾಗಿದೆ.
ವಿವಿಧ ಸಂಸ್ಥೆಗಳು, ವಾಣಿಜ್ಯ ಕೇಂದ್ರಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉತ್ತಮ ಸ್ವಚ್ಛತಾ ಕ್ರಮಗಳನ್ನು ಅಳವಡಿಸಿಕೊಂಡು, ಶ್ರೇಷ್ಠ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವವರನ್ನು ಗುರುತಿಸಿ ಗೌರವಿಸುವ ಉದ್ದೇಶವನ್ನು ಹೊಂದಲಾಗಿದೆ.
ಅಭಿಯಾನವು ಸ್ವಚ್ಛ ಶಾಲೆ, ಸ್ವಚ್ಛ ಹೋಟೆಲ್, ಸ್ವಚ್ಛ ನಿವಾಸಿ ಕಲ್ಯಾಣ ಸಂಘ/ಅಪಾರ್ಟ್‌ಮೆಂಟ್ ಸಂಘ, ಸ್ವಚ್ಛ ಸರ್ಕಾರಿ ಕಚೇರಿ, ಸ್ವಚ್ಛ ಮಾರುಕಟ್ಟೆ, ಸ್ವಚ್ಛ ಸಾರಿಗೆ ಕೇಂದ್ರ, ಸ್ವಚ್ಛ ಆಟೊರಿಕ್ಷಾ ನಿಲ್ದಾಣ ಮತ್ತು ಟಾಂಗಾ ನಿಲ್ದಾಣ, ಸ್ವಚ್ಛ ಬೀದಿ ವ್ಯಾಪಾರ ವಲಯಗಳನ್ನು ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳ ವಿಭಾಗದಲ್ಲಿ ನಡೆಯಲಿದೆ.
ಮೂಲದಲ್ಲೇ ತ್ಯಾಜ್ಯ ವಿಂಗಡಣೆ, ಏಕಬಳಕೆ ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ, ಒಟ್ಟು ಸ್ವಾಸ್ಥ್ಯ, ನಿರ್ವಹಣೆ, ಬಳಸಿದ ನೀರಿನ ನಿರ್ವಹಣೆ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುವುದು. ನೋಂದಣಿಗೆ ಜ.30 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಯನ್ನು ಪಾಲಿಕೆ ವಲಯ ಕಚೇರಿಗಳಲ್ಲಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.