ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಡ್ರೋನ್ ಶೋ ಪ್ರಾಯೋಗಿಕ ಪ್ರದರ್ಶನವನ್ನು ಸೆ.28 ಮತ್ತು 29ರಂದು ನಡೆಸಲು ಸಮಯ ನಿಗದಿಪಡಿಸಲಾಗಿದೆ.
ಇಲ್ಲಿನ ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸಮಯ ನಿಗದಿಪಡಿಸಿದರು.
‘ವಿದ್ಯುತ್ ದೀಪಾಲಂಕಾರ ಹಾಗೂ ಡ್ರೋನ್ ಶೋ ಯಶಸ್ಸಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಈ ಬಾರಿ ಏರ್ ಶೋ ಕೂಡ ನಡೆಯಲಿದೆ. ಇದರ ನಡುವೆ ಡ್ರೋನ್ ಶೋ ಹಮ್ಮಿಕೊಳ್ಳಬೇಕಿದೆ. ಅಲ್ಲದೆ, ಪಂಜಿನ ಕವಾಯತು ತಾಲೀಮು ಸಹ ಇರುವುದರಿಂದ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳಬೇಕಾಗಿದೆ’ ಎಂದರು.
‘ಡ್ರೋನ್ ಶೋ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅಗತ್ಯವಿರುವ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಎಂಡಿಎನಿಂದ ಮಾಡಿಕೊಳ್ಳಬೇಕು. ಸಂಗೀತ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಸಿದ್ಧತೆ ಕೈಗೊಳ್ಳಬೇಕು’ ಎಂದು ತಿಳಿಸಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲರಾಜು, ‘ನಗರದ ಪ್ರಮುಖ ವೃತ್ತ, ರಸ್ತೆಗಳು ಹಾಗೂ ಇನ್ನಿತರ ಸ್ಥಳಗಳಲ್ಲಿ ದೀಪಾಲಂಕಾರ ಮಾಡಲಾಗುವುದು’ ಎಂದು ತಿಳಿಸಿದರು.
ವಿನ್ಯಾಸ, ವಿವಿಧ ಬಗೆಯ ಕಲಾಕೃತಿಗಳನ್ನು ನಿರ್ಮಿಸಿರುವ ಕುರಿತು ಮಾಹಿತಿ ನೀಡಿದರು.
‘ಸೆ.28 ಮತ್ತು 29ರಂದು ನಡೆಯುವ ಡ್ರೋನ್ ಶೋ ಪ್ರಾಯೋಗಿಕ ಪ್ರದರ್ಶನ ಹಾಗೂ ಅ.1 ಮತ್ತು 2ರಂದು ಡ್ರೋನ್ ಶೋ ಪ್ರಮುಖವಾಗಿದೆ. ಡ್ರೋನ್ ಶೋನಲ್ಲಿ ಖ್ಯಾತ ಗಾಯಕರಿಂದ ಸಂಗೀತ ಸಂಜೆ ಹಮ್ಮಿಕೊಳ್ಳುವುದಕ್ಕೂ ಚಿಂತನೆ ನಡೆಸಲಾಗಿದೆ’ ಎಂದರು.
ಎಂಡಿಎ ಆಯುಕ್ತ ರಕ್ಷಿತ್, ನಿಗಮದ ತಾಂತ್ರಿಕ ನಿರ್ದೇಶಕ ಡಿ.ಜೆ.ದಿವಾಕರ್, ಮೈಸೂರು ವೃತ್ತದ ಎಸ್‌ಇ ಸುನೀಲ್, ಪ್ರಧಾನ ವ್ಯವಸ್ಥಾಪಕ ಎಲ್.ಲೋಕೇಶ್ ಪಾಲ್ಗೊಂಡಿದ್ದರು.
ಡ್ರೋನ್ ಶೋ ಯಶಸ್ಸಿಗೂ ಕ್ರಮಕ್ಕೆ ಸೂಚನೆ ಸೆ.28, 29ರಂದು ಪ್ರಾಯೋಗಿಕ ಪ್ರದರ್ಶನ ಎಂಡಿಎನಿಂದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.