ಮೈಸೂರು: ದಸರೆಯಲ್ಲಿ ಮನಸೂರೆಗೊಳ್ಳುವ ವಿದ್ಯುತ್ ದೀಪಾಲಂಕಾರಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸೋಮವಾರ ಚಾಲನೆ ನೀಡಿದರು.
ಸಂಜೆಯಾಗುತ್ತಿದ್ದಂತೆಯೇ ಆಕರ್ಷಕ ದೀಪಗಳು ನಗರವನ್ನು ಬೆಳಗಿದವು. ಇನ್ಮುಂದೆ, 21 ದಿನಗಳವರೆಗೆ ಇವು ಮಿನುಗಲಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯಲಿವೆ.
ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಚಪ್ಪರದ ಆವರಣದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು. ಈ ವರ್ಷವೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದಿಂದ ದೀಪಾಲಂಕಾರ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತಲೂ ಹೆಚ್ಚು ಆಕರ್ಷಿಸುತ್ತಿದೆ.
ಈ ಬಾರಿ ನಗರದ 136 ಕಿ.ಮೀ. ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಇದರೊಂದಿಗೆ ನಗರದ ಪ್ರಮುಖ ಕಡೆಗಳಲ್ಲಿ ಎಲ್ಇಡಿ ಬಲ್ಬ್ ಗಳಿಂದ ನಿರ್ಮಿಸಲಾದ 80 ವಿವಿಧ ಪ್ರತಿಕೃತಿಗಳನ್ನು ಇರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರ ನಿರ್ದೇಶನದಂತೆ ಒಟ್ಟು 21 ದಿನಗಳವರೆಗೆ ವಿದ್ಯುತ್ ದೀಪಾಲಂಕಾರ ಇರಲಿದೆ. ಇದಕ್ಕಾಗಿ 300 ಕಿ.ಲೋ.ವಾಟ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ.
ಈ ಬಾರಿ ಕೋಲ್ಕತ್ತಾ ಮಾದರಿ ಲೈಟಿಂಗ್ ಅಳವಡಿಸಲಾಗಿದ್ದು, ಮೆರಗು ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ. ಅರಮನೆ ಸುತ್ತ ಸೇರಿದಂತೆ ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿರಸ್ತೆ ಜೊತೆಗೆ ಹೊರವಲಯದ ಪ್ರಮುಖ ಹೆದ್ದಾರಿಗಳಿಗೂ ದೀಪಾಲಂಕಾರ ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿರುವ ಪ್ರಮುಖ ವೃತ್ತಗಳೂ ಕಂಗೊಳಿಸುತ್ತಿವೆ. ದೊಡ್ಡಕೆರೆ ಮೈದಾನ, ಕೆ.ಆರ್.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್, ಎಲ್‌ಐಸಿ ವೃತ್ತ ಸೇರಿದಂತೆ ವಿವಿಧೆಡೆ ಹಲವು ಕಲಾಕೃತಿಗಳನ್ನು ನಿರ್ಮಿಸಲಾಗಿದೆ.
‘ಈ ಬಾರಿಯ ದಸರಾ ದೀಪಾಲಂಕಾರವನ್ನು ಹೆಚ್ಚು ಆಕರ್ಷಕವಾಗಿ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಗಿನ್ನಿಸ್ ದಾಖಲೆ ಉದ್ದೇಶವಿದೆ. ಮುಖ್ಯಮಂತ್ರಿ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ. ಜನರು ದೀಪಾಲಂಕಾರವನ್ನು ಕಣ್ತುಂಬಿಕೊಳ್ಳುವ ಮೂಲಕ ದಸರೆಯನ್ನು ಆನಂದಿಸಲಿ’ ಎಂದು ಜಾರ್ಜ್ ಹೇಳಿದರು.
ಶಾಸಕ ತನ್ವೀರ್ ಸೇಠ್, ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು, ಕೆ.ಜೆ. ಜಾರ್ಜ್ ಅವರ ಪತ್ನಿ ಸುಜಾ ಜಾರ್ಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.