
ಮೈಸೂರು: ‘ಸಂಸ್ಕೃತಿಯ ಆಚರಣೆಯು ಸಂತೋಷ ನೀಡುತ್ತದೆ. ಆದ್ದರಿಂದ ಎಲ್ಲರೂ ಪ್ರತಿ ಸಂಸ್ಕೃತಿಯನ್ನೂ ಗೌರವಿಸಬೇಕು, ವಿವಿಧತೆಯಲ್ಲಿ ಏಕತೆಯನ್ನು ಆಚರಿಸಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯ ಮಾನಸಗಂಗೋತ್ರಿಯ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಬಿ. ಪ್ರವೀಣ್ ಹೇಳಿದರು.
ಇಲ್ಲಿನ ಖಿಲ್ಲೆ ಮೊಹಲ್ಲಾದ ನಟರಾಜ ಪ್ರತಿಷ್ಠಾನದ ವಾತ್ಸಲ್ಯ ಶಿಕ್ಷಣ ಕಾಲೇಜಿನಲ್ಲಿ ಶನಿವಾರ ನಡೆದ ಸಾಂಸ್ಕೃತಿಕ ಸಮಿತಿ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
‘ಭಾರತದ ಪರಂಪರೆ ಅನನ್ಯವಾದುದು. ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಮರೆಯಬಾರದು’ ಎಂದರು.
ಗಾಯಕ ಅಮ್ಮ ರಾಮಚಂದ್ರ ಮಾತನಾಡಿ, ‘ಸಂಸ್ಕೃತಿ ಮತ್ತು ಶಿಕ್ಷಣ ಇರುವ ವ್ಯಕ್ತಿಗೆ ಸೋಲಿಲ್ಲ. ಸಂಸ್ಕೃತಿ–ಸಂಸ್ಕಾರವನ್ನು ಹೊಂದಿರುವ ವ್ಯಕ್ತಿಯ ಜೀವನ ಬಂಗಾರವಾಗುತ್ತದೆ. ಗೆದ್ದರೆ ಬೀಗಬಾರದು, ಸೋತರೆ ಕುಗ್ಗಬಾರದು’ ಎಂದು ಹೇಳಿದರು.
ವಾತ್ಸಲ್ಯ ಶಿಕ್ಷಣ ಕಾಲೇಜಿನ ಶೈಕ್ಷಣಿಕ ಸಂಯೋಜಕ ಪ್ರೊ.ಜಯಪ್ರಕಾಶ್ ಎಂ.ಆರ್., ‘ಇಂದಿನ ವಿದ್ಯಾವಂತ ಸಮಾಜ ಸಂಸ್ಕೃತಿಯನ್ನು ಮರೆತಿದೆ. ಹೀಗಾಗಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ನೈತಿಕ ಮೌಲ್ಯವನ್ನು ಕಲಿಸಬೇಕಾಗಿದೆ’ ಎಂದರು.
ಹೊಸಮಠದ ಅಧ್ಯಕ್ಷ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ಹಾಗೂ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಮಹೇಶ್ ದಳಪತಿ ಸ್ವಾಗತಿಸಿದರು, ಮೇಘನಾ ಎಂ. ನಿರೂಪಿಸಿದರು. ಅಂಬಿಕಾ ಎನ್. ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.