
ಮೈಸೂರು: ‘ಅಮ್ಮ ಬೇಕು, ಎಲ್ಲಿದ್ದಾರೆ...’
ಅಂಬಾವಿಲಾಸ ಅರಮನೆ ಮುಂಭಾಗ ನಡೆದ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟ ಲಕ್ಷ್ಮಿ ಮನೆಯಲ್ಲಿ ಇದೇ ಮಾತು ಮಾರ್ದನಿಸುತ್ತಿದೆ. ಸ್ಫೋಟದ ಸ್ಥಳದಲ್ಲಿದ್ದ ಅವರ ಮಗಳು ನಿತ್ಯ ಅಮ್ಮನಿಗಾಗಿ ಹಾತೊರೆಯುತ್ತಿದ್ದಾಳೆ. ಸರ್ಕಾರದ ಪರಿಹಾರವೂ ಇಲ್ಲದೆ ಕುಟುಂಬ ಮಗುವಿನ ಭವಿಷ್ಯದ ಬಗ್ಗೆ ಚಿಂತಿಸುತ್ತಿದೆ.
ಸ್ಪೋಟ ನಡೆದು ಹತ್ತು ದಿನ ಕಳೆದರೂ ಸರ್ಕಾರ ಪರಿಹಾರ ಘೋಷಿಸದಿರುವುದು ಮೃತರ ಕುಟುಂಬಗಳನ್ನು ಆತಂಕಕ್ಕೆ ದೂಡಿವೆ. ಸರ್ಕಾರದ ಗಮನಸೆಳೆಯುವಷ್ಟು ಶಕ್ತಿ ಇಲ್ಲದೆ ಅಸಹಾಯಕರಾಗಿದ್ದಾರೆ.
ಮಂಡ್ಯದ ನಿವಾಸಿಯಾದ ಲಕ್ಷ್ಮಿ, ಕೆಲ ವರ್ಷಗಳ ಹಿಂದೆ ಪತಿ ರಾಜೇಶ್ ಅವರೊಂದಿಗೆ ಬೆಂಗಳೂರಿನ ಬ್ಯಾಡರಹಳ್ಳಿಗೆ ಬಂದಿದ್ದರು. ಪತಿ ಆಟೊರಿಕ್ಷಾ ಚಾಲಕರು. ಲಕ್ಷ್ಮಿ ಅವರದ್ದು ಟೈಲರ್ ವೃತ್ತಿ. ಬೆಳವಾಡಿಯಲ್ಲಿನ ನಾದಿನಿಯ ಮನೆಗೆ ಬಂದ ಅವರು ಅರಮನೆ ಬಳಿಯಿಂದ ತೆರಳುತ್ತಿರುವಾಗ ಸಿಲಿಂಡರ್ ಸ್ಫೋಟವಾಗಿ, ಕರುಳು ಹೊರ ಬಂದಿತ್ತು. ಕೆ.ಆರ್ ಆಸ್ಪತ್ರೆಯಲ್ಲಿ ಡಿ.26ರಂದು ಮೃತಪಟ್ಟರು.
ಮಗಳು 4ನೇ ತರಗತಿ ಓದುತ್ತಿದ್ದಾಳೆ. ಕಣ್ಣೆದುರೇ ನಡೆದ ಘಟನೆಯಲ್ಲಿ ತಾಯಿ ಗಾಯಗೊಂಡಿದ್ದನ್ನು ನೋಡಿ ಬೆಚ್ಚಿದ ಆಕೆ ಆ ಭಯದಿಂದ ಇನ್ನೂ ಹೊರಬಂದಿಲ್ಲ.
‘ಮಗುವಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂದು ಹಗಲಿರುಳು ದುಡಿದು ಹಣ ಸಂಗ್ರಹಿಸಿ ಓದುತ್ತಿದ್ದ ಲಕ್ಷ್ಮಿ ತಮ್ಮದಲ್ಲದ ತಪ್ಪಿಗೆ ಬಲಿಯಾಗಿದ್ದಾರೆ. ಆ ಮಗುವಿನ ಭವಿಷ್ಯ ಹೇಗೆ ಎಂಬ ಚಿಂತೆ ಕುಟುಂಬವನ್ನು ಕಾಡುತ್ತಿದೆ.
‘ಬಾಲಕಿಯು ಲಕ್ಷ್ಮಿ ಅವರ ಸಹೋದರಿಯ ಆರೈಕೆಯಲ್ಲಿದ್ದಾಳೆ. ಸರ್ಕಾರವು ಮಗುವಿನ ಶಿಕ್ಷಣಕ್ಕಾದರೂ ಸಹಾಯ ಮಾಡಬೇಕು’ ಎಂಬುದು ಕುಟುಂಬದವರ ಕೋರಿಕೆ.
ಅರಮನೆಯ ದೀಪಾಲಂಕಾರ ವೀಕ್ಷಿಸಲು ಬಂದ ನಂಜನಗೂಡಿನ ಚಾಮಲಾಪುರ ಬೀದಿಯ ನಿವಾಸಿ ಮಂಜುಳಾ ಕುಟುಂಬವೂ ತೊಂದರೆಯಲ್ಲಿದೆ. ಈ ಕುಟುಂಬ ಜೀವನ ನಿರ್ವಹಣೆಗಾಗಿ ಆಡು ಸಾಕಣೆ ಮಾಡುತ್ತಿದೆ. ಮಂಜುಳಾ ಅವರಿಗೆ ತಂದೆ ಹಾಗೂ ಅಣ್ಣ ಇದ್ದಾರೆ.
ಗಾಯಾಳುಗಳನ್ನು ವಿಚಾರಿಸಲು ಬಂದಿದ್ದ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ‘ಗಾಯಾಳುಗಳ ಚಿಕಿತ್ಸೆಯ ವೆಚ್ಚ ಸರ್ಕಾರ ಭರಿಸುತ್ತದೆ’ ಎಂದು ತಿಳಿಸಿದ್ದರು. ಲಕ್ಷ್ಮಿ ಅವರ ಕುಟುಂಬವು ಪರಿಹಾರಕ್ಕಾಗಿ ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಸಿಲಿಂಡರ್ ಸ್ಪೋಟದಲ್ಲಿ ಮೃತಪಟ್ಟವರ ಕುಟುಂಬದವರು ಪರಿಹಾರಕ್ಕಾಗಿ ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿ ಸಂಬಂಧಿಸಿದವರ ಗಮನಕ್ಕೆ ತರುವೆಜಿ. ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.