ಮೈಸೂರು: ದುಬಾರೆ ಆನೆ ಶಿಬಿರದ ‘ಸುಗ್ರೀವ’ 5,545 ಕೆ.ಜಿ ತೂಗುವ ಮೂಲಕ ದಸರಾ ಆನೆಗಳಲ್ಲೇ ಹೆಚ್ಚು ತೂಕದ ಆನೆಯಾಗಿ ಹೊರ ಹೊಮ್ಮಿದನು. ಈ ಹಿಂದೆ ಕಿರಿಯ ಆನೆ ‘ಭೀಮ’ 5,465 ಕೆ.ಜಿ ತೂಗಿದ್ದ.
ಇಲ್ಲಿನ ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ಎರಡನೇ ತಂಡದ 5 ದಸರಾ ಆನೆಗಳ ತೂಕ ಪರೀಕ್ಷೆಯು ನಗರದ ಧನ್ವಂತರಿ ರಸ್ತೆಯಲ್ಲಿರುವ ‘ಎಲೆಕ್ಟ್ರಾನಿಕ್ ವ್ಹೇಬ್ರಿಡ್ಜ್’ನಲ್ಲಿ ಮಂಗಳವಾರ ನಡೆಯಿತು.
ಕಳೆದ ವರ್ಷದ ದಸರೆಯಲ್ಲಿ ‘ಸುಗ್ರೀವ’ 5,190 ಕೆ.ಜಿ ತೂಗಿದ್ದನು. ವರ್ಷದಿಂದ ವರ್ಷಕ್ಕೆ ತೂಕ ಹೆಚ್ಚಿಸಿಕೊಂಡಿರುವ ಅವನಿಗೀಗ 43 ವರ್ಷ. ಇದೇ ಮೊದಲ ಬಾರಿ ದಸರೆಗೆ ಆಗಮಿಸಿರುವ ಅಜಾನುಬಾಹು ಆನೆ ಮತ್ತಿಗೋಡು ಶಿಬಿರದ ‘ಶ್ರೀಕಂಠ’ 5,540 ಕೆ.ಜಿ ತೂಗಿ ಎರಡನೇ ಬಲಶಾಲಿ ಎಂದು ಸಾಬೀತು ಮಾಡಿದನು.
ದುಬಾರೆ ಆನೆ ಶಿಬಿರದ 42 ವರ್ಷದ ‘ಗೋಪಿ’ 4,990 ಕೆ.ಜಿ ತೂಕ ಹೊಂದಿದ್ದರೆ, 44 ವರ್ಷದ ರೂಪಾ 3,320 ಕೆ.ಜಿ ಹಾಗೂ ಗಜಪಡೆಯ ಕಿರಿಯ ಸದಸ್ಯೆ 11 ವರ್ಷದ ‘ಹೇಮಾವತಿ’ 2,440 ಕೆ.ಜಿ ತೂಗಿದಳು.
ಒಟ್ಟಿಗೆ ಬಂದ ಆನೆಗಳು: ಎರಡನೇ ತಂಡದ 5 ಆನೆಗಳು ತೂಕ ಪರೀಕ್ಷೆಗೆ ಗಜಪಡೆಯ ಮೊದಲ ತಂಡದ ‘ಅಭಿಮನ್ಯು’ ನೇತೃತ್ವದ 9 ಆನೆಗಳೊಂದಿಗೆ ಹೊರಟವು. ಅದರಿಂದ ಆಲ್ಬರ್ಟ್ ವಿಕ್ಟರ್ ರಸ್ತೆ, ಸಯ್ಯಾಜಿರಾವ್ ರಸ್ತೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
‘ಅಭಿಮನ್ಯು’ ಸಾರಥ್ಯದಲ್ಲಿ ‘ಲಕ್ಷ್ಮಿ’, ‘ಭೀಮ’, ‘ಏಕಲವ್ಯ’, ‘ಗೋಪಿ’, ‘ಧನಂಜಯ’, ‘ಸುಗ್ರೀವ’, ‘ಮಹೇಂದ್ರ’, ‘ಪ್ರಶಾಂತ’, ‘ಕಾವೇರಿ’, ‘ಕಂಜನ್’, ‘ರೂಪ’, ಶ್ರೀಕಂಠ’ ಹಾಗೂ ‘ಹೇಮಾವತಿ’ ಆನೆಗಳು ಅರಮನೆಯ ಬಲರಾಮ ದ್ವಾರದಿಂದ ಹೊರಬಂದು ಚಾಮರಾಜ ವೃತ್ತ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿದವು. ಸರ್ಕಾರಿ ಆಯುರ್ವೇದ ಕಾಲೇಜು ವೃತ್ತ ಬಳಸಿ ಕೆಲ ಸಮಯ ವಿಶ್ರಾಂತಿ ಪಡೆದು ಅರಮನೆಯತ್ತ ಹೆಜ್ಜೆ ಹಾಕಿದವು.
ಆನೆಗಳ ಸಾಲು ಉದ್ದವಿದ್ದರಿಂದ ನಾಗರಿಕರು, ವಾಹನ ಸವಾರರು ಆನೆಗಳನ್ನು ಕಂಡು ಸಂಭ್ರಮಿಸಿದರು. ಡಿಸಿಎಫ್ ಐ.ಬಿ.ಪ್ರಭುಗೌಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.