ಮೈಸೂರು: ಅನನ್ಯ ಪ್ರತಿಭೆಯ ಮೂಲಕ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಕೇರಳದ ಪ್ರಖ್ಯಾತ ಮ್ಯೂಸಿಕ್ ಬ್ಯಾಂಡ್ ‘ತೈಕುಡಂ ಬ್ರಿಡ್ಜ್’, ಗಜಲ್ ಗಾಯಕ ಮತ್ತು ಭಾರತೀಯ ಫ್ಯೂಷನ್ ಸಂಗೀತದ ಪ್ರವರ್ತಕ ‘ಪದ್ಮಶ್ರೀ’ ಪುರಸ್ಕೃತ ಹರಿಹರನ್ ಹಾಗೂ ಖ್ಯಾತ ಗಾಯಕ ಅಭಿಷೇಕ್ ರಘುರಾಮ್ ಈ ಬಾರಿಯ ದಸರಾ ಮಹೋತ್ಸವದಲ್ಲಿ ಅಂಬಾವಿಲಾಸ ಅರಮನೆ ವೇದಿಕೆಯಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಈ ಬಾರಿ ಸೆ.22ರಿಂದ ಅ.2ರವರೆಗೆ ನಡೆಯಲಿದೆ. ಇದರಲ್ಲಿ ಅರಮನೆ ಆವರಣದ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಗಳಲ್ಲಿ ಸೇರಿವೆ. ಇಲ್ಲಿಗೆ ಹೆಚ್ಚಿನ ಜನರನ್ನು ಸೆಳೆಯಬೇಕು, ಸದಭಿರುಚಿಯ ಸಂಗೀತ ರಸಿಕರನ್ನು ಆಕರ್ಷಿಸಬೇಕೆಂದು ಸಂಗೀತ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಪ್ರಮುಖ ಹಾಗೂ ಜನಪ್ರಿಯ ಗಾಯಕರು– ಕಲಾವಿದರನ್ನು ಆಹ್ವಾನಿಸಲಾಗಿದೆ.
ಸೆ.22ರಂದು ಸಂಜೆ 5ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಅಂದೇ ಸಂಗೀತ ಕ್ಷೇತ್ರದ ಅನನ್ಯ ಸಾಧಕರಿಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಯಾರ‍್ಯಾರು ಭಾಗಿ?: ಈ ಬಾರಿ ಪದ್ಮಶ್ರೀ ಹರಿಹರನ್ ಗಜಲ್ ಮತ್ತು ಶಾಸ್ತ್ರೀಯ ಫ್ಯೂಷನ್ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ. ಕೇರಳದ ತೈಕುಡಂ ಬ್ರಿಡ್ಜ್ ಬ್ಯಾಂಡ್ ತಂಡದವರು ‘ಸಮಕಾಲೀನ ಶಾಸ್ತ್ರೀಯ ವಾದ್ಯಸಂಗೀತ’ ನೀಡಲಿದ್ದಾರೆ. ಅಭಿಷೇಕ್ ರಘುರಾಂ ಕರ್ನಾಟಕ ಶಾಸ್ತ್ರೀಯ ಸಂಗೀತ, ಮೈಸೂರು ಮಂಜುನಾಥ್ ವಯೋಲಿನ್ ವಾದನ, ಗಾಯಕಿ ಅನನ್ಯಾ ಭಟ್ ಜನಪದ ಗಾನ ವೈಭವ ತಂದಿಡಲಿದ್ದಾರೆ. ನೃತ್ಯ ಕಲಾವಿದ ಶ್ರೀಧರ್ ಜೈನ್ ಅವರಿಂದ ‘ಶಿವತಾಂಡವ ನೃತ್ಯ’ ಅರಮನೆ ವೇದಿಕೆಗೆ ರಂಗು ತುಂಬಲಿದೆ.
ಭಾರತೀಯ ಸಿತಾರ್ ವಾದಕ ಮತ್ತು ಸಂಗೀತ ಸಂಯೋಜಕ ಪಂಡಿತ್ ನೀಲಾದ್ರಿ ಕುಮಾರ್ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ವಾದನ ಶೈಲಿ ಹಾಗೂ ಜುಗಲ್‌ಬಂದಿಯಿಂದ (ಸಿತಾರ್ ಮತ್ತು ಎಲೆಕ್ಟ್ರಾನಿಕ್ ಗಿಟಾರ್‌ನ ಸಂಯೋಜನೆ) ಪ್ರಸಿದ್ಧರಾಗಿರುವ ಅವರು, ಸೆ.27ರಂದು ಸಂಜೆ ಸಂಗೀತ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಮೈಸೂರಿನವರೇ ಆದ ಗಾಯಕ ವಿಜಯಪ್ರಕಾಶ್ 28ರಂದು ಸಂಗೀತಯಾನದಲ್ಲಿ ವಿಹರಿಸಲಿದ್ದಾರೆ.
