ADVERTISEMENT

ಮೈಸೂರು | 'ದೊಡ್ಡ ಕನಸು ಕಾಣುವಂತೆ ಸಲಹೆ'

ಜೆಎಸ್‌ಎಸ್ ವೈದ್ಯ ಕಾಲೇಜು ವಿದ್ಯಾರ್ಥಿನಿಲಯದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 6:52 IST
Last Updated 24 ಅಕ್ಟೋಬರ್ 2024, 6:52 IST
ಮೈಸೂರಿನ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಲಯದ ಕಟ್ಟಡವನ್ನು ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್‌ ನಜೀರ್‌ ಬುಧವಾರ ಉದ್ಘಾಟಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕ ಟಿ.ಎಸ್. ಶ್ರೀವತ್ಸ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್‌ ಪಾಲ್ಗೊಂಡಿದ್ದರು
ಮೈಸೂರಿನ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಲಯದ ಕಟ್ಟಡವನ್ನು ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್‌ ನಜೀರ್‌ ಬುಧವಾರ ಉದ್ಘಾಟಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕ ಟಿ.ಎಸ್. ಶ್ರೀವತ್ಸ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್‌ ಪಾಲ್ಗೊಂಡಿದ್ದರು   

ಮೈಸೂರು: ‘ವಿದ್ಯಾರ್ಥಿಗಳು ದೊಡ್ಡದಾದ ಕನಸು ಕಂಡು, ಅದಕ್ಕೆ ತಕ್ಕಂತೆ ಆಲೋಚಿಸಿದರೆ ಮಾತ್ರ ಸಾಧನೆಯ ಹಾದಿಯಲ್ಲಿ ಸಮರ್ಪಕವಾಗಿ ಸಾಗಲು ಸಾಧ್ಯವಾಗುತ್ತದೆ’ ಎಂದು ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್‌ ನಜೀರ್‌ ಹೇಳಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಜೆಎಸ್‌ಎಸ್ ಆಸ್ಪತ್ರೆಯಿಂದ ಬುಧವಾರ ಇಲ್ಲಿನ ಎಂ.ಜಿ. ರಸ್ತೆಯ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಲಯದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೊಡ್ಡ ಸಾಧನೆಗೆ ದೊಡ್ಡ ಆಲೋಚನೆ ಮಾಡಬೇಕು. ನಮ್ಮ ಆಲೋಚನೆಯೇ ನಮ್ಮ ಭವಿಷ್ಯವನ್ನು ರೂಪಿಸುತ್ತವೆ. ಆಲೋಚನೆ ಹಾಗೂ ಗುರಿಯಲ್ಲಿ ಸ್ಥಿರತೆ ಮತ್ತು ಸ್ಪಷ್ಟತೆ ಇಲ್ಲದೆ ಹೋದರೆ ಫಲಿತಾಂಶವು ನಕಾರಾತ್ಮಕವಾಗುತ್ತದೆ’ ಎಂದರು.

ADVERTISEMENT

‘ಸಮಾಜದಲ್ಲಿನ ಅಜ್ಞಾನವು ಅನೇಕ ಸಾಮಾಜಿಕ ಅನಿಷ್ಟಗಳಿಗೆ ಕಾರಣವಾಗುತ್ತಿದೆ. ಜ್ಞಾನ ಗಳಿಸುವುದೇ ಇದಕ್ಕೆ ಮದ್ದಾಗಿದೆ. ಈ ನಿಟ್ಟಿನಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠವು ಶಿಕ್ಷಣಕ್ಕೆ ಒತ್ತು ನೀಡಿರುವುದು ಶ್ಲಾಘನೀಯವಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಇದು ಹೆಮ್ಮೆಯ ವಿಚಾರ’ ಎಂದು ಶ್ಲಾಘಿಸಿದರು.

ಸಂದೇಶ ಪಾಲಿಸಬೇಕು: ‘ಸಮಾಜ ಸುಧಾರಣೆಗೆ ಸುತ್ತೂರು ಮಠದ ಕೊಡುಗೆ ಅನನ್ಯವಾದುದು. ಪುಣ್ಯ ಕ್ಷೇತ್ರ ಹಾಗೂ ಮಠಗಳು ಇಲ್ಲದೆ ಹೋಗಿದ್ದರೆ ಸಮಾಜ ಯಾವ ಕಡೆ ಸಾಗುತ್ತಿತ್ತೋ ಹೇಳಲಾಗದು. ಮಠಗಳು ಜನರಿಗೆ ದಾರಿದೀಪವಾಗಿವೆ’ ಎಂದರು.

‘12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳ ಸಂದೇಶಗಳನ್ನು ನಾವೆಲ್ಲರೂ ಪಾಲಿಸಬೇಕು. ಅದರಿಂದ ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ನಾವು ಕಂಡುಕೊಳ್ಳಬಹುದು’ ಎಂದು ಹೇಳಿದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ಅಬ್ದುಲ್ ನಜೀರ್ ಅವರು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದಾಗ ನೀಡಿದ ಮಹತ್ವದ ತೀರ್ಪುಗಳು ದೇಶಕ್ಕೆ ಮಾದರಿಯಾಗಿವೆ. ಅವರ ತೀರ್ಪುಗಳು ದೇಶವನ್ನು ಒಗ್ಗೂಡುವಂತೆ ಮಾಡಿದ್ದವು’ ಎಂದರು.

‘ಮಠಮಾನ್ಯಗಳು ಇಲ್ಲದೆ ಹೋಗಿದ್ದರೆ ದೇಶ ಹಿಂದೆ ಉಳಿದುಬಿಡುತ್ತಿತ್ತು. ಸಮಾಜ ಸುಧಾರಣೆಗೆ ಮಠಗಳ ಕೊಡುಗೆ ಅಪಾರವಾದದ್ದು. ಚಿಕಿತ್ಸಕ ರೀತಿಯಲ್ಲಿ ಅವು ಕಾರ್ಯನಿರ್ವಹಿಸುತ್ತಿವೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ದೊಡ್ಡ ಸಾಧನೆ ಮಾಡಲು ದೊಡ್ಡ ಕನಸುಗಳನ್ನು ಕಾಣಬೇಕು ಎಂಬುದಕ್ಕೆ ಅಬ್ದುಲ್ ನಜೀರ್ ಅವರೇ ಜೀವಂತ ಸಾಕ್ಷಿಯಾಗಿದ್ದಾರೆ’ ಎಂದರು.

ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಸುರೀಂದರ್ ಸಿಂಗ್, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.