ಚಿಲ್ಕುಂದ ಸಹೋದರಿಯರು: ‘ಚಿಲ್ಕುಂದ ಸಹೋದರಿಯರಾದ ಲಕ್ಷ್ಮಿ ಹಾಗೂ ಇಂದೂ ನಾಗರಾಜ್ ಸಂಗೀತದ ರಸದೌತಣ ಉಣಬಡಿಸಲಿದ್ದಾರೆ. ತಂಬೂರಿ ಪದಗಳ ಜಾನಪದ ಗಾಯಕ ಮೈಸೂರು ಗುರುರಾಜ್, ಧಾರವಾಡದ ಮೊಹಿಸಿನ್ ಖಾನ್ ಪಾಲ್ಗೊಳ್ಳಲಿದ್ದಾರೆ. 26ಕ್ಕೆ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ನೀಡಲಿದೆ’ ಎಂದು ಸಾಂಸ್ಕೃತಿಕ ದಸರಾ ಉಪ ಸಮಿತಿಯ ಕಾರ್ಯದರ್ಶಿಯೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ‘ಪ್ರಜಾವಾಣಿ’ಗೆ ವಿವರ ನೀಡಿದರು.
10 ವೇದಿಕೆಗಳಲ್ಲಿ ಸಾಂಸ್ಕೃತಿಕ ಸೌರಭ ಅನಾವರಣ 8 ದಿನ ಅರಮನೆ ವೇದಿಕೆಯಲ್ಲಿ ಕಾರ್ಯಕ್ರಮ 550 ಕಲಾತಂಡಗಳು ಭಾಗಿ 8–10ಸಾವಿರ ಕಲಾವಿದರಿಗೆ ಅವಕಾಶ
ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಮೈಸೂರು ಮೂಲದವರಿಗೆ ಹೆಚ್ಚಿನ ಆದ್ಯತೆಯನ್ನು ಅರಮನೆ ವೇದಿಕೆಯಲ್ಲಿ ಕೊಡುತ್ತಿದ್ದೇವೆಎಂ.ಡಿ.ಸುದರ್ಶನ್ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಹೊರ ರಾಜ್ಯಗಳಿಂದಲೂ ಅರ್ಜಿ
‘ಒಟ್ಟು ₹2 ಕೋಟಿ ಅನುದಾನ ಕೋರಿದ್ದೇವೆ. ಕಾರ್ಯಕ್ರಮಕ್ಕೆ ಅವಕಾಶ ಕೋರಿ ಶುಕ್ರವಾರ ಸಂಜೆವರೆಗೆ 1470 ಅರ್ಜಿಗಳು ಬಂದಿವೆ. ಅವುಗಳಲ್ಲಿ ಕೇರಳ ಆಂಧ್ರಪ್ರದೇಶ ತಮಿಳುನಾಡು ಮಹಾರಾಷ್ಟ್ರ ಪಶ್ಚಿಮ ಬಂಗಾಳ ನವದೆಹಲಿ ಒಡಿಶಾ ರಾಜ್ಯಗಳಿಂದಲೂ ಇ–ಮೇಲ್ ಅಂಚೆ ಮೂಲಕ ಅರ್ಜಿಗಳು ಬಂದಿವೆ. ಅವುಗಳನ್ನು ಪರಿಶೀಲಿಸಿ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸುದರ್ಶನ್ ತಿಳಿಸಿದರು. ‘ಇದು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗೆ ಇರುವ ಬೇಡಿಕೆಗೆ ಕನ್ನಡಿಯಾಗಿದೆ. ಕಲಾವಿದರು ಹಾಗೂ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರಮನೆ ವೇದಿಕೆಯ ಕಾರ್ಯಕ್ರಮಗಳಿಗೆ ಹೆಚ್ಚಿನ ಜನರು ಸೇರುವಂತೆ ಮಾಡಲೆಂದು ಚೌಕಟ್ಟಿನ ಒಳಗೆ ಉತ್ತಮ ಕಲಾತಂಡಗಳನ್ನು ಸಂಯೋಜನೆ ಮಾಡಿದ್ದೇವೆ’ ಎಂದರು. ‘ಚಿಕ್ಕಗಡಿಯಾರ ಆವರಣದಲ್ಲಿ ಜಾನಪದ ಕಾರ್ಯಕ್ರಮ ಪುರಭವನದಲ್ಲಿ ಪೌರಾಣಿಕ ನಾಟಕ ಕಿರುರಂಗಮಂದಿರದಲ್ಲಿ ನಾಟಕ ಕಲಾಮಂದಿರ ರಮಾಗೋವಿಂದ ರಂಗಮಂದಿರದಲ್ಲಿ ಎಲ್ಲ ಪ್ರಕಾರದ ಕಾರ್ಯಕ್ರಮಗಳು ನಾದಬ್ರಹ್ಮ ಸಂಗೀತ ಸಭಾ ಗಾನಭಾರತಿ ವೀಣೆಶೇಷಣ್ಣ ಭವನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ನಂಜನಗೂಡಿನಲ್ಲೂ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.